Advertisement

ಕ್ಲೀನ್‌ಸ್ವೀಪ್‌; ಭಾರತದ ಗುರಿ

10:07 AM Jan 22, 2017 | |

ಕೋಲ್ಕತಾ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತೂಂದು ಕನಸಿಗೆ ಹತ್ತಿರವಾಗಿದ್ದಾರೆ. ಇಂಗ್ಲೆಂಡ್‌ ವಿರುದ್ಧ ಮೊದಲೆರಡು ಏಕದಿನ ಪಂದ್ಯಗಳನ್ನು ಗೆದ್ದ ಬಳಿಕ ಸರಣಿಯ ಅಂತಿಮ ಪಂದ್ಯವನ್ನು ಜಯಿಸಿ 3-0 ಅಂತರದಿಂದ ಕ್ಲೀನ್‌ಸ್ವೀಪ್‌ಗೆಯುವ ಗುರಿ ಇಟ್ಟುಕೊಂಡಿದ್ದಾರೆ. ಈಡನ್‌ಗಾರ್ಡನ್‌ನಲ್ಲಿ ರವಿವಾರ ಭಾರೀ ಅಭಿಮಾನಿಗಳ ಬೆಂಬಲದೊಂದಿಗೆ ಭಾರತ ಇಂಗ್ಲೆಂಡ್‌ ತಂಡವನ್ನು ಎದುರಿಸಲು ಸಜ್ಜಾಗಿದೆ. ಇದೇ ವೇಳೆ ಅಂತಿಮ ಪಂದ್ಯದಲ್ಲಾದರೂ ತಿರುಗೇಟು ನೀಡಲು ಇಂಗ್ಲೆಂಡ್‌ ಪ್ರಯತ್ನಿಸುವ ಸಾಧ್ಯತೆಯಿದೆ.

Advertisement

ಭಾರತಕ್ಕಿದೆ ಕೊಹ್ಲಿ-ಕೇದಾರ್‌ ಬಲ: ಟೀಂ ಇಂಡಿಯಾ ಬ್ಯಾಟಿಂಗ್‌ನಲ್ಲಿ ಹೆಚ್ಚು ಬಲಿಷ್ಠವಾಗಿದೆ. ಸ್ವತಃ ನಾಯಕ ವಿರಾಟ್‌ ಕೊಹ್ಲಿ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಎದುರಾಳಿ ತಂಡಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಎರಡನೇ ಪಂದ್ಯದಲ್ಲಿ ದೊಡ್ಡ ಮೊತ್ತ ಹೊಡೆಯಲು ವಿಫ‌ಲರಾದರೂ ಸೂಕ್ಷ್ಮಸಂದರ್ಭಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡು ಭಾರತ ತಂಡದ ಗೆಲುವಿಗೆ ಕಾರಣರಾದರು. ಇನ್ನೂ ಕೇದಾರ್‌ ಜಾಧವ್‌ ಕೂಡ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ ಆಗಿ ಹೊರಹೊಮ್ಮಿರುವುದು ಭಾರತ ಬ್ಯಾಟಿಂಗ್‌ ವಿಭಾಗವನ್ನು ಮತ್ತಷ್ಟು ಸದೃಢಗೊಳಿಸಿದೆ.

ನೆರವಾಗುತ್ತಿರುವ ಯುವಿ-ಧೋನಿ: ಫಾರ್ಮ್ ಕಳೆದುಕೊಂಡಿದ್ದ ಯುವರಾಜ್‌ ಮತ್ತೆ ಗತವೈಭವಕ್ಕೆ ಮರಳಿದ್ದಾರೆ. ಸಿಂಗ್‌ ಸಿಕ್ಕಿದ ಅವಕಾಶದಲ್ಲಿ ಯಶಸ್ವಿಯಾಗಿದ್ದಾರೆ. 2ನೇ ಏಕದಿನ ಪಂದ್ಯದಲ್ಲಿ ಯುವಿ ಅಕ್ಷರಶಃ ಆಂಗ್ಲ ಬೌಲರ್‌ಗಳನ್ನು ದಂಡಿಸಿದ್ದು. ಗೆಳೆಯ ಧೋನಿ ಜತೆಗೂಡಿ ಇಂಗ್ಲೆಂಡ್‌ ಬೌಲರ್‌ಗಳನ್ನು ಚೆಂಡಾಡಿದ್ದು. ಭಾರತ ತಂಡಕ್ಕೆ ಗೆಲುವಿನ ಉಡುಗೊರೆ ನೀಡಿದ್ದು ಅಭಿಮಾನಿಗಳಿಗೆ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.

ವಿಫ‌ಲವಾಗುತ್ತಿರುವ ಅಗ್ರ ಕ್ರಮಾಂಕ: ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಕೈಕೊಡುತ್ತಿದ್ದಾರೆ. ಕೆ.ಎಲ್‌.ರಾಹುಲ್‌, ಶಿಖರ್‌ ಧವನ್‌ ನಿರೀಕ್ಷಿತ ಮಟ್ಟಕ್ಕೆ ಪ್ರದರ್ಶನ ನೀಡಿಲ್ಲ. ರಾಹುಲ್‌ ಮೊದಲ ಪಂದ್ಯದಲ್ಲಿ ವೈಯಕ್ತಿಕ 8 ರನ್‌ ಗಳಿಸಿದರು. 2ನೇ ಪಂದ್ಯದಲ್ಲಿ 5 ರನ್‌ಗೆ ವಿಕೆಟ್‌ ಒಪ್ಪಿಸಿದ್ದರು. ಇನ್ನೂ ಧವನ್‌ ಮೊದಲ ಪಂದ್ಯದಲ್ಲಿ 1 ರನ್‌, 2ನೇ ಪಂದ್ಯದಲ್ಲಿ ಕೇವಲ 11 ರನ್‌ ಗಳಿಸಲಷ್ಟೇ ಶಕ್ತರಾಗಿದ್ದಾರೆ.

ಭಾರತಕ್ಕೆ ಬೌಲಿಂಗ್‌ನದ್ದೇ ಚಿಂತೆ: ಭಾರತ ಎರಡೂ ಪಂದ್ಯಗಳಲ್ಲಿ ಗೆದ್ದಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಬ್ಯಾಟಿಂಗ್‌. ಭಾರತ ಎಷ್ಟೇ ರನ್‌ ಒಟ್ಟುಗೂಡಿಸಿದರೂ ಇಂಗ್ಲೆಂಡ್‌ ರನ್‌ ಚೇಸ್‌ ಮಾಡುವಲ್ಲಿ ಅಥವಾ ರನ್‌ ಒಟ್ಟುಗೂಡಿಸುವಲ್ಲಿ ಸ್ವಲ್ಪ ಮಟ್ಟಿನ ಯಶಸ್ಸು ಕಂಡಿದೆ. ಎರಡೂ ಪಂದ್ಯಗಳಲ್ಲಿ ಭಾರತ 340ಕ್ಕೂ ಹೆಚ್ಚು ರನ್‌ ಬಿಟ್ಟುಕೊಂಡಿದೆ. ಹಾರ್ದಿಕ್‌ ಪಾಂಡ್ಯ, ಬೂಮ್ರಾ, ರವೀಂದ್ರ ಜಡೇಜ, ಆರ್‌.ಅಶ್ವಿ‌ನ್‌, ಉಮೇಶ್‌ ಯಾದವ್‌, ಭುವನೇಶ್ವರ್‌ ಕುಮಾರ್‌ ಎದುರಾಳಿ ರನ್‌ಗೆ ಕಡಿವಾಣ ಹಾಕಲು ವಿಫ‌ಲರಾಗುತ್ತಿದ್ದಾರೆ.

Advertisement

ಇಂಗ್ಲೆಂಡ್‌ಗೆ ಕೈಕೊಡುತ್ತಿದೆ ಅದೃಷ್ಟ: ಇಂಗ್ಲೆಂಡ್‌ ತಂಡ ಸೋಲಲು ಕಾರಣ ಕೈ ಕೊಡುತ್ತಿರುವ ಅದೃಷ್ಟ ಎಂದರೆ ತಪ್ಪಾಗಲಾರದು. ಆರಂಭಿಕರಾದ ಹೇಲ್ಸ್‌, ಜಾಸನ್‌ ರಾಯ್‌ ಶ್ರೇಷ್ಠ ಇನ್ನಿಂಗ್ಸ್‌ ಕಟ್ಟುತ್ತಿದ್ದಾರೆ. ಅಗ್ರಕ್ರಮಾಂಕದಲ್ಲಿ ಜೋ ರೂಟ್‌, ಇಯಾನ್‌ ಮಾರ್ಗನ್‌ ಸಮರ್ಥ ಬ್ಯಾಟಿಂಗ್‌ ಪ್ರದರ್ಶಿಸುತ್ತಿದ್ದಾರೆ. ಕೆಳಕ್ರಮಾಂಕದಲ್ಲಿ ಮೋಯಿನ್‌ ಅಲಿ, ಬಟ್ಲರ್‌, ಸ್ಟೋಕ್ಸ್‌ ಸ್ಫೋಟಕ ಆಟ ಸಂಘಟಿಸಿದರೂ ಇಂಗ್ಲೆಂಡ್‌ಗೆ ಗೆಲುವು ಮರೀಚಿಕೆಯಾಯಿತು. ಕೊನೆಯ ಪಂದ್ಯದಲ್ಲಾದರೂ ಗೆದ್ದು ನೆಮ್ಮದಿಯ ನಿಟ್ಟುಸಿರು ಬಿಡುವತ್ತ ಇಂಗ್ಲೆಂಡ್‌ ಚಿತ್ತವನ್ನು ನೆಟ್ಟಿದೆ.

ಧವನ್‌ ಬದಲು ರಹಾನೆ?
ಕೋಲ್ಕತಾ: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಎಡಗೈ ಬೆರಳಿಗೆ ಗಾಯಮಾಡಿಕೊಂಡಿದ್ದಾರೆ. 
ಕೋಲ್ಕತಾದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿದ್ದಾರೆ. ಹೀಗಾಗಿ ಇಂಗ್ಲೆಂಡ್‌ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. 

ಪಂದ್ಯ ಆರಂಭ ಅಪರಾಹ್ನ 1.30 ಪ್ರಸಾರ: ಡಿಡಿ, ಸ್ಟಾರ್‌ ನ್ಪೋರ್ಟ್ಸ್ 1

Advertisement

Udayavani is now on Telegram. Click here to join our channel and stay updated with the latest news.

Next