ಕಟೀಲು: ನಿರಂತರ ಸ್ವಚ್ಛ ಕಟೀಲು ಘೋಷಣೆಯಡಿ ರವಿವಾರ ದುರ್ಗಾಪರಮೇಶ್ವರೀ ದೇವರ ಸಾನ್ನಿಧ್ಯದ ಶ್ರೀ ಕ್ಷೇತ್ರ ಕಟೀಲಿನ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸುಮಾರು 600 ಶ್ರಮದಾನಿಗಳು ಭಾಗವಹಿಸಿದ್ದು, 18 ಲೋಡ್ ಗಿಡ ಗಂಟಿ, ಪ್ಲಾಸ್ಟಿಕ್ ಸಹಿತ ಇನ್ನಿತರ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿಗೆ ಕೊಂಡೊಯ್ಯಲಾಯಿತು.
ಬೆಳಗ್ಗೆ ಆರು ಗಂಟೆಗೆ ಆರಂಭಗೊಂಡ ಸ್ವಚ್ಛತಾ ಕಾರ್ಯದಲ್ಲಿ ಜನಪ್ರತಿನಿಧಿಗಳು, ಪರಿಸರದ ಹತ್ತಕ್ಕೂ ಹೆಚ್ಚು ಸಂಘಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಕಟೀಲು ಪ.ಪೂ. ಮತ್ತು ಪ್ರಥಮ ದರ್ಜೆ ಕಾಲೇಜಿನ ಎನ್ನೆಸೆಸ್ ವಿದ್ಯಾರ್ಥಿಗಳು ಪಾಲ್ಗೊಂಡರು. ಶಿಕ್ಷಣ ಸಂಸ್ಥೆಗಳ, ದೇವಸ್ಥಾನಗಳ ಸಿಬಂದಿ ಭಾಗವಹಿಸಿದ್ದರು. ದುರ್ಗಾಫೆಸಿಲಿಟಿ ಸಂಸ್ಥೆಯವರು ಯಂತ್ರದ ಮೂಲಕ ರಸ್ತೆಗಳನ್ನು ಸ್ವಚ್ಛಗೊಳಿಸಿದರು.
ಈಶ್ವರ ಕಟೀಲು ಮಾತನಾಡಿ, ನಂದಿನಿ ನದಿಗೆ ತ್ಯಾಜ್ಯ ಎಸೆಯದೆ ಅದರ ಪಾವಿತ್ರ್ಯವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು. ಮೂಡಬಿದಿರೆ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಅಭಿಲಾಷ್ ಶೆಟ್ಟಿ ಮಾತನಾಡಿ, ಆಸಕ್ತರ ಒಂದು ತಂಡವನ್ನು ಕಟ್ಟಿಕೊಂಡು ನಿರಂತರ ಸ್ವಚ್ಛತೆ ಮಾಡಲಿದ್ದೇವೆ ಎಂದರು.
ಕಟೀಲು ಹಳೆ ವಿದ್ಯಾರ್ಥಿ ಸಂಘದ ಲೋಕಯ್ಯ ಸಾಲ್ಯಾನ್ ಮಾತ ನಾಡಿ, ದೂರ ದೂರುಗಳಿಂದ ಬರುವ ಯಾತ್ರಾರ್ಥಿಗಳಿಂದ ಕ್ಷೇತ್ರದಲ್ಲಿ ಒಂದಿಷ್ಟು ಗಲೀಜು ಆಗುತ್ತಿದ್ದು, ಸ್ವಯಂ ಜಾಗೃತಿಯ ಅಗತ್ಯವಿದೆ ಎಂದು ತಿಳಿಸಿದರು.
ಕಟೀಲು ದೇಗುಲದ ಪ್ರಬಂಧಕ ತಾರಾನಾಥ ಶೆಟ್ಟಿ ಮಾತನಾಡಿ, ದೇವಸ್ಥಾನದಲ್ಲಿ ಸ್ವಚ್ಛತಾ ಸ್ವಯಂ ಸೇವಕರ ಹೆಸರು ನೋಂದಣಿಯನ್ನು ಆರಂಭಿಸಲಾಗಿದ್ದು, ಸಂಘ-ಸಂಸ್ಥೆಗಳ ಸದಸ್ಯರು, ಭಕ್ತರು ಸೇವೆ ಸಲ್ಲಿಸಲು ಅವಕಾಶವಿದೆ ಎಂದರು.
ಸ್ವಚ್ಛತೆಯ ಮೂಲಕ ಶ್ರೀದೇವಿಯ ಸೇವೆಗೈಯುವ ಉತ್ತಮ ಅವಕಾಶ ಕಲ್ಪಿಸಲಾಗಿದೆ ಎಂದು ಸಮಾಜ ಸೇವಕ ದೊಡ್ಡಯ್ಯ ಮೂಲ್ಯ ಅಭಿಪ್ರಾಯಪಟ್ಟರು.
ಸ್ವಯಂ ಪ್ರೇರಣೆಯ ಸ್ವಚ್ಛತೆ ಪುಣ್ಯದ ಕಾರ್ಯ
ಕಟೀಲು ಕ್ಷೇತ್ರದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಅವರು ಮಾತನಾಡಿ, ದೇವಸ್ಥಾನವನ್ನು ಸ್ವಚ್ಛ, ಸುಂದರ ಹಾಗೂ ಶಾಂತಿಯ ತಾಣವನ್ನಾಗಿ ಇರಿಸುವುದು ತಪಸ್ಸಿಗೆ ಸಮಾನ. ಭಕ್ತರು ಸ್ವಯಂ ಪ್ರೇರಣೆಯಿಂದ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುತ್ತಿರುವುದು ಪುಣ್ಯದ ಕಾರ್ಯ ಎಂದರು.