ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿಯವರ ಸ್ವತ್ಛ ಭಾರತ ಕಲ್ಪನೆಯು ಹಳ್ಳಿ ಹಳ್ಳಿಗೂ ತಲುಪಬೇಕು ಎಂಬ ನಿಟ್ಟಿನಲ್ಲಿ ಸ್ವಚ್ಛ ಸರ್ವೇಕ್ಷಣ ಜಾಗೃತಿ ವಾಹನವು ಎಲ್ಲ ಗ್ರಾಮಗಳಿಗೂ ಸಂಚರಿಸಲಿದೆ. ಸ್ವಚ್ಛ ಬೆಳ್ತಂಗಡಿಯ ಕಲ್ಪನೆಗೆ ಎಲ್ಲರ ಸಹಕಾರ ಅಗತ್ಯ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಮಂಗಳವಾರ ದ.ಕ. ಜಿ.ಪಂ., ಬೆಳ್ತಂಗಡಿ ತಾ.ಪಂ. ವತಿಯಿಂದ ತಾಲೂಕಿನ ಎಲ್ಲ 48 ಗ್ರಾ.ಪಂ.ಗಳಿಗೆ ಸಂಚರಿಸಲಿರುವ ಸ್ವಚ್ಛ ಸರ್ವೇಕ್ಷಣ ಜಾಗೃತಿ ವಾಹನಕ್ಕೆ ಇಲ್ಲಿನ ತಾ.ಪಂ. ಆವರಣದಲ್ಲಿ ಚಾಲನೆ ನೀಡಿದರು.
ಸ್ವಚ್ಛತೆ ಕುರಿತು ಯುವ ಜನಾಂಗ ಜಾಗೃತರಾದರೆ ಸ್ವಚ್ಛ ಭಾರತದ ಕಲ್ಪನೆ ಶೀಘ್ರ ನೆರವೇರುತ್ತದೆ. ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳೂ ಒಟ್ಟು ಸೇರಿ ಸಭೆ ನಡೆಸಿ, ಸ್ವಚ್ಛತೆಗೆ ನಮ್ಮ ಕೊಡುಗೆ ಏನು ಎಂಬ ವಿಮರ್ಶೆ ಮಾಡಬೇಕು. ಪ್ರಸ್ತುತ ಬೆಳ್ತಂಗಡಿ ತಾ.ಪಂ. ಇಒ ಅವರು ತಮ್ಮ ಸೇವಾ ಅವಧಿಯಿಂದ ನಿವೃತ್ತಿಗೊಳ್ಳುತ್ತಿದ್ದು, ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದರು.
ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಮಾತನಾಡಿ, ಪ್ರತಿಯೊಬ್ಬರ ಮನಸ್ಸು ಸ್ವಚ್ಛವಾದಾಗ ಮಾತ್ರ ಸ್ವಚ್ಛತೆ ಅರಿವು ಮೂಡುತ್ತದೆ. ಈ ನಿಟ್ಟಿನಲ್ಲಿ ಜಾಗೃತಿ ವಾಹನವು ಎಲ್ಲರಲ್ಲೂ ಸ್ವಚ್ಛತಾ ಕಲ್ಪನೆ ಮೂಡಿಸಲಿ ಎಂದು ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಸದಸ್ಯರಾದ ಸುಧೀರ್, ಜೋಯಲ್, ವಿಜಯಾ ಗೌಡ, ಪ್ರವೀಣ್, ಕೃಷ್ಣಯ್ಯ, ಇಒ ಬಸವರಾಜ್ ಅಯ್ಯಣ್ಣನವರ್, ಲೆಕ್ಕಾಧಿಕಾರಿ ಗಣೇಶ್ ಪೂಜಾರಿ, ಅಬಕಾರಿ ಇಲಾಖೆಯ ಶಬೀರ್ ಮತ್ತಿತರರಿದ್ದರು. ತಾ.ಪಂ.ನ ಕುಸುಮಾಧರ ಸ್ವಾಗತಿಸಿ, ಲಾೖಲ ಗ್ರಾ.ಪಂ. ಪಿಡಿಒ ಪ್ರಕಾಶ್ ಶೆಟ್ಟಿ ವಂದಿಸಿದರು. ತಾ| ಸಂಯೋಜಕ ಜಯಾನಂದ ನಿರೂಪಿಸಿದರು.