ಹೂವು, ಹಣ್ಣು, ತರಕಾರಿ ಕೊಳ್ಳುವುದಕ್ಕೆ ಜನರು ಮುಗಿಬಿದ್ದಿದ್ದರು. ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ
ರಾಸಾಯನಿಕದಿಂದ ತಯಾರಿಸಿದ ಗಣಪತಿ ವಿಗ್ರಹಗಳ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ. ಪ್ಲಾಸ್ಟರ್ ಆಫ್ ಪ್ಯಾರೀಸ್ ಮಾದರಿಯಲ್ಲೇ ಮಣ್ಣಿನಿಂದ ತಯಾರಿಸಿದ ಗೌರಿ-ಗಣೇಶ ವಿಗ್ರಹಗಳನ್ನು ಮಾರಾಟಕ್ಕೆ ಇಡಲಾಗಿತ್ತು. ವಿಗ್ರಹಗಳಿಗೆ ಆಕರ್ಷಕವಾಗಿ ಬಣ್ಣದ ಚಿತ್ತಾರ ಮೂಡಿಸಿದ್ದರಿಂದ ಸಹಜವಾಗಿಯೇ ಬೇಡಿಕೆ ಸೃಷ್ಟಿಯಾಗಿತ್ತು. 200ರಿಂದ 15 ಸಾವಿರವರೆಗೆ ಮಾರಾಟ: ಮಣ್ಣಿನಿಂದ ತಯಾರಿಸಿದ ಗೌರಿ-ಗಣೇಶ ವಿಗ್ರಹಗಳು ನೋಡುವುದಕ್ಕೆ ಆಕರ್ಷಣೀಯವಾಗಿದ್ದವು. ಕನಿಷ್ಠ 200 ರೂ.ನಿಂದ 15 ಸಾವಿರ ರೂ.ವರೆಗೆ ವಿಗ್ರಹಗಳನ್ನು ಮಾರಾಟ ಮಾಡಲಾಗುತ್ತಿತ್ತು. ಮಣ್ಣಿನ ಗಣಪತಿ ವಿಗ್ರಹಗಳನ್ನು ಗರಿಷ್ಠ 6 ಅಡಿ ಎತ್ತರಕ್ಕೆ ಸೀಮಿತಗೊಳಿಸಿ ತಯಾರಿಸಲಾಗಿತ್ತು. ಮನೆಗಳಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುವವರು ಚಿಕ್ಕ ಗಾತ್ರದ ಗೌರಿ ಮತ್ತು ಗಣೇಶ ವಿಗ್ರಹಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದುದು ಕಂಡು ಬಂದಿತು. ವಿವಿಧ ಬಡಾವಣೆಗಳಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುವ ಯುವಕರು ವಾಹನಗಳಲ್ಲಿ ಗಣಪತಿ ವಿಗ್ರಹಗಳನ್ನು ಕೊಂಡೊಯ್ಯುತ್ತಿದ್ದರು. ಮಣ್ಣಿನ ವಿಗ್ರಹಗಳು ಹೆಚ್ಚು ಭಾರ: ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ತಯಾರಿಸಲಾದ ಗೌರಿ-ಗಣೇಶ ವಿಗ್ರಹಗಳು ಹಗುರವಾಗಿರುತ್ತವೆ. ಅವುಗಳನ್ನು ತಯಾರಿಸಿದ ಬಳಿಕ ಕತ್ತು, ಕೈ ತುಂಡಾದಲ್ಲಿ ಮಾರಾಟಗಾರರೇ ಅದನ್ನು ಜೋಡಣೆ ಮಾಡುತ್ತಿದ್ದರು. ಮಣ್ಣಿನಿಂದ ತಯಾರಿಸಿದ ಗಣೇಶ ವಿಗ್ರಹಗಳು ಹಾಗಲ್ಲ. ವಿಗ್ರಹದ ಯಾವುದೇ ಅಂಗ ಊನವಾದರೂ ಕಲಾವಿದನಿಂದಷ್ಟೇ ಮುಕ್ಕಾದ ಭಾಗವನ್ನು ಸರಿಪಡಿಸಲು ಸಾಧ್ಯ. ಪ್ಲಾಸ್ಟರ್ ಆಫ್ ಪ್ಯಾರೀಸ್‌ಗಿಂತಲೂ ಮಣ್ಣಿನ ವಿಗ್ರಹಗಳು ಹೆಚ್ಚು ಭಾರವನ್ನು ಹೊಂದಿರುತ್ತವೆ. ಮಣ್ಣಿನಿಂದ ತಯಾರಿಸಿದ ವಿಗ್ರಹಗಳು ಸುಂದರವಾಗಿದ್ದರೂ ವಿದ್ಯುತ್ ಬೆಳಕಿನಲ್ಲಿ ಮಂಕಾಗಿ ಕಾಣುತ್ತವೆ. ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ತಯಾರಿಸಿದ ವಿಗ್ರಹಗಳು ವಿದ್ಯುತ್ ದೀಪಗಳ ಬೆಳಕಿನಲ್ಲಿ ಕಂಗೊಳಿಸುತ್ತವೆ. ವಿಸರ್ಜನೆಗೆ ನೀರಿನ ಅಭಾವ: ಮಳೆಯ ಕೊರತೆ, ನೀರಿನ ಅಭಾವದಿಂದಾಗಿ ಜಿಲ್ಲೆಯ ಬಹುಪಾಲು ಕೆರೆಗಳು ನೀರಿಲ್ಲದೆ ಭಣಗುಡುತ್ತಿವೆ. ಬರಗಾಲದಿಂದಾಗಿ ಪ್ರತಿ ವರ್ಷ ಗಣಪತಿ ಪ್ರತಿಷ್ಠಾಪನೆ
ಮಾಡುವವರ ಸಂಖ್ಯೆ ಕ್ಷೀಣಿಸುತ್ತಲೇ ಇದೆ. ಗಣಪತಿ ಪ್ರತಿಷ್ಠಾಪನೆ ಮಾಡಿದರೂ ವಿಸರ್ಜನೆಗೆ ನೀರಿನ ಅಭಾವ ಕಾಡುತ್ತಿದೆ. ಹೀಗಾಗಿ ದೊಡ್ಡದೊಡ್ಡ ಗಣಪತಿಗಳು ಮಾರಾಟವಾಗದೆ ಮಾರುಕಟ್ಟೆಯಲ್ಲೇ ಉಳಿಯುವಂತಾಗಿದೆ. 1500 ರೂ.ನಿಂದ 3000 ರೂ.ವರೆಗಿನ ಗಣಪತಿ ವಿಗ್ರಹಗಳು ಹೆಚ್ಚು ಮಾರಾಟವಾಗುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.50ರಷ್ಟು ಗಣಪತಿ ಮಾತ್ರ ಮಾರುಕಟ್ಟೆಗೆ ಬಂದಿವೆ. ವಿವಿಧ ಕಾರಣಗಳಿಂದ ಯುವಕರು ಗಣಪತಿ ಪ್ರತಿಷ್ಠಾಪನೆಯಿಂದ ದೂರವೇ ಉಳಿದಿದ್ದಾರೆ. ಹಿಂದೆಲ್ಲಾ ಬೃಹತ್ ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪಿಸುತ್ತಾ ತಿಂಗಳ ಕಾಲ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನೆ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದ ಯುವಕರು, ಈಗ ತೆರೆಯ ಮರೆಗೆ ಸರಿದಿರುವುದರಿಂದ ಹಬ್ಬದ ಸಂಭ್ರಮವೂ ಜಿಲ್ಲೆಯಲ್ಲಿ ಕಡಿಮೆಯಾಗಿದೆ.
Advertisement