Advertisement

US Presidential debate; ಟ್ರಂಪ್-ಕಮಲಾ ಮುಖಾಮುಖಿ: ಬಾಣಕ್ಕೆ ಪ್ರತಿಬಾಣ

03:33 PM Sep 11, 2024 | ವಿಷ್ಣುದಾಸ್ ಪಾಟೀಲ್ |

ಅಮೆರಿಕದಲ್ಲಿ(USA) ಅಧ್ಯಕ್ಷೀಯ ಚುನಾವಣೆಯ(Presidential debate) ಕಾವು ತೀವ್ರವಾಗಿ ಏರಿದ್ದು, ದಿನದಿಂದ ದಿನಕ್ಕೆ ಆರೋಪ ಪ್ರತ್ಯಾರೋಪಗಳು ಬಾಣಕ್ಕೆ ಪ್ರತಿ ಬಾಣ ಎನ್ನುವ ಹಾಗೆ ತೇಲಿ ಬರುತ್ತಲೇ ಇವೆ. ಈ ಬಾರಿ ಅತ್ಯಂತ ರೋಚಕ ಕದನ ಏರ್ಪಟ್ಟಿದ್ದು, ಜಿದ್ದಾಜಿದ್ದಿನ ಸಮರಾಂಗಣ ಮಂಗಳವಾರ (ಸೆ10) ರಂದು ಫಿಲಡೆಲ್ಫಿಯಾದ ರಾಷ್ಟ್ರೀಯ ಸಂವಿಧಾನ ಕೇಂದ್ರದಲ್ಲಿ ಇಬ್ಬರು ಪ್ರತಿಸ್ಪರ್ಧಿಗಳ ಮುಖಾಮುಖಿಯೊಂದಿಗೆ ಇನ್ನಷ್ಟು ಕಾವು ಏರಲು ಕಾರಣವಾಯಿತು.

Advertisement

ರಿಪಬ್ಲಿಕನ್ ಅಧ್ಯಕ್ಷೀಯ ನಾಮನಿರ್ದೇಶಿತ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump), ಡೆಮಾಕ್ರಟಿಕ್ ಅಧ್ಯಕ್ಷೀಯ ನಾಮನಿರ್ದೇಶಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್(Kamala Harris) ಅವರು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಿ ಹಲವು ವಿಚಾರಧಾರೆಗಳ ಕುರಿತು ಪರಸ್ಪರ ವಾಕ್ಸಮರ ನಡೆಸಿದರು.

ವಿದೇಶಾಂಗ ನೀತಿ, ಆರ್ಥಿಕತೆ, ಗಡಿ ಭದ್ರತೆ ಮತ್ತು ಗರ್ಭಪಾತದಂತಹ ಪ್ರಮುಖ ಸಮಸ್ಯೆಗಳು ಅಧ್ಯಕ್ಷೀಯ ಚುನಾವಣೆ ಚರ್ಚೆಯ ಸಮಯದಲ್ಲಿ ಆದ್ಯತೆಯ ವಿಚಾರವಾಗಿದ್ದವು. ಚರ್ಚೆ ಕೈಕುಲುವ ಮೂಲಕ ಪ್ರಾರಂಭವಾಯಿತಾದರೂ ನಂತರ ಕಟು ಟೀಕೆಗಳತ್ತ ಸಾಗಿತು. 90 ನಿಮಿಷಗಳ ಕಾಲ ಚರ್ಚೆಯಲ್ಲಿ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ಅವರು ಮುಂದಿನ ನಾಲ್ಕು ವರ್ಷಗಳಲ್ಲಿ ಕಾರ್ಯಗತಗೊಳಿಸಲು ಬಯಸುವ ವಿಭಿನ್ನ ದೃಷ್ಟಿಕೋನವನ್ನು ಪ್ರಸ್ತುತಪಡಿಸಿದರು.

59 ರ ಹರೆಯದ ಕಮಲಾ “ಈ ರಾತ್ರಿ ನೀವು ನಮ್ಮ ದೇಶಕ್ಕೆ ಎರಡು ವಿಭಿನ್ನ ದೃಷ್ಟಿಕೋನಗಳನ್ನು ಕೇಳಿಸಿಕೊಳ್ಳುತ್ತಿದ್ದೀರಿ ಎಂದು ನಾನು ಭಾವಿಸುತ್ತೇನೆ, ಒಂದು ಭವಿಷ್ಯದ ಮೇಲೆ ಕೇಂದ್ರೀಕೃತವಾಗಿದೆ ಮತ್ತು ಇನ್ನೊಂದು ಹಿಂದಿನದನ್ನು ಕೇಂದ್ರೀಕರಿಸುತ್ತದೆ ಮತ್ತು ನಮ್ಮನ್ನು ಹಿಂದಕ್ಕೆ ಕೊಂಡೊಯ್ಯುವ ಪ್ರಯತ್ನ. ಆದರೆ ನಾವು ಹಿಂತಿರುಗುವುದಿಲ್ಲ. ಅಮೆರಿಕದ ಜನರು ತಮ್ಮನ್ನು ಬೇರ್ಪಡಿಸುವುದಕ್ಕಿಂತ ಹೆಚ್ಚಿನದ್ದಾದ ಯೋಚನೆನ್ನು ಹೊಂದಿದ್ದಾರೆ ಎಂದು ನಮಗೆ ತಿಳಿದಿದೆ ಎಂದು ನಾನು ನಂಬುತ್ತೇನೆ. ನಾವು ಮುಂದೆ ಹೊಸ ಮಾರ್ಗವನ್ನು ರಚಿಸಬಹುದಾಗಿದೆ ”ಎಂದು ಆರಂಭದಲ್ಲೇ ಟಾಂಗ್ ನೀಡಿದರು.

Advertisement

78 ರ ಹರೆಯದ ಟ್ರಂಪ್ ಅನುಭವದ ಮಾತುಗಳನ್ನಾಡಿ ತಿರುಗೇಟು ನೀಡುತ್ತಲೇ ಹೋದರು.” ಕಮಲಾ ಹ್ಯಾರಿಸ್ ಅವರು ಎಲ್ಲಾ ಅದ್ಭುತ ಕೆಲಸಗಳನ್ನು ಮಾಡಲಿದ್ದೇವೆ ಎಂದು ಹೇಳಿದ್ದಾರೆ. ಬೈಡೆನ್ ಆಡಳಿತದ ಈ ಮೂರೂವರೆ ವರ್ಷಗಳಲ್ಲಿ ಅವರು ಅದನ್ನು ಏಕೆ ಮಾಡಲಿಲ್ಲ? ಮೂರೂವರೆ ವರ್ಷಗಳಿಂದ ಅಲ್ಲಿದ್ದಾರೆ. ಗಡಿಯನ್ನು ಸರಿಪಡಿಸಲು ಅವರಿಗೆ ಮೂರೂವರೆ ವರ್ಷಗಳ ಕಾಲಾವಕಾಶವಿತ್ತು, ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ನಾವು ಮಾತನಾಡಿದ ಎಲ್ಲಾ ವಿಷಯಗಳನ್ನು ಚರ್ಚಿಸಲು ಮೂರೂವರೆ ವರ್ಷಗಳನ್ನು ಹೊಂದಿದ್ದರು. ಅವರು ಅದನ್ನು ಏಕೆ ಮಾಡಲಿಲ್ಲ?” ಎಂದು ಪ್ರಶ್ನಿಸಿದರು.

ಜೂನ್ 27 ರಂದು ಅಟ್ಲಾಂಟಾದಲ್ಲಿ ಮೊದಲ ಅಧ್ಯಕ್ಷೀಯ ಚರ್ಚೆಯು ಟ್ರಂಪ್ ಮತ್ತು ಅಧ್ಯಕ್ಷ ಜೋ ಬೈಡೆನ್ ನಡುವೆ ನಡೆದಿತ್ತು. ಇದು ಎರಡನೇ ಅಧ್ಯಕ್ಷೀಯ ಚರ್ಚೆಯಾಗಿ ಗಮನ ಸೆಳೆಯಿತು.

“ನಮ್ಮನ್ನು ಒಟ್ಟಿಗೆ ತರುವ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವ ಅಧ್ಯಕ್ಷರನ್ನು ಅಮೆರಿಕದ ಜನರು ಬಯಸುತ್ತಾರೆ ಮತ್ತು ಎಲ್ಲಾ ಅಮೆರಿಕನ್ನರಿಗೆ ಅಧ್ಯಕ್ಷರಾಗಲು ನಾನು ಪ್ರತಿಜ್ಞೆ ಮಾಡುತ್ತೇನೆ” ಎಂದು ಕಮಲಾ ಹ್ಯಾರಿಸ್ ಗಮನ ಸೆಳೆದರೆ, “ನಾನು ಏನು ಮಾಡಲಿದ್ದೇನೆ ಎಂದು ಎಲ್ಲರಿಗೂ ತಿಳಿದಿದೆ, ತೆರಿಗೆಗಳನ್ನು ಗಣನೀಯವಾಗಿ ಕಡಿತಗೊಳಿಸುತ್ತೇನೆ ಮತ್ತು ನಾನು ಮೊದಲು ಮಾಡಿದಂತೆ ಉತ್ತಮ ಆರ್ಥಿಕತೆಯನ್ನು ಸೃಷ್ಟಿಸುತ್ತೇನೆ. ನಾವು ಶ್ರೇಷ್ಠ ಆರ್ಥಿಕತೆಯನ್ನು ಹೊಂದಿದ್ದೇವೆ. ನಾವು ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದು, ಅದ್ಭುತವಾದ ಕೆಲಸವನ್ನು ಮಾಡಿದ್ದೇವೆ ”ಎಂದು ಟ್ರಂಪ್ ಪ್ರತಿಕ್ರಿಯಿಸಿದರು. ತತ್ ಕ್ಷಣ ಚರ್ಚೆಯು ತಿರುವು ಪಡೆದುಕೊಂಡು ವಾಕ್ಸಮರಕ್ಕೆ ಕಾರಣವಾಯಿತು. ಟ್ರಂಪ್ ಮತ್ತು ಹ್ಯಾರಿಸ್ ಇಬ್ಬರೂ ಪರಸ್ಪರ ಸುಳ್ಳು ಹೇಳುತ್ತಿದ್ದಾರೆಂದು ಆರೋಪಿಸಿಕೊಂಡರು. ‘ಕಮಲಾ ಮಾರ್ಕ್ಸ್‌ವಾದಿ, ಆಕೆಯ ತಂದೆ ಅರ್ಥಶಾಸ್ತ್ರದಲ್ಲಿ ಮಾರ್ಕ್ಸ್‌ವಾದಿ ಪ್ರೊಫೆಸರ್ ಆಗಿದ್ದರು, ಆಕೆಗೆ ಚೆನ್ನಾಗಿ ಪಾಠಮಾಡಿದ್ದಾರೆ’ ಎಂದು ಟ್ರಂಪ್ ಕಿಡಿಯಾದರು.

ಗಡಿ ವಿಚಾರ ಪ್ರಸ್ತಾಪಿಸಿದ ಟ್ರಂಪ್ ‘ಬೈಡೆನ್ ನಮ್ಮ ದೇಶಕ್ಕೆ ಏನು ಮಾಡಿದ್ದಾರೆಂದು ನೀವು ನೋಡಿದಾಗ ಮತ್ತು ನಮ್ಮ ದೇಶಕ್ಕೆ ತಿಂಗಳಿಗೆ ಬಂದು ಸೇರುತ್ತಿರುವ ಲಕ್ಷಾಂತರ ಜನರನ್ನು ನೀವು ನೋಡಿದಾಗ, ಅದು 21 ಮಿಲಿಯನ್ ಆಗಿದೆ. ನೀವು ಹೇಳುವ 15 ಮಿಲಿಯನ್ ಅಲ್ಲ. ಬರುವ ವಲಸಿಗ ಜನರಲ್ಲಿ ಹಲವರು ಅಪರಾಧಿಗಳು, ಮತ್ತು ಅದು ಅಮೆರಿಕದ ಆರ್ಥಿಕತೆಗೆ ಕೆಡುಕು ಉಂಟು ಮಾಡುವರೇ ಇದ್ದಾರೆ. ಕೆಟ್ಟ ವಲಸೆ ನೀತಿ ನಮ್ಮ ಆರ್ಥಿಕತೆಗೆ ಸಂಭವಿಸಬಹುದಾದ ದೊಡ್ಡ ಹೊಡೆತ. ಕಮಲಾ ಹ್ಯಾರಿಸ್ ಹುಚ್ಚುತನದ ನೀತಿಯಿಂದ ನಮ್ಮ ದೇಶವನ್ನು ನಾಶಪಡಿಸಿದ್ದಾರೆ” ಎಂದು ಆರೋಪಿಸಿದರು.

ಟ್ರಂಪ್ ಪುನರಾಯ್ಕೆಯಾದರೆ ರಾಷ್ಟ್ರೀಯ ಗರ್ಭಪಾತ ನಿಷೇಧ ಮಸೂದೆಗೆ ಸಹಿ ಹಾಕುತ್ತಾರೆ. ಕೆಲವು ಸ್ವಾತಂತ್ರ್ಯಗಳು, ನಿರ್ದಿಷ್ಟವಾಗಿ, ಒಬ್ಬರ ಸ್ವಂತ ದೇಹದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಸರಗಾರವು ಮಾಡಬಾರದು ಎಂದು ಅಮೆರಿಕನ್ನರು ನಂಬುತ್ತಾರೆ ಎಂದು ನಾನು ಭಾವಿಸುತ್ತೇನೆ, ಎಂದು ಕಮಲಾ ಹ್ಯಾರಿಸ್ ಹೇಳಿದರು.

ಕೆರಳಿದ ಟ್ರಂಪ್ ‘ಗರ್ಭಪಾತ ನೀತಿಯನ್ನು ರಾಜ್ಯಗಳು ನಿರ್ಧರಿಸಬೇಕು. ಕಮಲಾ ಹೇಳುತ್ತಿರುವುದು ಸುಳ್ಳು. ನಾನು ನಿಷೇಧಕ್ಕೆ ಸಹಿ ಹಾಕುವುದಿಲ್ಲ’ ಎಂದರು.

ಯುದ್ಧಕ್ಕೆ ಬ್ರೇಕ್

ನವೆಂಬರ್ 5 ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದರೆ ಉಕ್ರೇನ್‌ನಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸುವುದಾಗಿ ಟ್ರಂಪ್ ಪ್ರತಿಜ್ಞೆ ಮಾಡಿದ್ದ ರು.

ಅಫ್ಘಾನಿಸ್ಥಾನ ವಿಚಾರವನ್ನು ಹಲವಾರು ಬಾರಿ ಪ್ರಸ್ತಾಪಿಸಿದ ಟ್ರಂಪ್, ”ಅಮೆರಿಕನ್ ಪಡೆಗಳ ಹಿಂತೆಗೆದುಕೊಳ್ಳುವಿಕೆ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ನಾಚಿಕೆಗೇಡಿನ ಕ್ಷಣ. ಬೈಡೆನ್ ನಮ್ಮ ಮಿಲಿಟರಿಗೆ ಮುಜುಗರ ತಂದು ವೈಫಲ್ಯ ತೋರಿದ್ದಾರೆ” ಎಂದರು.

ಕಮಲಾ ಹ್ಯಾರಿಸ್ ಇಸ್ರೇಲ್ ಅನ್ನು ದ್ವೇಷಿಸುತ್ತಾರೆ ಎಂದು ಟ್ರಂಪ್ ಹೇಳಿದಾಗ, ಕಮಲಾ ಹ್ಯಾರಿಸ್ ಅವರು ಟ್ರಂಪ್ “ಸರ್ವಾಧಿಕಾರಿಗಳನ್ನು ಮೆಚ್ಚುತ್ತಾರೆ” ಎಂದು ವಾಗ್ದಾಳಿ ನಡೆಸಿದರು. ನಾನು ಚುನಾವಣೆಯಲ್ಲಿ ಸೋತು ಕಮಲಾ ಹ್ಯಾರಿಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರೆ ಎರಡು ವರ್ಷಗಳಲ್ಲಿ ಇಸ್ರೇಲ್ ನಾಶವಾಗಲಿದೆ ಎಂದರು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಹಿಂದಿನ ಹೇಳಿಕೆಗಳಿಗಾಗಿ ಟ್ರಂಪ್ ವಿರುದ್ಧ ಕಮಲಾ ಹ್ಯಾರಿಸ್ ವಾಗ್ದಾಳಿ ನಡೆಸಿ ಪುಟಿನ್ ವಿಶ್ವ ನಾಯಕರೊಂದಿಗೆ ನಡೆಸಿದ ಸಭೆಗಳಲ್ಲಿ ಟ್ರಂಪ್ ಅವರನ್ನು ಗೇಲಿ ಮಾಡಿದ್ದಾರೆ ಎಂದರು.

*ವಿಷ್ಣುದಾಸ್‌ ಪಾಟೀಲ್

Advertisement

Udayavani is now on Telegram. Click here to join our channel and stay updated with the latest news.

Next