Advertisement

ಕ್ಲಾಸ್‌ ರೂಮ್‌ ಎಂಬ ಭಾರತ

06:00 AM Sep 28, 2018 | |

ಭಾರತ ಎಂದರೆ ತತ್‌ಕ್ಷಣ ನಮ್ಮ ಮನಸ್ಸಿಗೆ ಬರುವುದು ವೈವಿಧ್ಯಮಯ ಭಾಷೆ, ಆಚಾರ-ವಿಚಾರ ಮತ್ತು ಸಂಸ್ಕೃತಿ. ವಿವಿಧತೆಯಲ್ಲಿ ಏಕತೆ ಎಂಬ ಧ್ಯೇಯ ವಾಕ್ಯದಂತೆ ನಮ್ಮ ನಡುವೆ ಹಲವಾರು ಜಾತಿ-ಧರ್ಮ, ಪಂತ-ಪಂಗಡ ಮತ್ತು ಸಂಸ್ಕೃತಿ, ಆಚಾರ-ವಿಚಾರಗಳಿದ್ದರೂ ಭಾರತೀಯರೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಅನ್ಯೋನ್ಯತೆಯಿಂದ ಬದುಕುವುದೇ ಭಾರತ ಮಣ್ಣಿನ ವಿಶಿಷ್ಟತೆ. ಇದರಿಂದಲೇ ಭಾರತ ಇಂದು ಜಗತ್ತಿನ ಇತರ ಎಲ್ಲ ರಾಷ್ಟ್ರಗಳಿಗಿಂತ ವಿಭಿನ್ನವಾಗಿರುವುದು.

Advertisement

ಆದರೆ, ನಿಜವಾದ ಸೌಹಾರ್ದ ಭಾರತದ ಕಲ್ಪನೆ ಸಾಕಾರಗೊಳ್ಳುವುದು ದೇಶದ ಪ್ರತಿಯೊಂದು ಶಾಲಾ-ಕಾಲೇಜುಗಳ ತರಗತಿ ಕೊಠಡಿಯಲ್ಲಾಗಿದೆ. ಕಾರಣ ಕ್ಲಾಸ್‌ರೂಮ್‌ ಎಂಬ ಭಾರತದಲ್ಲಿ ಹಲವು ಧರ್ಮ, ಜಾತಿ, ಆಚಾರ ವಿಚಾರಗಳ ವಿದ್ಯಾರ್ಥಿಗಳಿರುತ್ತಾರೆ. ಅವರೆಲ್ಲರ ಹಿನ್ನಲೆ ಬೇರೆ ಬೇರೆಯಾಗಿರಬಹುದು. ಆದರೆ, ತರಗತಿಯಲ್ಲಿ ಅವರೆಲ್ಲ ವಿದ್ಯಾರ್ಥಿಗಳು ಎಂಬ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತಾರೆಯೇ ಹೊರತು ಜಾತಿ-ಧರ್ಮಗಳ ಆಧಾರದಲ್ಲಿ ಅಲ್ಲ.  

ನಮ್ಮ ತರಗತಿಯ ಉದಾಹರಣೆಯನ್ನೇ ತೆಗೆದುಕೊಂಡರೆ ರಾಜ್ಯದ ಹಲವಾರು ಜಿಲ್ಲೆಗಳ ವಿವಿಧ ಭಾಷೆ-ಸಂಸ್ಕೃತಿಯ ವಿದ್ಯಾರ್ಥಿಗಳು ಒಟ್ಟಾಗಿ ವ್ಯಾಸಂಗ ಮಾಡುತ್ತಿದ್ದೇವೆ. ದೂರದೂರುಗಳಿಂದ ಬಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ನಮ್ಮೊಳಗೆ ಯಾವುದೇ ಭಿನ್ನತೆಗಳಿಲ್ಲ. ವೈವಿಧ್ಯಮಯ ಸಂಸ್ಕೃತಿಗಳು ನಮ್ಮ ನಡುವೆ ಬಿರುಕು ಹುಟ್ಟಿಸುವ ಬದಲು ನಮ್ಮ ಗೆಳೆಯರ ಆಚಾರ-ವಿಚಾರಗಳು ನಾವು ಮತ್ತು ನಮ್ಮ ಆಚಾರ-ವಿಚಾರಗಳನ್ನು ಅವರು ತಿಳಿದುಕೊಳ್ಳಲು ನಮ್ಮ ಕ್ಲಾಸ್‌ರೂಮ್‌ ಸಹಕಾರಿಯಾಗಿದೆ. ನಮ್ಮ ಗೆಳೆಯರು ಅವರ ಊರಿಗೆ ಹೋದರೆ ಅಲ್ಲಿನ ವಿಶಿಷ್ಟವಾದ ತಿಂಡಿ-ತಿನಿಸುಗಳನ್ನು ನಮಗೆ ತಂದು ಕೊಡುತ್ತಾರೆ. ನಾವು ಮನೆಯಲ್ಲಿ ಏನಾದರು ವಿಶೇಷ ತಿಂಡಿತಿನಿಸುಗಳನ್ನು ಮಾಡಿದರೆ ಅವರಿಗೆ ಕೊಂಡು ಹೋಗಿ ಕೊಡುತ್ತೇವೆ. ಹಬ್ಬಗಳಿಗೆ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ಆದ್ದರಿಂದಲೇ ಕ್ಲಾಸ್‌ರೂಮ್‌ ಎಂಬ ಭಾರತದಲ್ಲಿ ಇರಲು ನಮಗಿಷ್ಟ.

ತರಗತಿ ಕೋಣೆಯ ಕಲ್ಪನೆಯೇ ಅದ್ಭುತ‌ವಾದದ್ದು. ಅದೊಂದು ಸುಂದರವಾದ ಹೂದೋಟ. ಬೆಳೆದು ದೊಡ್ಡವರಾಗಿ ಮುಂದೆ ದೇಶದ ಭವಿಷ್ಯವನ್ನು ಬೆಳಗಬೇಕಾದ ಮಕ್ಕಳನ್ನು ಜಾತಿ-ಧರ್ಮಗಳ ಮಿತಿಯನ್ನು ಮೀರಿದ ಮಾನವೀಯ ಸಹೋದರ ಸರಪಳಿಯಲ್ಲಿ ಒಂದೇ ಮುತ್ತುಗಳಂತೆ ಪೋಣಿಸುವ ಸುಂದರ ಪವಿತ್ರ ಸ್ಥಳ ಕ್ಲಾಸ್‌ರೂಮ್‌. ಆದ್ದರಿಂದಲೇ ನಿಜವಾದ ಭಾರತ ಕಲ್ಪನೆ ತರಗತಿ ಕೋಣೆಗಳಲ್ಲಿ ಸಹಕಾರಗೊಳ್ಳುವುದು.

ನಿಜವಾಗಿಯೂ ಪ್ರತಿಯೊಂದು ತರಗತಿ ಕೋಣೆಯು ದೇಶದ ಭವಿಷ್ಯವನ್ನು ಬರೆಯುವ ತಾಣ. ಅಲ್ಲಿ ಮೇಲು-ಕೀಳು, ಬಡವ-ಬಲ್ಲಿದ, ಜಾತಿ-ಧರ್ಮಗಳ ಯಾವ ವಿಷಯವೂ ಬರುವುದಿಲ್ಲ. 

Advertisement

ಹಾರಿಸ್‌ ಕೋಕಿಲ
ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ, ಎಸ್‌ಡಿಎಂ ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next