Advertisement

ವರ್ಗ ನೀತಿ: ಸಾರಿಗೆ ಸಂಸ್ಥೆಗಳಿಗೆ ಆರ್ಥಿಕ ಹೊರೆ ಆತಂಕ

09:57 AM Apr 15, 2017 | Team Udayavani |

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆಯಲ್ಲಿ ಅಂತರ್‌ ನಿಗಮ ವರ್ಗಾವಣೆಗೆ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಸಾಧಕ-ಬಾಧಕಗಳ ಲೆಕ್ಕಾಚಾರ ಶುರುವಾಗಿದ್ದು, ಇದರಿಂದ ಈಗಾಗಲೇ ನಷ್ಟದಲ್ಲಿರುವ ನಿಗಮಗಳ ಮೇಲೆ ಮತ್ತಷ್ಟು ಆರ್ಥಿಕ ಹೊರೆಬೀಳುವ ಆತಂಕ ಎದುರಾಗಿದೆ.

Advertisement

ವಿವಿಧ ಸಾರಿಗೆ ನಿಗಮಗಳಲ್ಲಿ ಪ್ರಸ್ತುತ ಖಾಲಿ ಇರುವ ಹುದ್ದೆಗಳನ್ನು ಅಂತರ್‌ ನಿಗಮ ವರ್ಗಾವಣೆಯಡಿ ಭರ್ತಿ ಮಾಡಲು ಉದ್ದೇಶಿಸಲಾಗಿದೆ. ಆದರೆ, ಈ ವರ್ಗಾವಣೆಯು ಜೇಷ್ಠತೆ ಆಧಾರದ ಮೇಲೆ ನಡೆಯಲಿದ್ದು, ಸೇವಾ ಹಿರಿತನ ಹೊಂದಿರುವವರು ಆ ಖಾಲಿ ಹುದ್ದೆಗಳಿಗೆ ವರ್ಗಾವಣೆ ಮೂಲಕ ಬರುವುದರಿಂದ ನಿಗಮಗಳು ಹೊಸಬರಿಗೆ ನೀಡುವ ವೇತನಕ್ಕಿಂತ ಒಂದೂವರೆಪಟ್ಟು ಹೆಚ್ಚು ವೇತನ ಪಾವತಿಸಬೇಕಾಗುತ್ತದೆ. ಇದರಿಂದ ಸಂಬಂಧಪಟ್ಟ ನಿಗಮಕ್ಕೆ ಆರ್ಥಿಕ ಹೊರೆಯಾಗುವ ಸಾಧ್ಯತೆ ಇದೆ. 

ವೇತನದ ಹೆಚ್ಚುವರಿ ಹೊರೆ: ಉದಾಹರಣೆಗೆ- ಹೊಸದಾಗಿ ನೇಮಕಗೊಳ್ಳುವ ಚಾಲಕ ಅಥವಾ ನಿರ್ವಾಹಕರಿಗೆ ನಿಗಮಗಳಲ್ಲಿ 15 ರಿಂದ 20 ಸಾವಿರ ರೂ. ವೇತನ ನೀಡಲಾಗುತ್ತದೆ. ಇದಕ್ಕೂ ಮುನ್ನ ಅವರು ಒಂದೆರಡು ವರ್ಷ ಟ್ರೈನಿ ಹಾಗೂ ಪ್ರೊಬೇಷನರಿ ಹುದ್ದೆಯಲ್ಲಿ ಕೆಲಸ ಮಾಡುತ್ತಾರೆ. ನಂತರ ಅವರ ಸೇವೆ ಖಾಯಂಗೊಳಿಸಲಾಗುತ್ತದೆ. ಇದರಿಂದ ನಿಗಮಗಳಿಗೆ ಆರ್ಥಿಕ ಹೊರೆ ಸ್ವಲ್ಪ ಕಡಿಮೆ ಆಗುತ್ತಿತ್ತು. ಆದರೆ, ಈಗ ವರ್ಗಾವಣೆಯಾಗಿ ಬರುವ ಸಿಬ್ಬಂದಿಗೆ ಏಕಾಏಕಿ 35 ರಿಂದ 40 ಸಾವಿರ ರೂ. ವೇತನ ಪಾವತಿಸಬೇಕಾಗುತ್ತದೆ.

ಕೇವಲ ಒಂದು ಸಾವಿರ ಜನ ಜೇಷ್ಠತೆ ಆಧಾರದ ಮೇಲೆ ವರ್ಗಾವಣೆಗೊಂಡರೂ ಅದು ಕೋಟ್ಯಂತರ ರೂ. ಹೊರೆ ಆಗಲಿದೆ. ಈಗಾಗಲೇ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳು ನಷ್ಟದಲ್ಲಿ ಸಾಗುತ್ತಿವೆ. ಹೀಗಿರುವಾಗ ಅಂತರ ನಿಗಮಗಳ ವರ್ಗಾವಣೆಯಿಂದಾಗುವ ಆರ್ಥಿಕ ಹೊರೆಯನ್ನು ನೀಗಿಸುವುದು ಸವಾಲಾಗಿದೆ. ಇದನ್ನು ಸರ್ಕಾರವೇ ಭರಿಸಬೇಕು ಎಂದು ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ವಂಚಿತ ಆಗಲಿದ್ದಾರೆ ಯುವಕರು:ಈ ಮಧ್ಯೆ ಅಂತರ್‌ ನಿಗಮ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಹೊಸದಾಗಿ ನೇಮಕಾತಿ ಪ್ರಕ್ರಿಯೆ ತಡೆಹಿಡಿಯಲು ಉದ್ದೇಶಿಸಲಾಗಿದೆ. ಪ್ರತಿ ವರ್ಷ ಕನಿಷ್ಠ 3 ಸಾವಿರ ವಿವಿಧ ಪ್ರಕಾರದ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆದರೆ, ಆ ಹುದ್ದೆಗಳನ್ನು ಈಗ ವರ್ಗಾವಣೆ ಮೂಲಕ ಭರ್ತಿ ಮಾಡಲು ನಿರ್ಧರಿಸಲಾಗಿದೆ. ಅಲ್ಲದೆ, ಹೈದರಾಬಾದ್‌ ಕರ್ನಾಟಕಕ್ಕೆ 371 “ಜೆ’ ವಿಶೇಷ ಸ್ಥಾನಮಾನ ನೀಡಿದ್ದು, ಇದರಡಿ ಕಳೆದೆರಡು ವರ್ಷಗಳಿಂದ ಅಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಹೆಚ್ಚು ಅನುಕೂಲವೂ ಆಗಿದೆ. ಆದರೆ, ಹೊಸ ನೇಮಕಾತಿ ತಡೆಹಿಡಿಯಲು ಉದ್ದೇಶಿಸಿದ್ದು, ಆ ಹುದ್ದೆಗಳಿಗೆ ಅದೇ ಪ್ರದೇಶದ ಸೇವಾ ಹಿರಿತನ ಹೊಂದಿರುವ ಚಾಲಕರು ಅಥವಾ ನಿರ್ವಾಹಕರು ಬರಲಿದ್ದಾರೆ. ಪರಿಣಾಮ ಸ್ಥಳೀಯ ಯುವಕರಿಗೆ ಅವಕಾಶ ವಂಚಿತರಾಗುವ ಆತಂಕ ಕಾಡುತ್ತಿದೆ.

Advertisement

ಬಿಡುಗಡೆ ಭಾಗ್ಯ ವಿಳಂಬ?: ಅದೇ ರೀತಿ, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಯಲ್ಲಿ ಹೆಚ್ಚಾಗಿ ಉತ್ತರ ಕರ್ನಾಟಕ ಮೂಲದವರಿದ್ದಾರೆ. ಅವರೆಲ್ಲಾ ಅಂತರ ನಿಗಮ ವರ್ಗಾವಣೆ ಅಡಿ ತವರಿಗೆ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ. ಜೇಷ್ಠತೆ ಆಧಾರದಲ್ಲೇ ಲೆಕ್ಕಹಾಕಿದರೂ ಸಾವಿರಾರು ಸಂಖ್ಯೆಯಲ್ಲಿ ವರ್ಗಾವಣೆ ಪಡೆಯುವವರಿದ್ದಾರೆ. ಆಗ ಬಸ್‌ಗಳ ಸಮರ್ಪಕ ಸೇವೆ ಕಷ್ಟವಾಗಲಿದೆ. 

ಈ ನಡುವೆ ಗುರುವಾರ ಅಂತರ ನಿಗಮ ವರ್ಗಾವಣೆ ರೂಪುರೇಷೆಗಳ ಸಿದ್ಧಪಡಿಸುವ ಬಗ್ಗೆ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರುಗಳ ಸಭೆ ನಡೆಯಿತು. ಸಭೆಯಲ್ಲಿ ವರ್ಗಾವಣೆಗೆ ಇರುವ ಸವಾಲುಗಳು ಮತ್ತು ಅದರ ಪರಿಹಾರಗಳ ಬಗ್ಗೆ ಚರ್ಚಿಸಲಾಯಿತು. ತಿಂಗಳಲ್ಲಿ ಈ ಸಂಬಂಧದ ಕರಡು ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ. 

ಕಡಿಮೆ ವೇತನ ಪಾವತಿ
ಅಂತರ್‌ ನಿಗಮ ವರ್ಗಾವಣೆಯಿಂದ ಒಂದು ನಿಗಮಕ್ಕೆ ಆರ್ಥಿಕ ಹೊರೆಯಾದರೆ, ಮತ್ತೂಂದು ನಿಗಮಕ್ಕೆ ಇದರಿಂದ ಅನುಕೂಲವೂ ಆಗಲಿದೆ. ಉದಾಹರಣೆಗೆ ಕೆಎಸ್‌ಆರ್‌ಟಿಸಿಯಲ್ಲಿ 500 ಸೇವಾ ಹಿರಿತನ ಹೊಂದಿರುವ ಸಿಬ್ಬಂದಿ ವಾಯವ್ಯ ರಸ್ತೆ ಸಾರಿಗೆ ನಿಗಮಕ್ಕೆ ವರ್ಗಾವಣೆಯಾಗುತ್ತಾರೆ ಎಂದುಕೊಳ್ಳೋಣ. ಆಗ ವಾಯುವ್ಯ ರಸ್ತೆ ಸಾರಿಗೆ ನಿಗಮವು ಹೊಸಬರಿಗೆ ಕೊಡುವ ವೇತನಕ್ಕಿಂತ ವರ್ಗಾವಣೆಗೊಂಡ ಸಿಬ್ಬಂದಿಗೆ ಒಂದೂವರೆಪಟ್ಟು ಹೆಚ್ಚು ವೇತನ ನೀಡಬೇಕಾಗುತ್ತದೆ. ಆದರೆ, ಇತ್ತ ವರ್ಗಾವಣೆಯಿಂದ ಕೆಎಸ್‌ಆರ್‌ಟಿಸಿಯಲ್ಲಿ ತೆರವಾಗುವ ಹುದ್ದೆಗಳಿಗೆ ಹೊಸದಾಗಿ ನೇಮಕ ಮಾಡಿಕೊಳ್ಳುವ ಸಿಬ್ಬಂದಿಗೆ ಕಡಿಮೆ ವೇತನ ಪಾವತಿಸಬೇಕಾಗುತ್ತದೆ. 

ಅಂತರ್‌ ನಿಗಮಗಳ ವರ್ಗಾವಣೆಗೆ ಹಲವು ತಾಂತ್ರಿಕ ಸಮಸ್ಯೆ-ಸವಾಲುಗಳಿವೆ. ಅವುಗಳ ಬಗ್ಗೆ ಸುದೀರ್ಘ‌ವಾಗಿ ಚರ್ಚಿಸಿ, ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಅದನ್ನು ಆಧರಿಸಿ ಸರ್ಕಾರ ಹೊರಡಿಸುವ ಸೂಚನೆ ಮೇರೆಗೆ ಅರ್ಜಿಗಳನ್ನು ಆಹ್ವಾನಿಸಲಾಗುವುದು. ನಂತರ ವರ್ಗಾವಣೆ ಮಾಡಲಾಗುವುದು.
-ಎಸ್‌.ಆರ್‌. ಉಮಾಶಂಕರ್‌,
ಎಂಡಿ, ಕೆಎಸ್‌ಆರ್‌ಟಿಸಿ

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next