Advertisement

ಬಿಂದಿ ಧರಿಸಿದ್ದಕ್ಕೆ ಕೇರಳ ಮದ್ರಸದಿಂದ 5ನೇ ತರಗತಿ ಬಾಲಕಿ ಉಚ್ಚಾಟನೆ

11:08 AM Jul 07, 2018 | udayavani editorial |

ತಿರುವನಂತಪುರ : ಕಿರು ಚಿತ್ರವೊಂದರಲ್ಲಿ ತನಗೆ ನೀಡಲಾದ ಪಾತ್ರವನ್ನು ವಹಿಸುವುದಕ್ಕಾಗಿ ಹಣೆಯಲ್ಲಿ ಶ್ರೀಗಂಧದ ಬಿಂದಿಯನ್ನು ಹಾಕಿಕೊಂಡ ಕಾರಣಕ್ಕೆ ಐದನೇ ತರಗತಿಯ, 10 ವರ್ಷ ಪ್ರಾಯದ ವಿದ್ಯಾರ್ಥಿನಿಯನ್ನು ಮದ್ರಸದಿಂದ ಉಚ್ಚಾಟಿಸಲಾಗಿದೆ.

Advertisement

ಬಾಲಕಿಯ ತಂದೆ ಮದ್ರಸದ ಈ ಕ್ರಮವನ್ನು ಬಲವಾಗಿ ಖಂಡಿಸಿದ್ದಾರೆ.  “ನನ್ನ ಮಗಳನ್ನು ಮದ್ರಸದಿಂದ ಉಚ್ಚಾಟಿಸಲಾಗಿರುವುದು ದುರದೃಷ್ಟಕರ; ಆಕೆಗೆ ಕಲ್ಲು ಹೊಡೆಯದಿರುವುದೇ ನಮ್ಮ ಅದೃಷ್ಟ’ ಎಂದು ವಿದ್ಯಾರ್ಥಿನಿಯ ತಂದೆ ಉಮ್ಮರ್‌ ಮಲಾಯಿಲ್‌ ಅವರು ಫೇಸ್‌ ಬುಕ್‌ನಲ್ಲಿ ಹಾಕಿರುವ ಪೋಸ್ಟ್‌ಗೆ 7,500 ಲೈಕ್‌ಗಳು ಬಂದಿದ್ದು 2,700 ಮಂದಿ ಅದನ್ನು ಶೇರ್‌ ಮಾಡಿಕೊಂಡಿದ್ದಾರೆ. 

“ನನ್ನ ಮಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದಾಳೆ. ನೃತ್ಯ, ಹಾಡುಗಾರಿಕೆಯಲ್ಲಿ ನಿರತಳಾಗಿದ್ದಾಳೆ. ಮದ್ರಸ ಮಟ್ಟದ ಸ್ಪರ್ಧೆಯಲ್ಲಿ ಆಕೆ ತನ್ನ ಶಾಲೆಗೆ ಹಲವಾರು ಬಹುಮಾನಗಳನ್ನು ಗೆದ್ದು ತಂದಿದ್ದಾಳೆ; ಇದರ ಹೊರತಾಗಿಯೂ ಆಕೆಯನ್ನು ಮದ್ರಸದಿಂದ ಉಚ್ಚಾಟಿಸಲಾಗಿದೆ. ಇದಕ್ಕೆ ಕೊಡಲಾಗಿರುವ ಉದಾಹರಣೆ ಆಘಾತಕಾರಿಯಾಗಿದೆ; ಆಕೆ ತನ್ನ ಹಣೆಯಲ್ಲಿ, ಅದೂ ಕಿರುಚಿತ್ರವೊಂದರಲ್ಲಿ ನಟಿಸುವುದಕ್ಕಾಗಿ, ಬಿಂದಿ ಹಾಕಿಕೊಂಡದ್ದಕ್ಕಾಗಿ ಆಕೆಯನ್ನು ಮದ್ರಸದಿಂದ ಉಚ್ಚಾಟಿಸಲಾಗಿದೆ’ ಎಂದು ಬಾಲಕಿಯ ತಂದೆ ಮಲಾಯಿಲ್‌ ಅವರು ತಮ್ಮ ಫೇಸ್‌ ಬುಕ್‌ನಲ್ಲಿ ಮಲಯಾಳಂನಲ್ಲಿ ಬರೆದಿದ್ದಾರೆ. 

ಮಲಾಯಿಲ್‌ ಅವರ ಈ ಪೋಸ್ಟ್‌ ಓದಿರುವ ಅನೇಕರು ಅವರನ್ನು ಬೆಂಬಲಿಸಿದ್ದಾರೆ; ಮದ್ರಸದ ಕ್ರಮವನ್ನು ಖಂಡಿಸಿದ್ದಾರೆ. ಹಾಗೆಯೇ ಕೆಲವರು ಮದ್ರಸದ ಕ್ರಮ ಸರಿ ಎಂದಿದ್ದಾರೆ. ಮುಸ್ಲಿಮ್‌ ಹುಡುಗಿಯರು ಶರೀಯತ್‌ ಕಾನೂನಿನ ಪ್ರಕಾರ ಹಣೆಯಲ್ಲಿ ಬಿಂದಿ ಧರಿಸುವಂತಿಲ್ಲ; ಅದು ಇಸ್ಲಾಮ್‌ ವಿರೋಧಿ ಕೃತ್ಯವಾಗುತ್ತದೆ ಎಂದವರು ಸಮರ್ಥಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next