ಲಕ್ನೋ: ಅನುಮಾನಸ್ಪದ ರೀತಿಯಲ್ಲಿ ಶಾಲಾ ಮಹಡಿಯಿಂದ ಕೆಳಕ್ಕೆ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಅಯೋಧ್ಯೆದಲ್ಲಿ ನಡೆದಿರುವುದು ವರದಿಯಾಗಿದೆ.
ನಗರದ ಸನ್‌ಬೀಮ್ ಶಾಲೆಯಲ್ಲಿ ಶುಕ್ರವಾರ (ಮೇ.26 ರಂದು) ಬೆಳಗ್ಗೆ 8.45ರ ಸುಮಾರಿಗೆ ಈ ಘಟನೆ ನಡೆದಿದೆ.
10ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಶಾಲಾ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ ಎಂದು ಬಾಲಕಿಯ ಪೋಷಕರಿಗೆ ಶಾಲಾ ಅಧಿಕಾರಿಗಳು ಶುಕ್ರವಾರ ಮುಂಜಾನೆ ಹೇಳಿದ್ದಾರೆ. ಕೂಡಲೇ ಪೋಷಕರು ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆಯ ವೇಳೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ವರದಿ ತಿಳಿಸಿದೆ.
ಆ ಬಳಿಕ ಈ ಬಗ್ಗೆ ಪೋಷಕರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಆಕೆಯ ಕೈ ಮತ್ತು ಪಾದಗಳ ಮೇಲೆ ಹಲವಾರು ಗಾಯದ ಗುರುತುಗಳಿವೆ. ಆಕೆಯ ಮುಖವು ಊದಿಕೊಂಡಿದೆ ಮತ್ತು ಆಕೆಯ ಕಣ್ಣಿಗೆ ಗಾಯವಾಗಿದೆ. ಆಕೆ ಮೇಲೆ ಹಲ್ಲೆ ನಡೆಸಿ, ದೌರ್ಜನ್ಯ ನಡೆಸಲಾಗಿದೆ. ಕಟ್ಟಡದಿಂದ ಕೇವಲ ಒಂದೂವರೆ ಅಡಿ ಎತ್ತರದಿಂದ ಮಗಳು ಬಿದ್ದಿದ್ದಾಳೆ. ಇದರಿಂದ ಆಕೆ ಸಾಯಲಿಲ್ಲ. ತನ್ನ ಮಗಳ ಸಾವಿಗೆ ಶಾಲೆಯ ಅಧಿಕಾರಿ ಬ್ರಿಜೇಶ್ ಯಾದವ್ ಮತ್ತು ಶಿಕ್ಷಕ ಅಭಿಷೇಕ್ ಕನೋಜಿಯಾ ಕೈಜೋಡಿಸಿದ್ದಾರೆ ಎಂದು ಬಾಲಕಿಯ ಪೋಷಕರು ಆರೋಪಿಸಿ ದೂರು ನೀಡಿದ್ದಾರೆ.
ಆದರೆ ಶಾಲೆಯ ಪ್ರಿನ್ಸಿಪಾಲ್ ಈ ಘಟನೆಯ ಬಗ್ಗೆ ಯಾವ ಪ್ರತಿಕ್ರಿಯೆಯನ್ನು ನೀಡಿಲ್ಲ. ಈ ಕುರಿತು ಪೊಲೀಸರು ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.