ಕೋಲ್ಕತಾ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಂಗಳವಾರ ನಡೆಸಿದ ರೋಡ್‌ಶೋ ಬಳಿಕ ಪಶ್ಚಿಮ ಬಂಗಾಲದಲ್ಲಿ ವ್ಯಾಪಕ ಹಿಂಸಾಚಾರ ನಡೆದಿದ್ದು, ಕೊನೆಯ ಹಂತದ ಚುನಾವಣೆಗೂ ಮುನ್ನ ರಾಜಕೀಯ ಸಮರ ತಾರಕಕ್ಕೇರಿದೆ. ಟಿಎಂಸಿ -ಬಿಜೆಪಿ ಪರಸ್ಪರ ಆರೋಪಗಳನ್ನು ಮಾಡಿಕೊಳ್ಳುವ ಮೂಲಕ ಹೊಸ ಹೋರಾಟವನ್ನು ಆರಂಭಿಸಿವೆ.
ಹಿಂಸಾಚಾರ ಸಂಭವಿಸಿದ ವೇಳೆ ಅಮಿತ್ ಶಾ ಅವರು ಯಾವುದೇ ದಾಳಿಗೆ ಸಿಲುಕದೆ ಪಾರಾಗಿದ್ದಾರೆ. ವ್ಯಾಪಕ ಪೊಲೀಸರು ಸುತ್ತುವರಿದು ಅವರ ರೋಡ್ ಶೋವನ್ನುಅರ್ಧದಲ್ಲೇ ಮೊಟಕುಗೊಳಿಸಲಾಗಿತ್ತು. ಅಮಿತ್ ಶಾ ಇಂದು ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಲಿದ್ದಾರೆ.
ತೃಣಮೂಲ ಕಾಂಗ್ರೆಸ್ ಹಿಂಸಾಚಾರದ ಬಗ್ಗೆ ಚುನಾವಣಾ ಆಯೋಗದೊಂದಿಗೆ ಮಾತುಕತೆ ನಡೆಸಲು ಸಮಯ ಕೇಳಿದೆ. ಬಂಗಾಳದ ಬರಹಗಾರ ಮತ್ತು ತತ್ವಜ್ಞಾನಿ ಈಶ್ವರ್‌ಚಂದ್ರ ವಿದ್ಯಾಸಾಗರ್ ಅವರಪ್ರತಿಮೆ ಧ್ವಂಸಗೈದಿರುವ ಬಗ್ಗೆ ವ್ಯಾಪಕ ಆಕ್ರೋಶ ಹೊರ ಹಾಕಿದೆ.ಇಂದು ಟಿಎಂಸಿ ನಾಯಕರು ಮತ್ತು ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಿದ್ದಾರೆ.ಬಿಜೆಪಿಯೂ ಕೂಡ ಪ್ರತಿಭಟನಾ ಮೆರವಣಿಗೆ ನಡೆಸಲು ಸಿದ್ದತೆ ನಡೆಸಿದೆ.
ಬಿಜೆಪಿ ಬೆಂಬಲಿಗರು ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಗರದ ವಿವಿಧೆಡೆ ಘರ್ಷಣೆ ಉಂಟಾಗಿದ್ದು, ಕಲ್ಲು ತೂರಾಟದಂಥ ಹಿಂಸಾತ್ಮಕ ಘಟನೆಗಳಿಂದ ಹಲವರು ಗಾಯಗೊಂಡಿದ್ದಾರೆ. ಅನೇಕ ವಾಹನಗಳು ಅಗ್ನಿಗಾಹುತಿಯಾಗಿವೆ. ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಅಮಿತ್ ಶಾ ರೋಡ್ ಶೋ ಕಾಲೇಜು ಸ್ಟ್ರೀಟ್ ಮೂಲಕ ಹಾದು ಹೋಗುತ್ತಿದ್ದಂತೆ, ಕಿಡಿಗೇಡಿಗಳು ಶಾ ಬೆಂಗಾವಲು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಈ ವೇಳೆ ಉಂಟಾದ ಘರ್ಷಣೆಯು ಬಳಿಕ ತೀವ್ರ ಸ್ವರೂಪ ಪಡೆಯಿತು. ಕೋಲ್ಕತಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಎಡಪಕ್ಷಗಳು ಮತ್ತು ಟಿಎಂಸಿ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಅಮಿತ್ ಶಾ ಗೋ ಬ್ಯಾಕ್, ಚೌಕಿದಾರ್ ಚೋರ್ ಹೇ ಎಂಬ ಘೋಷಣೆಗಳನ್ನು ಬರೆದಿದ್ದ ಫಲಕಗಳನ್ನು ಹಾಗೂ ಕಪ್ಪುಬಾವುಟಗಳನ್ನು ಹಿಡಿದು ನಿಂತಿದ್ದರು. ರೋಡ್ ಶೋ ಆ ದಾರಿಯಲ್ಲಿ ಸಾಗುತ್ತಿದ್ದಂತೆ ಅವರು ಘೋಷಣೆ ಕೂಗತೊಡಗಿದರು. ಇದಾದ ಬಳಿಕ ವಿದ್ಯಾಸಾಗರ ಕಾಲೇಜು ಹಾಗೂ ವಿವಿ ಹಾಸ್ಟೆಲ್ ಬಳಿ ಟಿಎಂಸಿ ಕಾರ್ಯಕರ್ತರು ಶಾ ಬೆಂಗಾವಲು ವಾಹನಗಳ ಮೇಲೆ ಏಕಾಏಕಿ ಕಲ್ಲುತೂರಾಟ ನಡೆಸಿದ ಬಳಿಕ ಹಿಂಸಾಚಾರ ಭುಗಿಲೆದ್ದಿದೆ.