Advertisement

ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಸ್ಪಷ್ಟತೆ ಅಗತ್ಯ

02:46 AM Apr 15, 2019 | Sriram |

ಜನಪ್ರತಿನಿಧಿಗಳು ಯಾವ ಪಕ್ಷದವರೇ ಆಗಿರಲಿ, ಅವರಿಗೆ ತಿಳಿವಳಿಕೆಯ ಜತೆಗೆ ಉತ್ತಮ ವಿದ್ಯಾಭ್ಯಾಸವೂ ಅಗತ್ಯ. ಅಮೇಠಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕೇಂದ್ರ ಸಚಿವೆ ಸ್ಮತಿ ಇರಾನಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತಮ್ಮ ನಾಮಪತ್ರಗಳ ಜತೆಗೆ ಸಲ್ಲಿಸಿರುವ ಅಫಿಡವಿಟ್‌ಗಳಲ್ಲಿ ಸಲ್ಲಿಸಿರುವ ಶೈಕ್ಷಣಿಕ ವಿವರಗಳ ಹಿನ್ನೆಲೆಯಲ್ಲಿ ಯಾರು ಎಷ್ಟರವರೆಗೆ ಶಿಕ್ಷಣ ಪಡೆದಿದ್ದಾರೆ ಎಂಬ ವಿಚಾರ ಮತ್ತೆ ಚರ್ಚೆಗೆ ಬಂದಿದೆ.

Advertisement

2014ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಸ್ಮತಿ ಇರಾನಿಯವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದರು. ಆಗ ಕಾಂಗ್ರೆಸ್‌ ಮತ್ತು ಇತರ ಪ್ರತಿಪಕ್ಷಗಳು ಕೇಂದ್ರ ಸಂಪುಟದಿಂದ ಇರಾನಿ ಅವರನ್ನು ಕೈಬಿಡಬೇಕು ಎಂದು ಪ್ರಬಲವಾಗಿ ಆಗ್ರಹಿಸಿದ್ದವು. ಅವರು ಯೇಲ್‌ ವಿವಿಯಿಂದ ಪದವಿ ಪಡೆದಿದ್ದಾಗಿ ಹೇಳಿಕೊಂಡಿದ್ದರು ಎಂಬ ವಿಚಾರವೂ ಕೋಲಾಹಲ ಸೃಷ್ಟಿಸಿತ್ತು.

ಇದೀಗ 2019ನೇ ಸಾಲಿನ ಚುನಾವಣೆಯ ಹೊತ್ತಿಗೆ ಸ್ಮತಿ ತಾವು ಪದವಿಯನ್ನೇ ಪೂರೈಸಿಲ್ಲ ಎನ್ನುವುದನ್ನು ಅಫಿಡವಿಟ್‌ನಲ್ಲಿ ಉಲ್ಲೇಖೀಸಿದ್ದಾರೆ. ಇನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರು ತಾವು ಎಂ.ಫಿಲ್‌ ಪದವಿ ಪಡೆದುಕೊಂಡಿದ್ದಾಗಿ ತಮ್ಮ ಅಫಿಡವಿಟ್‌ನಲ್ಲಿ ಹೇಳಿಕೊಂಡಿದ್ದಾರೆ. ಇರಾನಿಯವರು ಹಿಂದಿನ ಚುನಾವಣೆಗಳಲ್ಲಿ ನೀಡಿದ್ದ ಶೈಕ್ಷಣಿಕ ವಿವರಗಳಿಗೂ, ಈಗಿನದ್ದಕ್ಕೂ ತಾಳೆಯಾಗುತ್ತಿಲ್ಲ. ಹೀಗಾಗಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವುದು ಪ್ರತಿಪಕ್ಷಗಳ ಒತ್ತಾಯ.

ಅದೇ ರೀತಿಯಲ್ಲೇ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರು ವಿದೇಶದಲ್ಲಿ ಶಿಕ್ಷಣ ಪಡೆದಿದ್ದಾರೆ ಎಂಬ ವಿಚಾರದಲ್ಲೂ ಹಲವು ವಾದಗಳು ಉಂಟು. ರಾಹುಲ್‌ ಗಾಂಧಿ ಸ್ನಾತಕೋತ್ತರ ಪದವಿ ಇಲ್ಲದೆ ಎಂ.ಫಿಲ್‌ ಪದವಿ ಪಡೆಯುವುದು ಹೇಗೆ ಸಾಧ್ಯ ಎಂದು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟಿÉ ಪ್ರಶ್ನೆ ಮಾಡಿದ್ದಾರೆ. ಇದು ಕೇವಲ ರಾಹುಲ್‌ ಗಾಂಧಿ ಅಥವಾ ಸ್ಮತಿ ಇರಾನಿಯವರ ವಿಚಾರವಷ್ಟೇ ಅಲ್ಲ. ವಿಧಾನಸಭೆ, ಲೋಕಸಭೆ ಚುನಾವಣೆಗೆ ಯಾರೇ ಸ್ಪರ್ಧಿಸಲಿ, ಅವರು ಏನನ್ನು ಕಲಿತಿದ್ದಾರೆ ಎಂಬ ವಿಚಾರ “ಸ್ಪಷ್ಟವಾಗಿ’ ಸಾರ್ವಜನಿಕವಾಗಬೇಕು. ಆಡಳಿತ ವ್ಯವಸ್ಥೆಯಲ್ಲಿ ಎಷ್ಟೆಷ್ಟೋ ಸೂಕ್ಷ್ಮ ವಿಚಾರಗಳು ಇರುತ್ತವೆ. ಅದನ್ನು ಓದಿ ತಿಳಿದುಕೊಂಡು ಅದು ಜನಪರವೋ, ವಿರೋಧವೋ ಎನ್ನುವುದನ್ನು ನಿರ್ಧರಿಸಲು ಅವರಿಗೆ ಗೊತ್ತಿರಬೇಕು ಎನ್ನುವುದು ಆಶಯ. ಭಾರತ ಅಥವಾ ವಿದೇಶದ ಯಾವುದೇ ಜನಪ್ರಿಯ ಶಿಕ್ಷಣ ಸಂಸ್ಥೆಯಲ್ಲಿ ಓದಿದ ಮಾತ್ರಕ್ಕೆ ಒಬ್ಬ ವ್ಯಕ್ತಿ ಬುದ್ಧಿವಂತ, ಓದದವನು ದಡ್ಡ ಎಂದು ತೀರ್ಮಾನಿಸಬೇಕಾದ ಅಗತ್ಯವಿಲ್ಲ. ಆದರೆ, ತಮ್ಮ ಶೈಕ್ಷಣಿಕ ಅರ್ಹತೆ ವಿಚಾರದಲ್ಲಿ ಅವರು ಸತ್ಯವನ್ನು ನುಡಿಯಬೇಕು.

ಶಿಕ್ಷಣದ ವಿವರಗಳನ್ನೇ ಮುಚ್ಚಿಡುತ್ತಾರೆ ಎಂದಾದರೆ, ಅಂಥವರು ಎಷ್ಟು ಪಾರದರ್ಶಕವಾಗಿ ಆಡಳಿತದಲ್ಲಿ ಜನ ಪರ ನಿರ್ಣಯ ಕೈಗೊಳ್ಳುತ್ತಾರೆ ಎಂಬ ಭಾವನೆ ಜನರಲ್ಲಿ ನಿಜಕ್ಕೂ ಮೂಡುತ್ತದೆ. 2014ರಿಂದ ಈಚೆಗೆ ನ್ಯಾಯಾಲಯಗಳ ವಿವಿಧ ಹಂತಗಳಲ್ಲಿ ವಾದ ವಿವಾದಗಳು ನಡೆದಿತ್ತು. ಅದರಿಂದ ನಿರ್ಣಾಯಕವಾಗುವಂಥದ್ದು ಏನೂ ಆಗಲಿಲ್ಲ. ಸದ್ಯ ಇರುವ ನಿಯಮ ಪ್ರಕಾರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಆದಾಯ, ಸ್ವತ್ತು, ಶಿಕ್ಷಣ ಮತ್ತು ಇತರ ಸಂಬಂಧಿತ ವಿವರಗಳನ್ನು ನೀಡುವುದರಲ್ಲಿ ವ್ಯತ್ಯಯ ಉಂಟಾಗಿದ್ದದ್ದು ಪತ್ತೆಯಾದರೆ ನಾಮಪತ್ರ ಸ್ವೀಕರಿಸುವ ಜಿಲ್ಲಾ ಚುನಾವಣಾಧಿಕಾರಿ ಸಂಬಂಧಿತ ಅಭ್ಯರ್ಥಿಯಿಂದ ಸ್ಪಷ್ಟನೆ ಪಡೆಯಬಹುದು. ಪರಿಶೀಲನೆ ನಡೆದು, ಸ್ವೀಕೃತವಾದರೆ, ಮುಂದಿನ ಹಂತದಲ್ಲಿ ನ್ಯಾಯಾಲಯದಲ್ಲಿಯೇ ಅದನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ.

Advertisement

ಅಭ್ಯರ್ಥಿಯ ಆದಾಯ, ಸ್ವತ್ತು, ಶಿಕ್ಷಣ ಮತ್ತು ಇತರ ಸಂಬಂಧಿತ ವಿವರಗಳ ನೀಡಿಕೆಯಲ್ಲಿ ಕಾನೂನಾತ್ಮಕ ವಿಚಾರಗಳು ಎದುರಾದರೆ, ಅದನ್ನು ಕೂಡಲೇ ಪರಿಹಾರ ಮಾಡುವ ವ್ಯವಸ್ಥೆ ಜಾರಿಯಾಗಬೇಕು. ಆ ನಿಟ್ಟಿನಲ್ಲಿ ಪಕ್ಷ ಬೇಧವಾಗಿ ಚಿಂತನೆ ನಡೆಯಬೇಕಾಗಿದೆ. ಅದರಲ್ಲಿ ರಾಜಿ ಮಾಡಿದರೆ ಜನರ ಹಿತಕ್ಕೆ ಧಕ್ಕೆ ತಂದಂತೆಯೇ ಆಗುತ್ತದೆ. ಹೀಗಾಗಿ, ಈ ನಿಟ್ಟಿನಲ್ಲಿ ಕೆಲವೊಂದು ಕಠಿಣ ಕಾನೂನುಗಳು ಜಾರಿಗೆ ತಂದಾಗ ಇಂಥ ತಪ್ಪುಗಳು ಉಂಟಾಗುವುದನ್ನು ತಪ್ಪಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next