Advertisement
ರಾಜ್ಯ ವಿಧಾನಸಭೆ ಹಾಗೂ ವಿಧಾನ ಪರಿಷತ್‌ಗೆ ಪ್ರಥಮ ಬಾರಿಗೆ ಆಯ್ಕೆಯಾದ ಶಾಸಕರಿಗೆ ವಿಕಾಸಸೌಧದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಉತ್ತಮವೆನಿಸಿದೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೊಬ್ಬರಿಗೂ ಸರ್ವಾಧಿಕಾರಿ ಮನೋಭಾವ ಇರಬಾರದು. ಆಂತರಿಕ ಪ್ರಜಾಪ್ರಭುತ್ವ ಕೂಡ ಬಹಳ ಮುಖ್ಯ ಎಂದರು.
Related Articles
Advertisement
ವಂಶಾಡಳಿತ ನಿಲ್ಲಬೇಕು: ಪ್ರಜಾಪ್ರಭುತ್ವದ ಮಹತ್ವ ಹಾಗೂ ಭಾರತದ ಸಂವಿಧಾನದ ಆಶಯಗಳು/ ಶಾಸನ ರಚನೆ ಮತ್ತು ಶಾಸಕರ ಪಾತ್ರ ವಿಷಯ ಕುರಿತು ಉಪನ್ಯಾಸ ನೀಡಿದ ಮಾಜಿ ಸಭಾಪತಿ ಬಿ.ಎಲ್.ಶಂಕರ್, ರಾಜಕಾರಣ ಇಂದು ಅಪರಾಧೀಕರಣ, ವ್ಯಾಪಾರೀಕರಣ ಹಾಗೂ ಕೋಮುವಾದೀಕರಣ ಎಂಬಂತಾಗಿದ್ದು, ಸಂವಿಧಾನಕ್ಕೆ ಸವಾಲಾಗಿವೆ.
ಗಣಿ, ರಿಯಲ್ ಎಸ್ಟೇಟ್, ನಾನಾ ಉದ್ಯಮ ನಡೆಸುತ್ತಿರುವವರು ರಾಜಕಾರಣದಲ್ಲಿರುವುದರಿಂದ ಕಾನೂನು ರೂಪಿಸುವವರೇ ಫಲಾನುಭವಿಗಳು ಎಂಬಂತಾಗುತ್ತಿದೆ. ವಂಶಾಡಳಿತ ರಾಜಕಾರಣ ದೊಡ್ಡ ಸವಾಲಾಗಿದೆ. ಉತ್ತರದಾಯಿತ್ವದ ಕೊರತೆ ತೀವ್ರವಾಗಿದ್ದು, ಇವೆಲ್ಲಾ ಸವಾಲುಗಳೆನಿಸಿವೆ. ಕೆಲ ಸಲಹೆಗಳು ನಮ್ಮ ಪಕ್ಷದವರಿಗೂ ಹಿಡಿಸುವುದಿಲ್ಲ ಎಂದು ಹೇಳಿದರು.
ಏಕಕಾಲಕ್ಕೆ ಚುನಾವಣೆ: ಇವು ಪರಿಹಾರವಾಗಬೇಕಾದರೆ ಶಾಸನಸಭೆ, ಲೋಕಸಭೆಗೆ ನಿರ್ದಿಷ್ಟ ಅವಧಿ ನಿಗದಿಪಡಿಸಿ ಕಡ್ಡಾಯವಾಗಿ ಪೂರ್ಣಗೊಳಿಸುವಂತಾಗಬೇಕು. ಏಕಕಾಲಕ್ಕೆ ಲೋಕಸಭೆ, ವಿಧಾನಸಭೆ ಚುನಾವಣೆ ನಡೆಯಬೇಕು. ಹಾಗೆಯೇ ಗ್ರಾಮ ಪಂಚಾಯ್ತಿಯಿಂದ ಜಿಲ್ಲಾ ಪಂಚಾಯ್ತಿವರೆಗೆ ಏಕಕಾಲಕ್ಕೆ ಚುನಾವಣೆ ನಡೆಯಬೇಕು. ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿ, ರಾಜ್ಯಪಾಲರು, ಸಭಾಧ್ಯಕ್ಷರು, ಸಭಾಪತಿ, ಸಚಿವರಿಗೆ ಗರಿಷ್ಠ 2 ಅವಧಿಯಷ್ಟೇ ಅವಕಾಶ ನೀಡಬೇಕು.
ಪಕ್ಷಾಂತರ ನಿಷೇಧ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಬೇಕು. ಉಪಚುನಾವಣೆಯೇ ಇರಬಾರದು. ಒಂದೊಮ್ಮೆ ಉಪ ಚುನಾವಣೆ ಪರಿಸ್ಥಿತಿ ನಿರ್ಮಾಣವಾದರೆ ಅತಿ ಹೆಚ್ಚು ಮತ ಪಡೆದ ಎರಡನೇ ಅಭ್ಯರ್ಥಿಗೆ ಅವಕಾಶ ನೀಡಬೇಕು. ಮತದಾನ ಕಡ್ಡಾಯಗೊಳಿಸಿ ಮತದಾರರ ಪಟ್ಟಿ ಕರಾರುವಕ್ಕಾಗಿ ಇರಬೇಕು ಎಂದು ಸಲಹೆ ನೀಡಿದರು. ಸಚಿವ ಆರ್.ಶಂಕರ್, ವಿಧಾನಸಭೆ ನಿರ್ದೇಶಕಿ ವಿಶಾಲಾಕ್ಷಿ ಉಪಸ್ಥಿತರಿದ್ದರು.
ಹೊಸ ಶಾಸಕರ ನಿರಾಸಕ್ತಿ: ಪ್ರಥಮ ಬಾರಿ ಶಾಸಕರಾಗಿ ಆಯ್ಕೆಯಾದವರಿಗೆ ಗುರುವಾರ ಬೆಳಗ್ಗೆ 10 ಗಂಟೆಗೆ ತರಬೇತಿ ಶಿಬಿರ ನಿಗದಿಯಾಗಿತ್ತು. 10 ಗಂಟೆ ಹೊತ್ತಿಗೆ ಮೂವರು ಮಾತ್ರ ಹಾಜರಿದ್ದರು. 10.30ಕ್ಕೆ ಉದ್ಘಾಟನಾ ಸಮಾರಂಭ ಆರಂಭವಾಗುವ ವೇಳೆಗೆ ಕೇವಲ 11 ಶಾಸಕರಷ್ಟೇ ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭ ಮುಗಿಯುವ ವೇಳೆಗೆ ಶಾಸಕರ ಸಂಖ್ಯೆ 25 ದಾಟಿರಲಿಲ್ಲ. ಮೊದಲ ದಿನದ ಶಿಬಿರದಲ್ಲಿ ಸುಮಾರು 50 ಶಾಸಕರು ಪಾಲ್ಗೊಂಡಿದ್ದರು. ಕೆಲವು ಶಾಸಕರಿಗೆ ಬುಧವಾರ ಮಧ್ಯಾಹ್ನ ಶಿಬಿರದ ಬಗ್ಗೆ ಮಾಹಿತಿ ನೀಡಲಾಗಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳೂರಿಗೆ ಬಂದಿದ್ದರಿಂದ ಆ ಭಾಗದ ಕೆಲ ಶಾಸಕರಿಗೆ ಬರಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ.
ಶಾಸಕಿ ರೂಪಾ ತಿರುಗೇಟು: ತರಬೇತಿ ಶಿಬಿರದಲ್ಲಿ ಸಂವಾದಕ್ಕೂ ಅವಕಾಶ ಕಲ್ಪಿಸಲಾಗಿತ್ತು. ಬಿ.ಎಲ್.ಶಂಕರ್ ಅವರು ವಂಶಾಡಳಿತ ಸಂವಿಧಾನಕ್ಕೆ ಸವಾಲು ಎಂದಿದ್ದನ್ನು ಶಾಸಕಿ ರೂಪಾ ಶಶಿಧರ್ ಸಂವಾದದ ವೇಳೆ ಪ್ರಸ್ತಾಪಿಸಿದರು. ಕ್ರೀಡೆ, ಸಿನಿಮಾ ಇತರೆ ರಂಗಗಳಲ್ಲೂ ತಂದೆ, ತಾಯಿಯಂತೆ ಮಕ್ಕಳು ಅದೇ ಕ್ಷೇತ್ರ ಪ್ರವೇಶಿಸುತ್ತಾರೆ. ಅದರಂತೆ ರಾಜಕೀಯದಲ್ಲೂ ಇದೆ ಎಂದು ರೂಪಾ ಶಶಿಧರ್ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದರು. ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.