ನವದೆಹಲಿ: ರಾಮ ಜನ್ಮಭೂಮಿ ಹಾಗೂ ಬಾಬ್ರಿ ಮಸೀದಿ ವಿವಾದ ಪ್ರಕರಣದ ಅಂತಿಮ ತೀರ್ಪನ್ನು ನಿವೃತ್ತಿಯಾಗುವ ಮೊದಲೇ ಘೋಷಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯಿ ಅವರು ಅಧಿಕೃತ ವಿದೇಶಿ ಪ್ರವಾಸವನ್ನು ರದ್ದುಪಡಿಸಲು ನಿರ್ಧರಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಅಕ್ಟೋಬರ್ 16ರಂದೇ ಅಯೋಧ್ಯೆ ಪ್ರಕರಣದ ವಾದ, ಪ್ರತಿವಾದ ಅಂತ್ಯಗೊಳಿಸಲು ಈಗಾಗಲೇ ಸ್ಪಷ್ಟ ನಿರ್ದೇಶನ ನೀಡಿರುವ ಸುಪ್ರೀಂಕೋರ್ಟ್ ಸಿಜೆಐ, ಅಯೋಧ್ಯೆ ವಿವಾದ ಕುರಿತ ಅಂತಿಮ ತೀರ್ಪು ಬರೆಯಲು ಸಮಯಾವಕಾಶ ಸಾಕಾಗಲಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ಹೇಳಿದೆ.
ಸಿಜೆಐ ರಂಜನ್ ಗೋಗೊಯಿ ಅವರು ಅಧಿಕೃತವಾಗಿ ಅಕ್ಟೋಬರ್ 18ರಿಂದ ದುಬೈ, ಕೈರೋ, ಬ್ರೆಜಿಲ್ ಮತ್ತು ನ್ಯೂಯಾರ್ಕ್ ನಲ್ಲಿ ನಡೆಯಲಿರುವ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗಿತ್ತು. ವಿದೇಶ ಪ್ರವಾಸದಿಂದ ಅಕ್ಟೋಬರ್ 31ಕ್ಕೆ ಭಾರತಕ್ಕೆ ವಾಪಸ್ ಆಗಲು ಕಾರ್ಯಕ್ರಮವನ್ನು ನಿಗದಿಗೊಳಿಸಲಾಗಿತ್ತು. ಸಿಜೆಐ ಪ್ರವಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಸಿರು ನಿಶಾನೆ ನೀಡಿರುವುದಾಗಿ ಸುಪ್ರೀಂಕೋರ್ಟ್ ಮೂಲಗಳು ತಿಳಿಸಿದೆ ಎಂದು ದ ಪ್ರಿಂಟ್ ವರದಿ ಮಾಡಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಕಲಾಪಕ್ಕೆ ಅಕ್ಟೋಬರ್ 17ರಿಂದ ನವೆಂಬರ್ 3ರವರೆಗೆ ರಜೆ. ಈ ಹಿನ್ನೆಲೆಯಲ್ಲಿ ಮಂಗಳವಾರ, ಸಿಜೆಐ ಅವರ ವಿದೇಶ ಪ್ರವಾಸ ರದ್ದುಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಸಿಜೆಐ ಕಚೇರಿ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ. ಆದರೆ ಪ್ರವಾಸ ರದ್ದುಗೊಳಿಸಲು ಯಾವುದೇ ಅಧಿಕೃತ ಕಾರಣ ನೀಡಿಲ್ಲ ಎಂದು ಮೂಲಗಳು ಹೇಳಿವೆ.
ನವೆಂಬರ್ 17ರಂದು ಸಿಜೆಐ ರಂಜನ್ ಗೋಗೊಯಿ ಸೇವೆಯಿಂದ ನಿವೃತ್ತಿಯಾಗಲಿದ್ದು, ಈ ನಿಟ್ಟಿನಲ್ಲಿ ಹೈಪ್ರೊಫೈಲ್ ಅಯೋಧ್ಯೆ ಪ್ರಕರಣದ ಅಂತಿಮ ತೀರ್ಪನ್ನು ಪ್ರಕಟಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ಹೇಳಿದೆ.