ಮೈಸೂರು: ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಮುಂದಿನ ಎರಡು ತಿಂಗಳಲ್ಲಿ ಖಾಯಂ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭರವಸೆ ನೀಡಿದರು.
ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ವತಿಯಿಂದ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಪೌರಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರನ್ನು ಖಾಯಂಗೊಳಿಸಲು ಕೆಲವು ಕಾನೂನು ತೊಡಕುಗಳಿವೆ. ಈಗಿರುವ ನೇಮಕಾತಿ ಕಾನೂನಿನ ಪ್ರಕಾರ ಶೇ.82 ಹುದ್ದೆಗಳನ್ನು ಬೇರೆ ಸಮಾಜದವರಿಗೆ ಕೊಡಬೇಕು ಎಂದಿದೆ. ಬೇರೆ ಸಮುದಾಯದವರು ಈ ಕೆಲಸಕ್ಕೆ ಬಂದರೂ ಇದನ್ನು ಮಾಡುವುದಿಲ್ಲ. ಅವರು ಹೊರಗುತ್ತಿಗೆ ಕೊಡುತ್ತಾರೆ. ಆಗ ಸಮಸ್ಯೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಆದ್ದರಿಂದ ವಿಶೇಷ ನೇಮಕಾತಿ ನಿಯಮ ರೂಪಿಸಲು ಸಮಿತಿ ರಚಿಸಲಾಗಿದೆ. ಅದರ ವರದಿ ಬಂದ ಬಳಿಕ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ.
ಇದರೊಂದಿಗೆ ನಗರ ಪ್ರದೇಶದಲ್ಲಿರುವ 52 ಸಾವಿರ ಪೌರ ಕಾರ್ಮಿಕರೆಲ್ಲರೂ ಸರಕಾರಿ ನೌಕರರಾಗಲಿದ್ದಾರೆ ಎಂದು ಹೇಳಿದರು.
ಇತ್ತೀಚೆಗೆ ಅತಿವೃಷ್ಟಿಯಿಂದಾಗಿ ರಾಜ್ಯದ ಹಲವೆಡೆ ಕೆರೆಕೆಟ್ಟೆಗಳು ಒಡೆದಿವೆ. ನಾಲೆ, ಸೇತುವೆಗಳು ಹಾನಿಗೀಡಾಗಿವೆ. ಒಟ್ಟಾರೆಯಾಗಿ ಜಲಸಂಪನ್ಮೂಲ ಇಲಾಖೆಗೆ 600 ಕೋಟಿ ರೂ.ಗೂ ಅಧಿಕ ನಷ್ಟವಾಗಿದೆ.
-ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ