Advertisement

ಚುನಾವಣೆ ಅಕ್ರಮ ತಡೆಗೆ ಸಿವಿಜಿಲ್‌ ಆ್ಯಪ್‌ ಅಸ್ತ್ರ

07:42 AM Mar 17, 2019 | Team Udayavani |

ರಾಮನಗರ: ಚುನಾವಣೆಯಲ್ಲಿ ಅಕ್ರಮಗಳನ್ನು ಹೊಣೆ ಇರುವ ನಾಗರಿಕರು ಸಹಿಸುವುದಿಲ್ಲ. ಆಯೋಗದ ಅಧಿಕಾರಿಗಳು ಎಷ್ಟೇ ಎಚ್ಚರಿಕೆಯಿಂದ ಇದ್ದರೂ, ಕದ್ದುಮುಚ್ಚಿ ನಡೆಯುವ ಅಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಈ ಅಕ್ರಮಗಳನ್ನು ತಡೆಯಲು ಚುನಾವಣಾ ಆಯೋಗ ದೇಶದ ನಾಗರಿಕರಿಗೆ ಹೊಸ ಅಸ್ತ್ರವನ್ನು ನೀಡಿದೆ. 

Advertisement

ಸಿವಿಜಿಲ್‌ (ವಿಜಿಲೆಂಟ್‌ ಸಿಟಿಜನ್‌) ಮೊಬೈಲ್‌ ಆ್ಯಪ್‌ ಮೂಲಕ ರೆಡ್‌ ಹ್ಯಾಂಡ್‌ ಆಗಿ ಅಕ್ರಮವನ್ನು ತಮ್ಮ ಮೊಬೈಲ್‌ಗ‌ಳ ಮೂಲಕ ನೇರವಾಗಿ ಆಯೋಗಕ್ಕೆ ಮಾಹಿತಿ ನೀಡಬಹುದು. ದೂರುದಾರರ ಹೆಸರು, ವಿಳಾಸವನ್ನು ಆಯೋಗ ಗೌಪ್ಯವಾಗಿ ಇಡುವ ಭರವಸೆಯನ್ನು ನೀಡಿದೆ. 

ನೀವೇನು ಮಾಡಬೇಕು?: ಗೋಗಲ್‌ ಪ್ಲೇಸ್ಟೋರ್‌ನಿಂದ ಆಂಡ್ರಾಯಿಡ್‌ ಆ್ಯಪ್‌ನ್ನು ನಿಮ್ಮ ಮೊಬೈಲ್‌ಗೆ ಡೌನ್‌ಲೋಡ್‌ ಮಾಡಿಕೊಂಡು ನಿಮ್ಮ ಬಗೆಗಿನ ವಿವರಗಳನ್ನು ದಾಖಲಿಸಬೇಕು. ಹೀಗೆ ಸಿದ್ಧವಾದ ಆ್ಯಪ್‌ ಮೂಲಕ ಅಕ್ರಮಗಳನ್ನು ಕಂಡ ಕೂಡಲೇ ಅದರ ವೀಡಿಯೋ ಅಥವಾ ಸ್ಥಿರ ಚಿತ್ರಗಳನ್ನು ತೆಗೆದಯಬೇಕು. ಆ್ಯಪ್‌ ತಂತಾನೆ ಸ್ಥಳದ ಬಗೆಗಿನ ಮಾಹಿತಿಯನ್ನು (ಜಿಪಿಎಸ್‌ ಮೂಲಕ) ಅಪ್‌ಲೋಡ್‌ ಮಾಡುತ್ತದೆ. 

ಚುನಾವಣಾ ಅಕ್ರಮಗಳು ಯಾವುವು?: ಇಂತಹವರಿಗೆ ಮತ ಕೊಡಿ ಎಂದು ಹಣ, ವಸ್ತು ನೀಡಿ ಆಮೀಷವೊಡ್ಡುವುದು. ಮತದಾರರನ್ನು ಮತಗಟ್ಟೆಗಳಿಗೆ ಕರೆದೊಯ್ಯವುದು. ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿವುದು. ತಾವು ಹೇಳಿದವರಿಗೆ ಮತ ಕೊಡಬೇಕು ಎಂದು ಹೆದರಿಸುವುದು. ಮತೀಯ ಭಾವನೆಗಳನ್ನು ಕೆರಳಿಸುವ ಭಾಷಣ, ಬಹಿರಂಗ ಹೇಳಿಕೆ ಕೊಡುವುದು.

ಮಾಧ್ಯಮಗಳಲ್ಲಿ ಒಬ್ಬ ಅಭ್ಯರ್ಥಿಯ ಪರ ಸುದ್ದಿಯ ರೂಪದಲ್ಲಿ ಪ್ರಚಾರ ಮಾಡುವುದು, ಸುಳ್ಳು ಸುದ್ದಿಗಳನ್ನು ಹರಡುವುದು, ಕಟ್ಟಡ ಮುಂತಾದವುಗಳ ಮೇಲೆ ಪ್ರಚಾರ ಸಾಮಾಗ್ರಿಯನ್ನು ಅಂಟಿಸಿ ವಿರೂಪಗೊಳಿಸುವುದು ಇತ್ಯಾದಿಗಳು ಚುನಾವಣಾ ಅಕ್ರಮಗಳಾಗುತ್ತವೆ. ಈ ಅಕ್ರಮಗಳನ್ನು ಕಂಡಾಕ್ಷಣ ನಾಗರಿಕರು ಆ್ಯಪ್‌ ಮೂಲಕ ಸೆರೆಹಿಡಿದು ಆಯೋಗದ ಗಮನ ಸೆಳೆಯಬಹುದು. ಹೀಗೆ ಸಲ್ಲಿಸಿದ ದೂರಿಗೆ ಪ್ರತಿಯಾಗಿ ಆಯೋಗ ದೂರು ಸಂಖ್ಯೆಯನ್ನು ನಿಮಗೆ ನೀಡುತ್ತದೆ.

Advertisement

ಆಯೋಗ ಏನು ಮಾಡುತ್ತದೆ: ನಾಗರಿಕರು ಅಪ್‌ಲೋಡ್‌ ಮಾಡಿದ ದೂರನ್ನು ಮತ್ತು ಆ್ಯಪ್‌ ಸ್ವಯಂ ದಾಖಲಿಸಿಕೊಳ್ಳುವ ಸ್ಥಳದ ಮಾಹಿತಿಯನ್ನು ಆಧರಿಸಿ ಫ್ಲೈಯಿಂಗ್‌ ಸ್ಕ್ವಾಡ್‌ ಅಧಿಕಾರಿಗಳು ಸ್ಥಳಕ್ಕೆ ಕೇವಲ 15 ನಿಮಿಷಗಳಲ್ಲಿ ಭೇಟಿ ಕೊಟ್ಟು ಪರಿಶೀಲಿಸುವರು. 30 ನಿಮಿಷಗಳಲ್ಲಿ ಪರಿಶೀಲನಾ ವರದಿಯನ್ನು ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳ ಗಮನ ಸೆಳೆಯುವರು.

ಕೇವಲ 100 ನಿಮಿಷಗಳಲ್ಲಿ ಎಲ್ಲಾ ಪ್ರಕ್ರಿಯೆ ಮುಗಿದು, ದೂರಿನ ಸ್ಥಿತಿಯ ಬಗ್ಗೆ ಅಧಿಕಾರಿಗಳು ದೂರುದಾರರಿಗೆ ಮಾಹಿತಿ ನೀಡುತ್ತಾರೆ. ಈಗಾಗಲೇ ದೇಶಾದ್ಯಂತ 1 ಲಕ್ಷಕ್ಕೂ ಅಧಿಕ ನಾಗರಿಕರು ಈ ಆ್ಯಪ್‌ ಡೌನಲೋಡ್‌ ಮಾಡಿಕೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಚುನಾವಣೆಯನ್ನು ಪಾರದರ್ಶಕವಾಗಿ, ಮುಕ್ತವಾಗಿ ನಡೆಯಬೇಕು ಎಂಬ ಆಯೋಗದ ಆಶಯಕ್ಕೆ ಪ್ರಜೆಗಳು ಸ್ಪಂದಿಸಬೇಕಾಗಿದೆ.

ಚುನಾವಣಾ ಅಕ್ರಮಗಳನ್ನು ತಡೆಯುವ ಸಲುವಾಗಿ ಆಯೋಗ ಹಲವಾರು ತಂಡಗಳನ್ನು ರಚಿಸಿದೆ. ಈ ತಂಡಗಳು ಸದ್ಯ ಅಕ್ರಮಗಳ ಕಡಿವಾಣಕ್ಕೆ ಮುಂದಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕರು ಅಕ್ರಮಗಳನ್ನು ತಡೆಯಲು ಅಧಿಕಾರಿಗಳೊಂದಿಗೆ ಸಹಕರಿಸಬೇಕಾಗಿದೆ. ನಾಗರಿಕರು ತಮಗೆ ಕಂಡು ಬಂದ ಅಕ್ರಮಗಳನ್ನು ಸಿವಿಜಿಲ್‌ ಆ್ಯಪ್‌ ಮೂಲಕ ಆಯೋಗದ ಗಮನ ಸೆಳೆಯಬಹುದು. 
-ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ, ಚುನಾವಣಾಧಿಕಾರಿ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ

* ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next