Advertisement

ಧರಣಿ ಬಿಟ್ಟು ನಗರ ಸ್ವಚ್ಛತೆ ಕಡೆ ಪೌರಕಾರ್ಮಿಕರು 

12:43 PM Jun 14, 2017 | Team Udayavani |

ಬೆಂಗಳೂರು: ಸೇವೆ ಕಾಯಂಗೆ ಆಗ್ರಹಿಸಿ ಗುತ್ತಿಗೆ ನಗರದ ಪೌರ ಕಾರ್ಮಿಕರು ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಮತ್ತು ಮೇಯರ್‌ ಜಿ.ಪದ್ಮಾವತಿ ಅವರ ಮಾತುಕತೆಯಿಂದ ಫ‌ಲಪ್ರದವಾಗಿದೆ. ಗುತ್ತಿಗೆ ಪೌರಕಾರ್ಮಿಕರು ಪ್ರತಿಭಟನೆ ಅಂತ್ಯಗೊಳಿಸಿದ್ದಾರೆ.

Advertisement

“ಹೈಕೋರ್ಟ್‌ ಆದೇಶದಂತೆ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶ್ವಾಸನೆಯಂತೆ ಕಳೆದ ಮಾರ್ಚ್‌ನಲ್ಲೇ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂ ಮಾಡಬೇಕಿತ್ತು. ಆದರೆ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ,’ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಸಾವಿರಾರು ಪೌರಕಾರ್ಮಿಕರು ಕಳೆದ ಎರಡು ದಿನಗಳಿಂದ ನಗರದ ಸ್ವಚ್ಛತಾ ಕಾರ್ಯ ಕೈಬಿಟ್ಟು ಬನ್ನಪ್ಪ ಪಾರ್ಕ್‌ನಲ್ಲಿ ಮುಷ್ಕರ ಆರಂಭಿಸಿದ್ದರು. 

ಮಂಗಳವಾರ ಮೇಯರ್‌ ಪದ್ಮಾವತಿ ಹಾಗೂ ಸಚಿವ ಆಂಜನೇಯ ಅವರು ಮುಷ್ಕರ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಇದಕ್ಕೆ ಒಪ್ಪಿದ ನೌಕರರು ಮುಷ್ಕರ ಅಂತ್ಯಗೊಳಿಸುವ ತೀರ್ಮಾನ ಪ್ರಕಟಿಸಿದರು. ಪೌರಕಾರ್ಮಿಕರ ಸಂಘದ ಅಧ್ಯಕ್ಷ ನಾರಾಯಣ, ಮುಖಂಡರಾದ ನಾಗರಾಜ್‌, ಆಂಜನೇಯ, ಸುರೇಶ್‌ಬಾಬು, ಶ್ರೀನಿವಾಸ್‌ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

“ನಾ ಮಾಟೇ ಶಾಸನಂ’: ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಎಚ್‌.ಆಂಜನೇಯ, “ಇಂದಿನಿಂದ ಗುತ್ತಿಗೆ ಮಾಫಿಯಾ ರದ್ದಾಗಲಿದೆ. ಇನ್ನು ಮುಂದೆ ಪಾಲಿಕೆಯೇ ನೇರವಾಗಿ ಕಾರ್ಮಿಕರ ಖಾತೆಗಳಿಗೆ ವೇತನ ಜಮಾ ಮಾಡಲಿದೆ. ನಮ್ಮದು ಕಾರ್ಮಿಕರ ಪರ ಸರ್ಕಾರ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟದಲ್ಲಿ ಸೂಚನೆ ನೀಡಿದ್ದಾರೆ. ಪಾಸ್‌ಬುಕ್‌ಗೆ ಸಹಿ ಹಾಕಿಸಿಕೊಂಡು ಗುತ್ತಿಗೆದಾರರು ಹಣ ಲಪಟಾಯಿಸುತ್ತಿದ್ದ ಪದ್ಧತಿ ಇಂದಿನಿಂದ ರದ್ದಾಗಲಿದೆ ಎಂದ ಅವರು “ನಾ  ಮಾಟೇ ಶಾಸನಂ’ (ನನ್ನ ಮಾತೇ ಶಾಸನ) ಎಂದು ಬಾಹುಬಲಿ ಸಿನಿಮಾದ ಡೈಲಾಗ್‌ ಹೇಳಿ ಪ್ರತಿಭಟನಾಕಾರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. 

ಮೇಯರ್‌ಗೆ ಮುಜುಗರ: ಧರಣಿ ನಿರತರನ್ನು ಸಂತೈಸುತ್ತಿದ್ದ ಮೇಯರ್‌ ಪದ್ಮಾವತಿ ಅವರು ಪ್ರತಿಭಟನೆ ಕೈಬಿಡಿ “ನಮ್ಮ ಮೇಲೆ ನಂಬಿಕೆ ಇಲ್ಲವೇ?’ ಎಂದು ಪ್ರಶ್ನಿಸಿದರು. ಇದಕ್ಕೆ ಗುಂಪಿನಲ್ಲಿದ್ದ ಕೆಲವರು. “ನಿಮ್ಮ ಮೇಲೆ ನಂಬಿಕೆ ಇಲ್ಲ’ ಎಂದು ಕೂಗಿದರು. ಈ ಪ್ರತಿಕ್ರಿಯೆ ನಿರೀಕ್ಷಿಸದ ಮೇಯರ್‌ ಕೆಲಕಾಲ ತಬ್ಬಿಬ್ಟಾದರು.  ಬಳಿಕ ಸಾವರಿಕೊಂಡು “ಸಿದ್ದರಾಮಯ್ಯ ಅವರಿಗೆ ನಿಮ್ಮ ಮೇಲೆ ವಿಶೇಷ ಪ್ರೀತಿಯಿದೆ. ಈ ಸರ್ಕಾರದ ಅವಧಿಯಲ್ಲೇ ಎಲ್ಲಾ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಲಾಗುವುದು. ಅದಕ್ಕೂ ಮೊದಲ ಕೆಲ ಕಾನೂನುಗಳನ್ನು ಬದಲಾಯಿಸಬೇಕಿದೆ. ಹೀಗಾಗಿ ಸ್ವಲ್ಪ ತಡವಾಗಿದ್ದು, ಪೌರಕಾರ್ಮಿಕರು ಸಹಕರಿಬೇಕು,’ ಎಂದು ಮನವಿ ಮಾಡಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next