Advertisement

ಪೌರಕಾರ್ಮಿಕರು ಸ್ವಚ್ಛತಾ ನಾಯಕರು

12:34 PM Dec 12, 2018 | |

ಬೆಂಗಳೂರು: ಪೌರಕಾರ್ಮಿಕರು ಬೆಂಗಳೂರು ಸ್ವಚ್ಛತೆ ಕಾಪಾಡುವ ನಾಯಕರಿದ್ದಂತೆ ಎಂದು ಮೇಯರ್‌ ಗಂಗಾಂಬಿಕೆ ಅವರು ಅಭಿಪ್ರಾಯಪಟ್ಟರು.

Advertisement

ಮಂಗಳವಾರ ಸೂರ್ಯಚಂದ್ರ ಹೆಲ್ಫಿಂಗ್‌ ಪ್ರತಿಷ್ಠಾನ, ಐಪಿಡಿ ಸಾಲಪ್ಪ ಸ್ಮಾರಕ ಸಮಿತಿ ಹಾಗೂ ಪೌರಕಾರ್ಮಿಕರ ಸಂಘಟನೆಗಳ ಸಹಯೋಗದಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಯೊಜಿಸಿದ್ದ “ಐಪಿಡಿ ಸಾಲಪ್ಪ ಅವರ 89ನೇ ಜನ್ಮದಿನೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಗರದ ಸ್ವಚ್ಛಗೊಳಿಸುವಲ್ಲಿ ಪೌರಕಾರ್ಮಿಕರ ಶ್ರಮ ಹೆಚ್ಚಿದೆ. ಅವರಿಲ್ಲದೆ ನಗರವನ್ನು ಸುಂದರವಾಗಿಡಲು ಸಾಧ್ಯವಿಲ್ಲ.

ಅವರ ಶ್ರಮಕ್ಕೆ ಪಾಲಿಕೆ ಸದಾ ಋಣಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಇಂದು ಪೌರಕಾರ್ಮಿಕರಿಗೆ ಕನಿಷ್ಠ ವೇತನ ನೀಡುವುದಲ್ಲದೆ, ಅವರ ಖಾತೆಗೆ ನೇರ ವೇತನ ಜಮೆ ಮಾಡಲಾಗುತ್ತಿದೆ. ಅಗತ್ಯ ಸೌಲಭ್ಯಗಳನ್ನು ಕೂಡಾ ಕಲ್ಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅವರಿಗಾಗಿ ಇನ್ನಷ್ಟು ಉತ್ತಮ ಯೋಜನೆಗಳನ್ನು ರೂಪಿಸಲಾಗುವುದು ಎಂದು ಭರವಸೆ ನೀಡಿದರು.

ಸಾಲಪ್ಪ ಅವರು ಪೌರ ಕಾರ್ಮಿಕರ ಏಳಿಗೆಗಾಗಿ ತುಂಬಾ ಶ್ರಮಿಸಿದ್ದಾರೆ. ಪೌರಕಾರ್ಮಿಕರು ಕೂಡಾ ಸಾಮಾನ್ಯ ಜನರ ರೀತಿ ಬದುಕಬೇಕು, ಅವರ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಬೇಕು ಎಂಬುದು ಸಾಲಪ್ಪ ಅವರು ಕನಸಾಗಿತ್ತು. ಅದನ್ನು ಈಡೇರಿಸುವ ನಿಟ್ಟಿನಲ್ಲಿ ಪಾಲಿಕೆ ಶ್ರಮವಹಿಸುತ್ತಿದೆ ಎಂದರು.

ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಮಾತನಾಡಿ, ಬಿಬಿಎಂಪಿ ವತಿಯಿಂದ ಪೌರಕಾರ್ಮಿಕರಿಗೆ ಬೇಕಾದಂತಹ ಸಹಕಾರ ನೀಡುತ್ತಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಮುಂದಿನ ಬಜೆಟ್‌ನಲ್ಲಿ ಪೌರಕಾರ್ಮಿಕರಿಗಾಗಿ ಇನ್ನಷ್ಟು ಹೊಸ ಯೋಜನೆ ಜಾರಿ ತರಲಾಗವುದು ಎಂದು ತಿಳಿಸಿದರು.
ಈ ವೇಳೆ ಸೂರ್ಯಚಂದ್ರ ಹೆಲ್ಫಿಂಗ್‌ ಪ್ರತಿಷ್ಠಾನದ ಸಂಸ್ಥಾಪಕ ಡಾ. ಸೂರ್ಯಚಂದ್ರ ಮಂಜಣ್ಣ ಅವರು ಪೌರಕಾರ್ಮಿಕ ಸಮಸ್ಯೆಗಳನ್ನು ಕೌನ್ಸಿಲ್‌ ಸಭೆಯಲ್ಲಿ ಚರ್ಚಿಸಿ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮೇಯರ್‌ ಗಂಗಾಂಬಿಕೆ ಅವರಿಗೆ ಮನವಿಪತ್ರ ಸಲ್ಲಿಸಿದರು.

Advertisement

ಕಾರ್ಯಕ್ರಮಕ್ಕೂ ಮುಂಚೆ ಚೈತನ್ಯ ರಥದಲ್ಲಿ ಐಪಿಡಿ ಸಾಲಪ್ಪ ಅವರ ಪ್ರತಿಮೆಯನ್ನಿರಿಸಿ ಜಗಜೀವನ ರಾಂ ನಗರದ ಐಪಿಡಿ ಸಾಲಪ್ಪ ಬಡಾವಣೆಯಿಂದ ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದವರೆಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಗೆ ಕಲಾತಂಡಗಳು ಸಾಥ್‌ ನೀಡಿದವು.
ಪಾಲಿಕೆ ವಿಶೇಷ ಆಯುಕ್ತ ರಂದೀಪ್‌ ಸೇರಿದಂತೆ ಪಾಲಿಕೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next