Advertisement
ಮಿತ ನೀರಿನ ಬೆಳೆಗೂ ಕಾಲುವೆ ಕೊನೆಭಾಗದ ಜಮೀನುಗಳಿಗೆ ನೀರು ಸಿಗುತ್ತಿಲ್ಲವೆಂಬ ಕೂಗಿನ ಮಧ್ಯೆ ಕಾಲುವೆ ಒತ್ತುವರಿಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಚರಂಡಿಗಿಂತಲೂ ಕಿರಿದೆಂಬಂತೆ 40ನೇ ಉಪಕಾಲುವೆಯನ್ನು ಎಡ-ಬಲದಲ್ಲಿ ಒತ್ತುವರಿ ಮಾಡಲಾಗಿದೆ. ಇದೀಗ ನೀರು ಬಿಟ್ಟಾಗ ಕಾಲುವೆ ತುಂಬಿ ನೀರು, ಎಡ-ಬಲದಲ್ಲಿ ಜಿಗಿದಾಟ ನಡೆಸಿ ಕೆಳಭಾಗಕ್ಕೆ ಹೋಗಬೇಕಿದೆ.
Related Articles
Advertisement
ಇಲ್ಲಿನ 40ನೇ ಉಪಕಾಲುವೆ ನಗರದೊಳಗಿಂದ ಕೆಳಭಾಗಕ್ಕೆ ಸಾಗುತ್ತದೆ. ಇಲಾಖೆ ಮಾಹಿತಿ ಪ್ರಕಾರ ಕಾಲುವೆ ಎಡಭಾಗದಲ್ಲಿ 33 ಅಡಿ, ಬಲಭಾಗದಲ್ಲಿ 66 ಅಡಿ ಉದ್ದವಿದೆ. ಇಷ್ಟು ದೊಡ್ಡ ವಿಸ್ತೀರ್ಣವಿದ್ದರೂ ಈ ಕಾಲುವೆ ಎಡ-ಬಲ ಒತ್ತುವರಿಯಿಂದ ಚರಂಡಿಯಾಗಿದೆ. ಒತ್ತುವರಿಗೆ ಸಂಬಂಧಿಸಿ ನ್ಯಾಯಾಲಯದಲ್ಲಿ ಪ್ರಕರಣ ನಡೆದಿರುವುದರಿಂದ ಈ ಬಗ್ಗೆ ಕೋರ್ಟ್‌ನಿಂದಲೇ ಇಲಾಖೆಗೆ ಮಾಹಿತಿ ಕೇಳಲಾಗಿದೆ. ನಕ್ಷೆ ಆಧರಿಸಿ ಮಾಹಿತಿ ನೀಡುವುದಕ್ಕೆ ಮಾತ್ರ ನೀರಾವರಿ ಇಲಾಖೆ ಸೀಮಿತವಾಗಿದ್ದರಿಂದ ಒತ್ತುವರಿಗೆ ಪರಿಹಾರ ಇಲ್ಲವಾಗಿದೆ.
ಇದನ್ನೂ ಓದಿ: 50-60 ವರ್ಷ ಮೇಲ್ಪಟ್ಟರು ಜಿಮ್ ಮಾಡುವಾಗ ಟ್ರೈನರ್ ಬಳಿ ಸಲಹೆ ಪಡೆಯುವುದು ಉತ್ತಮ : ನಟ ಪ್ರೇಮ್
ರೈತರ ಜಮೀನಿಗೆ ಚರಂಡಿ ನೀರು
40ನೇ ಉಪಕಾಲುವೆ ಸಿಟಿ ಪ್ರವೇಶಿಸುತ್ತಿದ್ದಂತೆ ಒತ್ತುವರಿ ಕಾಣಿಸುತ್ತದೆ. ಎರಡು ಬದಿಯಲ್ಲೂ ಟೆಂಟ್‌ಗಳನ್ನು ಹಾಕಲಾಗಿದೆ. ಚರಂಡಿ ನೀರನ್ನು ನೇರವಾಗಿ ಪೈಪ್ ಮುಖಾಂತರ ಕಾಲುವೆಗೆ ಬಿಡಲಾಗುತ್ತಿದೆ. ಇದೇ ನೀರು ಸುಕಾಲಪೇಟೆ, ಅಮರಾಪುರ ಭಾಗದ ಜಮೀನುಗಳಿಗೆ ಸಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಾಗ ಎಲ್ಲ ತ್ಯಾಜ್ಯ ಕೊಚ್ಚಿ ಹೋಗಿ ರೈತರ ಜಮೀನು ಸೇರುತ್ತಿದೆ. ಸಹಜವಾಗಿಯೇ ಇದು ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಜೋಳಕ್ಕೆ ಬಿಟ್ಟ ನೀರು ಭಾರಿ ಪ್ರಮಾಣದಲ್ಲಿ ನೀರು ಬಂದಿದ್ದನ್ನು ಕಂಡ ಸಿಟಿಯ ಮಂದಿಯೇ ಬೆರಗಾದರು. ಕೆಳಭಾಗಕ್ಕೆ ಧುಮ್ಮಿಕ್ಕಿ ಹರಿದ ಗಂಗೆಯಿಂದ ತ್ಯಾಜ್ಯ ಕೊಚ್ಚಿ ಹೋಗಿದೆ. ಅಲ್ಲಲ್ಲಿ ಕಾಲುವೆಗೆ ಖಾಸಗಿ ವ್ಯಕ್ತಿಗಳೇ ತಡೆಗೋಡೆ ನಿರ್ಮಿಸಿದ್ದರಿಂದ ನೀರು ಸರಾಗವಾಗಿ ಹರಿಯದಂತಾಗಿತ್ತು. ಕೆಲವರು ಕಾಲುವೆ ಮೇಲೆ ಪಿಲ್ಲರ್ ಹಾಕಿ ಕಟ್ಟಡ ಕಟ್ಟಿದ್ದಲ್ಲದೇ, ತಗಡುಗಳನ್ನು ಕೂಡ ಚರಂಡಿಗೆ ಹೊಂದಿಕೊಂಡು ಹಾಕಿದ್ದರಿಂದ ಕಾಲುವೆ ಕಣ್ಣಿಗೆ ಬೀಳದಂತಾಗಿದೆ. ಕೆಳಭಾಗದ ಜೋಳದ ಬೆಳೆಗೆ ನೀರು ಹೋಗುತ್ತದೆಯೋ, ಇಲ್ಲವೋ ಎಂಬುದೇ ಯಕ್ಷಪ್ರಶ್ನೆಯಾಗಿದ್ದು, ಕೊನೆಭಾಗದ ರೈತರು ಸಂಕಷ್ಟ ಎದುರಿಸುವಂತಾಗಿದೆ.
ಕೊನೆಭಾಗದ ಜೋಳದ ಬೆಳೆ ಉಳಿಸಲು 40ನೇ ಉಪ ಕಾಲುವೆಗೆ ನೀರು ಬಿಡಲಾಗಿದೆ. ಒತ್ತುವರಿಗೆ ಸಂಬಂಧಿಸಿ ಕೋರ್ಟ್ ಮಾಹಿತಿ ಕೇಳಿದ್ದು, ನೀಡಲಾಗುವುದು. ಅಲ್ಲಿನ ಸಮಸ್ಯೆ ಬಗ್ಗೆ ನನಗೆ ಗೊತ್ತಿಲ್ಲ. ಅಲ್ಲಿನ ಮೇಸ್ತಿಯನ್ನು ಕೇಳುವೆ. ಈಗ ಹಬ್ಬ ಇರುವುದರಿಂದ ಅವರು ಸಿಗಲ್ಲ. -ಹನುಮಂತಪ್ಪ, ಎಇಇ, ನೀರಾವರಿ ಇಲಾಖೆ, ತುರುವಿಹಾಳ ಉಪವಿಭಾಗ, ಸಿಂಧನೂರು.
–ಯಮನಪ್ಪ ಪವಾರ