ಬೆಂಗಳೂರು: ನಗರ ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಬುಧವಾರ ಪ್ರಕಟಗೊಂಡಿದ್ದು, ಒಟ್ಟಾರೆ 87,98,335 ಮತದಾರರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಕ್ಕು ಚಲಾಯಿಸಲಿದ್ದಾರೆ.
ಈ ಸಲ 3,16,467 ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದು, ಇದರಿಂದ ಅಂತಿಮ ಪಟ್ಟಿಯಲ್ಲಿ ನಗರ ಜಿಲ್ಲಾ ವ್ಯಾಪ್ತಿಯಲ್ಲಿ 46,04,190 ಪುರುಷ ಮತ್ತು 41,92,706 ಮಹಿಳೆಯರು, 1,439 ತೃತೀಯ ಲಿಂಗಿಗಳು ಸೇರಿ 87,98,335 ಮತದಾರರು ಇದ್ದಾರೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೇರ್ಪಡೆಗೆ ಈಗಲೂ ಅವಕಾಶ: ಕರಡು ಮತದಾರರ ಪಟ್ಟಿಗೆ ಸೇರ್ಪಡೆ, ತೆಗೆದುಹಾಕುವುದು, ಪರಿಷ್ಕರಣೆ ಸೇರಿದಂತೆ ಒಟ್ಟಾರೆ 5,37,717 ಅರ್ಜಿಗಳು ಸಲ್ಲಿಕೆಯಾಗಿದ್ದವು. ಆ ಪೈಕಿ 4,66,809 ಅರ್ಜಿಗಳು ಸ್ವೀಕೃತಗೊಂಡಿವೆ. ಈ ಪೈಕಿ ಸೇರ್ಪಡೆಗೆ ಸಂಬಂಧಿಸಿದಂತೆ 1.58 ಲಕ್ಷ ಪುರುಷ ಮತ್ತು 1.57 ಲಕ್ಷ ಮಹಿಳೆಯರು ಸೇರಿ 3.16 ಲಕ್ಷ ಅರ್ಜಿಗಳು ಬಂದಿದ್ದವು ಎಂದರು.
ಮಾರ್ಚ್ 5ಕ್ಕೆ ಇವಿಎಂ ತಪಾಸಣೆ: ಕಳೆದ ಬಾರಿಗೆ ಹೋಲಿಸಿದರೆ 500 ಮತಗಟ್ಟೆಗಳು ಹೆಚ್ಚಿವೆ. ಇವಿಎಂ ಜತೆಗೆ ಇದೇ ಮೊದಲ ಬಾರಿಗೆ ವಿವಿಪ್ಯಾಟ್‌ಗಳನ್ನು ಪರಿಚಯಿಸಲಾಗುತ್ತಿದೆ. ಒಂದು ಮತಗಟ್ಟೆಯಲ್ಲಿ ಗರಿಷ್ಠ 1,400 ಮತದಾರರು ಇರುತ್ತಾರೆ. ಈಗಾಗಲೇ 2 ಸಾವಿರ ವಿವಿಪ್ಯಾಟ್‌ಗಳು ಬಂದಿವೆ. ಮಾರ್ಚ್ 5ರಿಂದ ಮೊದಲ ಹಂತದ ಇವಿಎಂ ತಪಾಸಣೆ ಕಾರ್ಯ ನಡೆಯಲಿದೆ ಎಂದು ಹೇಳಿದರು.
ಚುನಾವಣೆ ಘೋಷಣೆಯಾದ 24 ಗಂಟೆಯೊಳಗೆ ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಯಾವೊಂದು ಬ್ಯಾನರ್, ಬಂಟಿಂಗ್, ಫ್ಲೆಕ್ಸ್
ಇರುವಂತಿಲ್ಲ. ಈ ಸಂಬಂಧ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ವಿಶೇಷ ಚುನಾವಣಾ ಆಯುಕ್ತ ಮನೋಜ್‌ಕುಮಾರ್ ಮೀನಾ, ವಿಶೇಷ ಆಯುಕ್ತರಾದ ಮನೋಜ್ ರಾಜನ್, ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.