ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್, ಟ್ವಿಟರ್‌ಗಳ ಮೂಲಕ ಜಾಗೃತಿ ಮೂಡಿಸಲು, ದೂರುಗಳನ್ನು ಸ್ವೀಕರಿಸಲು ಮುಂದಾಗಿರುವ “ಬೆಂಗಳೂರು ಸಿಟಿ ಪೊಲೀಸ್’ ಟ್ವಿಟರ್ ಖಾತೆಯ ಫಾಲೋವರ್ಸ್ ಸಂಖ್ಯೆ 10 ಲಕ್ಷ ದಾಟಿದೆ!
ತನ್ಮೂಲಕ ದೇಶದಲ್ಲೇ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಪೊಲೀಸ್ ಇಲಾಖೆಯ ಅಧಿಕೃತ ಟ್ವಿಟರ್ ಖಾತೆಗಳ ಪೈಕಿ ಬೆಂಗಳೂರು ಸಿಟಿ ಪೊಲೀಸ್ ಟ್ವಿಟರ್ ಖಾತೆ ಮೊದಲ ಸ್ಥಾನದಲ್ಲಿದ್ದು, ಎರಡನೇ ಸ್ಥಾನ ಮುಂಬೈ ಪೊಲೀಸ್ ಆಗಿದೆ.
2012ರಲ್ಲಿ ಫೇಸ್‌ಬುಕ್ ಹಾಗೂ ಟ್ವಿಟರ್ ಖಾತೆಯನ್ನು ನಗರ ಪೊಲೀಸರು ಆರಂಭಿಸಿದ್ದರು. ಅನಂತರ 2015ರಲ್ಲಿ ಅಂದಿನ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ಪೊಲೀಸ್ ಕಮಿಷನರ್ ಮತ್ತು ಬೆಂಗಳೂರು ಪೊಲೀಸ್ ಎಂಬ ಹೆಸರಿನ ಟ್ವಿಟರ್ ಖಾತೆಯನ್ನು ತೆರೆದು, ಇಲ್ಲಿಯೇ ಜಾಗೃತಿ ಕಾರ್ಯಕ್ರಮಗಳನ್ನು ಪ್ರಚಾರ ಮಾಡಿದರು.
ಇದರಿಂದ ಕೆಲ ದಿನಗಳಲ್ಲೇ ಸಾವಿರಾರು ಮಂದಿ ಈ ಟ್ವಿಟರ್ ಖಾತೆಯನ್ನು ಫಾಲೋ ಮಾಡಲು ಆರಂಭಿಸಿದರು. ಈ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯವಾಗುತ್ತಿರುವ ಸಾಮಾಜಿಕ ಜಾಲಾತಾಣವನ್ನು ನಿರ್ವಹಿಸಲು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್‌ನಲ್ಲಿ ಪ್ರತ್ಯೇಕ ಸೋಷಿಯಲ್ ಮಿಡಿಯಾ ನಿರ್ವಹಣೆ ವಿಭಾಗ ತೆರೆದು, ಡಿಸಿಪಿ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ 12 ಮಂದಿ ಸಿಬ್ಬಂದಿ ಇದನ್ನು ನಿರ್ವಹಿಸುತ್ತಿದ್ದಾರೆ.
ಟ್ವಿಟರ್ ಖಾತೆ ಜನಪ್ರಿಯವಾಗುತ್ತಿದ್ದಂತೆ ಪೊಲೀಸ್ ಕಮಿಷನರ್, ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತರು, ಸಂಚಾರ ಪೊಲೀಸ್, 7 ಡಿಸಿಪಿಗಳು, ಮೂವರು ಸಂಚಾರ ವಿಭಾಗದ ಡಿಸಿಪಿ, ಆಡಳಿತ ವಿಭಾಗದ ಡಿಸಿಪಿ, ಎಸಿಪಿ ಹೀಗೆ ನಗರದಲ್ಲಿರುವ ಎಲ್ಲ ಹಿರಿಯ ಹುದ್ದೆಗಳು ಹಾಗೂ ಠಾಣೆ ಹೆಸರಿನಲ್ಲಿ ಟ್ವಿಟರ್ ಖಾತೆಗಳನ್ನು ತೆರೆಯಲಾಯಿತು.
ಇದರ ಪ್ರಯೋಜನ ಪಡೆದುಕೊಂಡ ನಗರದ ಜನರು ತಮ್ಮ ದೂರುಗಳನ್ನು ಇಲ್ಲಿಯೇ ಕೊಡಲು ಆರಂಭಿಸಿದರು. ಪೊಲೀಸ್ ಆಯುಕ್ತರ ಖಾತೆಗೆ ಟ್ಯಾಗ್ ಮಾಡುತ್ತಿದ್ದರು. ಇದನ್ನು ಗಮನಿಸಿದ ಸೋಷಿಯಲ್ ಮಿಡಿಯಾ ಸಿಬ್ಬಂದಿ ಕೂಡಲೇ ಸಂಬಂಧಪಟ್ಟ ಠಾಣೆ ಅಧಿಕಾರಿಗಳಿಗೆ ವರ್ಗಾಹಿಸಿ ಕ್ರಮಕ್ಕೆ ಸೂಚಿಸುತ್ತಿದ್ದರು.
ಟ್ವಿಟರ್‌ನ ಅನುಕೂಲ: ಈ ಟ್ವಿಟರ್ ಖಾತೆ ಮೂಲಕ ಸಾರ್ವಜನಿಕರ ಗೊಂದಲ ಹಾಗೂ ಕೆಲ ಅನಗತ್ಯ ವದಂತಿಗಳಿಗೆ ಪರಿಹಾರ ಸೂಚಿಸಲಾಯಿತು. ಅದೇ ರೀತಿ ಸಂಚಾರ ದಟ್ಟಣೆಯ ಮಾಹಿತಿ, ಪ್ರತಿಭಟನೆ ಮಾಹಿತಿ, ಯಾವ ಮಾರ್ಗ ಬಳಸಿದರೆ ಬೇಗ ನಿರ್ದಿಷ್ಟ ಸ್ಥಳ ತಲುಪಬಹುದು ಎಂಬೆಲ್ಲ ಮಾಹಿತಿ ಪ್ರಕಟಿಸಲಾಗಿದೆ.