Advertisement

ನಗರಕ್ಕೂ ಬಂತು ಡಬಲ್‌ ಕೋನಿಕಲ್‌ ಪೋಲ್‌

10:00 AM Aug 06, 2018 | Team Udayavani |

ಮಹಾನಗರ: ನಗರದ ಕಂಕನಾಡಿ-ನಂದಿಗುಡ್ಡ ನಡುವಿನ ಹೊಸ ಕಾಂಕ್ರಿಟ್‌ ರಸ್ತೆಗೆ ಡಬಲ್‌ ಕೋನಿಕಲ್‌ ಪೋಲ್‌ ಎಂಬ ವಿನೂತನ ಮಾದರಿಯ ಬೀದಿದೀಪವನ್ನು ಅಳವಡಿಸಲಾಗಿದೆ.ವಿಶೇಷ ಅಂದರೆ, ಬೆಳಗಾವಿ ಹೊರತು ಪಡಿಸಿದರೆ, ಈ ರೀತಿಯ ಹೈಟೆಕ್‌ ಬೀದಿ ದೀಪವನ್ನು ಪರಿಚಯಿಸಿರುವ 2ನೇ ಮಹಾನಗರ ಎಂಬ ಹೆಗ್ಗಳಿಕೆಗೂ ಮಂಗಳೂರು ಪಾಲಿಕೆ ಈಗ ಪಾತ್ರವಾಗಿದೆ.

Advertisement

ಕಂಕನಾಡಿ ಫಾದರ್‌ ಮುಲ್ಲರ್‌ ವೃತ್ತದಿಂದ ವೆಲೆನ್ಸಿಯಾ ಜೆಪ್ಪು ಸೆಮಿನರಿ ಮೂಲಕ ನಂದಿಗುಡ್ಡದ ಕೋಟಿ ಚೆನ್ನಯ ವೃತ್ತದ ವರೆಗಿನ 1.3 ಕಿ.ಮೀ. ವ್ಯಾಪ್ತಿಯಲ್ಲಿ 48 ಕಂಬ ಹಾಕಲಾಗಿದ್ದು, ಇದರಲ್ಲಿ ಡಬಲ್‌ ಕೋನಿಕಲ್‌ ಪೋಲ್‌ ದೀಪ ಉರಿಯುತ್ತಿದೆ. ಈ ಬೀದಿ ದೀಪಗಳು ಇತರ ದೀಪಗಳಿಂದ ವಿಭಿನ್ನವಾಗಿದ್ದು, ಹಲವು ಬಣ್ಣಗಳಲ್ಲಿ ಕಂಗೊಳಿಸುತ್ತಿದೆ. ಇದಕ್ಕಾಗಿ ಪಾಲಿಕೆ 80 ಲಕ್ಷ ರೂ. ವ್ಯಯಿಸಿದೆ.

ಡಬಲ್‌ ಕೋನಿಕಲ್‌ ಪೋಲ್‌
ಡಬಲ್‌ ಕೋನಿಕಲ್‌ ಪೋಲ್‌ ಅಂದರೆ ರಸ್ತೆ ವಿಭಾಜಕದಲ್ಲಿ ಅಳವಡಿಸಿದ ವಿದ್ಯುತ್‌ ಕಂಬ. ಒಂದೇ ತಳದಲ್ಲಿ ಎರಡು ಕಂಬಗಳನ್ನು ಅಳವಡಿಸಲಾಗಿದೆ. ಅದು ಉಭಯ ಕಡೆಯ ರಸ್ತೆಗಳಿಗೆ ವಾಲಿಕೊಂಡಿದ್ದು, ಅದರಲ್ಲಿ ಎಲ್‌ ಇಡಿ ಲೈಟ್‌ಗಳನ್ನು ಅಳವಡಿಸಲಾಗಿದೆ. ಇದು ಉರಿಯುವಾಗ ಆಕರ್ಷಕವಾಗಿ ಕಾಣುತ್ತದೆ.

ಬಣ್ಣ ಬಣ್ಣದ ದೀಪ
ಡಬಲ್‌ ಕೋನಿಕಲ್‌ ಪೋಲ್‌ ಮಧ್ಯೆ ಮಲ್ಟಿ ಕಲರ್‌ ಪೋಲ್‌ ಇದೆ. ಪ್ರತಿ ಎರಡು ನಿಮಿಷಕ್ಕೊಮ್ಮೆ 8 ಬಣ್ಣಗಳಲ್ಲಿ ಈ ದೀಪಗಳು ಬದಲಾಗುತ್ತವೆ. ಈ ಕಂಬವು ಹಲವು ಬಣ್ಣಗಳಿಂದ ಮಿನುಗುತ್ತಿರುತ್ತವೆ. ಮಧ್ಯ ರಾತ್ರಿ ಪ್ರಮುಖ ಕಂಬದ ಎಲ್‌ಇಡಿ ದೀಪಗಳು ಆಫ್‌ ಆದರೂ, ಮಧ್ಯದ ಮಲ್ಟಿ ಕಲರ್‌ ಕಂಬ ಮಾತ್ರ ಮಿನುಗುತ್ತಿರುತ್ತದೆ. ಇದು ಮಧ್ಯರಾತ್ರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ರಸ್ತೆಯ ಸೂಚನೆ ನೀಡುತ್ತದೆ.

ರಸ್ತೆ ಅಭಿವೃದ್ಧಿಗಾಗಿ ಎದುರಾಗಿತ್ತು ಕಂಟಕ
ಹಲವು ವರ್ಷಗಳ ಹಿಂದೆ ಈ ರಸ್ತೆ ಎರಡೂ ಬದಿ ಗ ಳಲ್ಲಿ ಮರಗಳ ನೆರಳಿತ್ತು. ಬಳಿಕ ರಸ್ತೆಯ ಕಾಂಕ್ರೀಟ್‌ ಕಾಮಗಾರಿಗಾಗಿ ಬಹುತೇಕ ಮರಗಳನ್ನು ಕಡಿದು ಹಾಕಲಾಗಿತ್ತು. ಆ ಸಂದರ್ಭ ಪ್ರತಿಭಟನೆಯೂ ನಡೆದಿತ್ತು. ಅನಂತರ ಬಹಳಷ್ಟು ಮಾತುಕತೆ ಬಳಿಕ ಪಕ್ಕದ ಮನೆ, ಅಂಗಡಿ, ಚರ್ಚ್‌ನವರೆಲ್ಲ ಜಾಗ ಬಿಟ್ಟುಕೊಟ್ಟಿದ್ದು, ಉಳಿದ ಮರಗಳನ್ನೂ ತೆರವುಗೊಳಿಸಿ ನಾಲ್ಕು ವರ್ಷಗಳಿಂದ ಚರಂಡಿ, ಫುಟ್‌ಪಾತ್‌, ಬಸ್‌ ಬೇ ಸಹಿತ ಕಾಂಕ್ರಿಟ್‌ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

Advertisement

ವಿದ್ಯುತ್‌ ಉಳಿತಾಯ
ಡಬಲ್‌ ಕೋನಿಕಲ್‌ ಪೋಲ್‌ ಬೀದಿ ದೀಪಗಳಲ್ಲಿ ಎಲ್‌ ಇಡಿ ಅಳವಡಿಸುವ ಮೂಲಕ ವಿದ್ಯುತ್‌ ಉಳಿತಾಯದವಾಗಲಿದೆ. ನಗರದಲ್ಲಿ ಪ್ರಾಯೋಗಿಕವಾಗಿ ಒಂದು ರಸ್ತೆಗೆ ಅಳವಡಿಸಲಾಗಿದೆ. ಇದರ ನಿರ್ವಹಣೆ ಹಾಗೂ ಜನರ ಸ್ಪಂದನೆಯ ಬಳಿಕ ನಗರದ ಬೇರೆ ಭಾಗಗಳಲ್ಲೂ ಈ ದೀಪಗಳನ್ನು ಅಳವಡಿಸುವ ಬಗ್ಗೆ ಚಿಂತಿಸಲಾಗುತ್ತದೆ

ಮಾದರಿ ರಸ್ತೆಗೆ ಕ್ರಮ
ಈಗಾಗಲೇ ಈ ರಸ್ತೆ ವಿಸ್ತರಿಸಿಲು ಜೆಪ್ಪು ಸೆಮಿನ ಸಹಿತ ಹೆಚ್ಚಿನವರು ಜಾಗ ಬಿಟ್ಟುಕೊಟ್ಟಿದ್ದು, ಅಭಿವೃದ್ಧಿ ಕೆಲಸಗಳಾಗುತ್ತಿವೆ. 80 ಲಕ್ಷ ರೂ. ವೆಚ್ಚದಲ್ಲಿ ಡಬಲ್‌ ಕೋನಿಕಲ್‌ ಪೋಲ್‌ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದೆ. ಮುಂದಿನ ಹಂತದಲ್ಲಿ ಬೇರೆ ರಸ್ತೆಗಳಿಗೂ ಇಂತಹ ದೀಪಗಳನ್ನು ಅಳವಡಿಸುವ ಬಗ್ಗೆ ಚರ್ಚೆ ನಡೆಸಲಾಗುವುದು.
– ಪ್ರವೀಣ್‌ ಚಂದ್ರ ಆಳ್ವ,
ಕಾರ್ಪೋರೇಟರ್‌

‡ ಪ್ರಜ್ಞಾ ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next