Advertisement

ಸಿಟಿ ಬಸ್‌ಗಳು ಮತ್ತೆ ಸ್ಟೇಟ್‌ ಬ್ಯಾಂಕ್‌ ನಿಲ್ದಾಣಕ್ಕೆ!

06:19 PM Nov 02, 2021 | Team Udayavani |

ಮಹಾನಗರ:  ಕೆಲವು ತಿಂಗಳುಗಳಿಂದ ನಗರದ ಸರ್ವಿಸ್‌ ಬಸ್‌ ನಿಲ್ದಾಣ ಪ್ರವೇಶ ಪಡೆಯುತ್ತಿದ್ದ ಸಿಟಿ ಬಸ್‌ಗಳು ಇನ್ನು ಮತ್ತದೇ ಹಳೆ ನಿಯಮದಂತೆ ಸ್ಟೇಟ್‌ಬ್ಯಾಂಕ್‌ನಲ್ಲೇ ನಿಲ್ಲಲಿವೆ.

Advertisement

ಸರ್ವಿಸ್‌ ಬಸ್‌ ನಿಲ್ದಾಣದಲ್ಲಿ ಮೂಲಸೌಕರ್ಯ ವ್ಯವಸ್ಥೆ ಮತ್ತು ಒತ್ತಡ ಹೆಚ್ಚಾಗಿದೆ. ಹಾಗಾಗಿ ಮತ್ತೆ ಹಳೆ ನಿಯಮ ಮುಂದುವರಿಸಲಾಗಿದೆ.

ಜೂನ್‌ ತಿಂಗಳಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಿಟಿ ಬಸ್‌ ಮಾಲಕರ ವಿಶೇಷ ಸಭೆ ನಡೆದಿದ್ದು, ಅದರಲ್ಲಿ ಕೈಗೊಂಡ ತೀರ್ಮಾನದಂತೆ ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳು ಮುಂದಿನ ದಿನಗಳಲ್ಲಿ ಸರ್ವಿಸ್‌ ಬಸ್‌ ನಿಲ್ದಾಣಕ್ಕೆ ಪ್ರವೇಶ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಸೂಚನೆ ನೀಡಿದ್ದರು. ಅದರಂತೆ, ಜುಲೈ 1ರಿಂದ ಬಹುತೇಕ ಎಲ್ಲ ಸಿಟಿ ಬಸ್‌ಗಳು ಸರ್ವಿಸ್‌ ಬಸ್‌ ನಿಲ್ದಾಣದಿಂದಲೇ ಕಾರ್ಯಾಚರಣೆ ನಡೆಸುತ್ತಿತ್ತು. ಕೊರೊನಾ ಕಾರಣದಿಂದಾಗಿ ನಿಲ್ಲಿಸಲಾಗಿದ್ದ ಬಹುತೇಕ ಎಲ್ಲ ಸಿಟಿ, ಸರ್ವಿಸ್‌ ಬಸ್‌ಗಳು ಮತ್ತೆ ಇದೀಗ ಕಾರ್ಯಾಚರಣೆ ನಡೆಸಲು ಆರಂಭಿಸಿವೆ. ಹೀಗಾಗಿ ಬಸ್‌ಗಳ ಸಂಖ್ಯೆ ಹೆಚ್ಚಾದಂತೆ ಸರ್ವಿಸ್‌ ಬಸ್‌ ನಿಲ್ದಾಣದಲ್ಲಿ ಮೂಲ ಸೌಕರ್ಯದ ಕೊರತೆ ಎದುರಾಗಿದೆ. ಸರ್ವಿಸ್‌ ಬಸ್‌ ನಿಲ್ದಾಣದಲ್ಲಿ ಈಗಾಗಲೇ ಸರ್ವಿಸ್‌ ಬಸ್‌ಗಳು, ಕಾಂಟ್ರಾಕ್ಟ್ ಕ್ಯಾರೇಜ್‌ ಸಹಿತ ಕೆಎಸ್ಸಾರ್ಟಿಸಿ ಬಸ್‌ಗಳು ನಿಲ್ಲುತ್ತವೆ. ಹೀಗಿದ್ದಾಗ ಸಿಟಿ ಬಸ್‌ಗಳನ್ನು ನಿಲ್ಲಿಸಲು ಸಮಸ್ಯೆ ಉಂಟಾಗಿದೆ.

ಇದನ್ನೂ ಓದಿ:ಹಿಮಾಚಲ್ ಪ್ರದೇಶ, ಹರ್ಯಾಣ ಉಪಚುನಾವಣೆ ಬಿಜೆಪಿಗೆ ಸೋಲು, ಕಾಂಗ್ರೆಸ್ ಜಯಭೇರಿ

ಮೂಲ ಸೌಕರ್ಯ ಕಲ್ಪಿಸಿ
ಸರ್ವಿಸ್‌ ಬಸ್‌ ನಿಲ್ದಾಣದಲ್ಲಿ ಟೆಂಪೋ ಸ್ಟಾಂಡ್‌ ಇದ್ದು, ಇದರ ಸ್ಥಳಾಂತರ ಪ್ರಕ್ರಿಯೆಗೆ ಈ ಹಿಂದೆ ಒತ್ತಾಯ ಕೇಳಿಬಂದಿತ್ತು. ಪ್ರಯಾಣಿಕರಿಗೆ ಬಸ್‌ಗಾಗಿ ಕಾಯಲು ಸೂಕ್ತ ಬಸ್‌ ತಂಗುದಾಣ, ಮಳೆ, ಬಿಸಿಲು ರಕ್ಷಣೆಗೆ ಸೂಕ್ತ ವ್ಯವಸ್ಥೆ ಇಲ್ಲಿ ಇರಲಿಲ್ಲ. ಟೌನ್‌ಹಾಲ್‌ ಬಳಿ ಅಂಡರ್‌ಪಾಸ್‌ ಕಾಮಗಾರಿ ನಡೆಯುತ್ತಿದ್ದು, ಈ ಭಾಗದಲ್ಲಿ ಸದಾ ಟ್ರಾಫಿಕ್‌ ಜಾಂ ಉಂಟಾಗುತ್ತಿತ್ತು. ಹೀಗಿದ್ದಾಗ ಸರ್ವಿಸ್‌ ಬಸ್‌ ನಿಲ್ದಾಣಕ್ಕೆ ಸಿಟಿ ಬಸ್‌ಗಳೆಲ್ಲ ಪ್ರವೇಶ ಪಡೆಯುವುದರಿಂದ ಟ್ರಾಫಿಕ್‌ ಜಾಮ್‌ಗೆ ಕಾರಣವಾಗಿತ್ತು. ಇದನ್ನೆಲ್ಲ ಮನಗಂಡು ಸಿಟಿ ಬಸ್‌ ಮಾಲಕರು ಇದೀಗ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ. ಸೂಕ್ತ ಮೂಲಸೌಕರ್ಯ ಕಲ್ಪಿಸುವವರೆಗೆ ಈ ಹಿಂದೆ ಇದ್ದಂತಹ ನಿಯಮ ಮುಂದುವರಿಸಲು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಅದಕ್ಕೆ ಜಿಲ್ಲಾಡಳಿತ ಸ್ಪಂದಿಸಿದ್ದು, ಬಸ್‌ ಮಾಲಕರಿಗೆ ಸಮ್ಮತಿ ಸೂಚಿಸಿದೆ ಎನ್ನಲಾಗಿದೆ.

Advertisement

ಜಿಲ್ಲಾಡಳಿತಕ್ಕೆ ಮನವಿ
ಸರ್ವಿಸ್‌ ಬಸ್‌ ನಿಲ್ದಾಣದಲ್ಲಿ ಮೂಲ ಸೌಕರ್ಯ ವ್ಯವಸ್ಥೆ ಕಲ್ಪಿಸಿದರೆ ಸಿಟಿ ಬಸ್‌ಗಳನ್ನು ಸರ್ವಿಸ್‌ ಬಸ್‌ ನಿಲ್ದಾಣದ ಮುಖೇನ ಕಾರ್ಯಾಚರಣೆ ನಡೆಸಲು ತಯಾರಿದ್ದೇವೆ. ಆವರೆಗೆ ಈ ಹಿಂದೆ ಇದ್ದಂತಹ ವ್ಯವಸ್ಥೆಯಲ್ಲಿ ಮುಂದುವರಿಯಲು ಅನುವು ಮಾಡಿ ಕೊಡಬೇಕು ಎಂದು ಜಿಲ್ಲಾಡಳಿತಕ್ಕೆ ನಾವು ಮನವಿ ಮಾಡಿ ದ್ದೇವೆ. ಅದರಂತೆ ಈ ಹಿಂದೆ ಇದ್ದ ವ್ಯವಸ್ಥೆಯಂತೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸ್ಟೇಟ್‌ಬ್ಯಾಂಕ್‌ನ ಎಡ ಬದಿಯಲ್ಲಿ ಲೈನ್‌ ವ್ಯವಸ್ಥೆ ಅಳವಡಿಸಲಾಗಿದೆ. ಸೆಂಟ್ರಲ್‌ ಚಿತ್ರಮಂದಿರವಿದ್ದ ಪ್ರದೇಶದವರೆಗೆ ಬಸ್‌ ಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶ ನೀಡಲಾಗಿದೆ.
-ಜಯಶೀಲ ಅಡ್ಯಂತಾಯ,, ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next