Advertisement

ಸಿಟಿ ಬಸ್‌ಗಳು ಮತ್ತಷ್ಟು ಸ್ಮಾರ್ಟ್‌

12:39 PM Mar 29, 2022 | Team Udayavani |

ಪತ್ರಿಕಾಭವನ: ಮಂಗಳೂರು ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳು ಸ್ಮಾರ್ಟ್‌ ಆಗುತ್ತಿದ್ದು, ನಗರದ ಮೂರು ರೂಟ್‌ಗಳಾದ ಸ್ಟೇಟ್‌ಬ್ಯಾಂಕ್‌-ತಲಪಾಡಿ ಮತ್ತು ಸ್ಟೇಟ್‌ಬ್ಯಾಂಕ್‌-ಉಳ್ಳಾಲ ರೂಟ್‌ ಗಳಲ್ಲಿ ಚಲೋ ಕಾರ್ಡ್‌ ಮೂಲಕ ಡಿಜಿಟಲ್‌ ಬಸ್‌ ಪಾಸ್‌ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.

Advertisement

ಮೊದಲನೇ ಹಂತದಲ್ಲಿ ಬಸ್‌ ರೂಟ್‌ ನಂಬರ್‌ 42, 43 ಮತ್ತು ರೂಟ್‌ ನಂಬರ್‌ 44ರಲ್ಲಿ ಡಿಜಿಟಲ್‌ ಬಸ್‌ಪಾಸ್‌ ವ್ಯವಸ್ಥೆ ಆರಂಭಿಸಲಾಗಿದ್ದು, ಸೋಮವಾರ ಚಾಲನೆ ದೊರೆತಿದೆ. ಮಂಗಳೂರು ಸಂಚಾರಿ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತ ನಟರಾಜ್‌ ಅವರು ನೂತನ ಸೇವೆಗೆ ಚಾಲನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಮತ್ತಷ್ಟು ರೂಟ್‌ಗಳಿಗೆ ವಿಸ್ತರಿಸಲಾಗುವುದು ಎಂದು ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಎರಡು ವರ್ಷಗಳ ಹಿಂದೆ ಚಲೋ ಕಾರ್ಡ್‌ ವ್ಯವಸ್ಥೆ ಜಾರಿಗೆ ಬಂದಿದೆ. ಈವರೆಗೆ ಸುಮಾರು 20,000 ಮಂದಿ ಈ ಕಾರ್ಡ್‌ ಬಳಕೆ ಮಾಡುತ್ತಿದ್ದಾರೆ. ಇದೀಗ ಎರಡು ರೂಟ್‌ಗಳಲ್ಲಿ ಬಸ್‌ ಪಾಸ್‌ ವ್ಯವಸ್ಥೆ ಜಾರಿಗೆ ತರುತ್ತಿದ್ದೇವೆ.

ಈ ಎರಡೂ ಮಾರ್ಗಗಳಲ್ಲಿ ಪ್ರತೀ ದಿನ ಸುಮಾರು 30,000ಕ್ಕೂ ಹೆಚ್ಚಿನ ಮಂದಿ ಅತ್ತಿಂದಿತ್ತ ಸಂಚರಿಸುತ್ತಾರೆ. ಪ್ರಯಾಣಿಕರು ಚಲೋ ಕೌಂಟರ್‌ಗಳಲ್ಲಿ ಅಥವಾ ಬಸ್‌ ನಿರ್ವಾಹಕರಲ್ಲಿ ಪಾಸ್‌ ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಮೊಬೈಲ್‌ನಲ್ಲೇ ಟಿಕೆಟ್‌ ವ್ಯವಸ್ಥೆ ಚಲೋ ಸಂಸ್ಥೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಅಶ್ವತ್ಥಾಮ ಹೆಗ್ಡೆ ಮಾತನಾಡಿ, ಮೊಬೈಲ್‌ನಲ್ಲಿ ಚಲೋ ಆ್ಯಪ್‌ ಅಳವಡಿಸುವ ಮುಖೇನ ಟಿಕೆಟ್‌ ಪಡೆದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕ್ಯೂ ಆರ್‌ ಕೋಡ್‌ ಅನ್ನು ಪ್ರಯಾಣಿಕರು ಪ್ರಯಾಣದ ವೇಳೆ ಬಸ್‌ ನಿರ್ವಾಹಕರ ಬಳಿ ಇರುವ ಟಿಕೆಟಿಂಗ್‌ ಯಂತ್ರದ ಮೂಲಕ ಸ್ಕ್ಯಾನ್  ಮಾಡಿಸಬಹುದಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸುದೇಶ್‌, ಅಶೋಕ್‌, ವಿ.ಕೆ. ಪುತ್ರನ್‌, ಪ್ರದೀಪ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next