Advertisement

ಚಿತ್ತಾಕುಲದ 12 ಕುಟುಂಬಗಳಿಗೆ 25 ವರ್ಷಗಳಿಂದ ಬಹಿಷ್ಕಾರ?

03:45 AM Apr 18, 2017 | Team Udayavani |

ಕಾರವಾರ: ಸಮೀಪದ ಸದಾಶಿವಗಡ ಗ್ರಾಮದ ಚಿತ್ತಾಕುಲ ಎಂಬಲ್ಲಿ ನೆಲೆಸಿರುವ ಮುಸ್ಲಿಂ ಸಮುದಾಯದ 12 ಕುಟುಂಬಗಳಿಗೆ ಸ್ವಧರ್ಮೀಯರೇ 25 ವರ್ಷಗಳಿಂದ ಬಹಿಷ್ಕಾರ ಹಾಕಿದ್ದಾರೆಂಬ ಆರೋಪ ಕೇಳಿಬಂದಿದೆ. ಆದರೆ, ಈ ಆರೋಪವನ್ನು ಮಸೀದಿ ಸಮಿತಿ ನಿರಾಕರಿಸಿದೆ.

Advertisement

ಬಹಿಷ್ಕಾರಕ್ಕೆ ಒಳಗಾಗಿದ್ದಾರೆ ಎನ್ನಲಾದ 12 ಕುಟುಂಬಗಳ ಸದಸ್ಯರು ಸೋಮವಾರ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಆಂಧ್ರಪ್ರದೇಶದ ದಾವರ್‌ ಅಲಿ ಷಾ ಎಂಬ ಗುರುವಿನ ಫೋಟೋ ಇಟ್ಟು, ಅವರ ಅನುಯಾಯಿಗಳಾಗಿರುವ ಒಂದೇ ಕಾರಣಕ್ಕೆ ಸದಾಶಿವಗಡದ ಜಮಾತ್‌ ಉಲ್‌ ಮುಸ್ಲಿಮೀನ್‌ ನೂರಾನಿ ಮಸೀದಿ ಆಡಳಿತ ಸಮಿತಿ ತಮಗೆ ಬಹಿಷ್ಕಾರ ಹಾಕಿದೆ. ಅನ್ವರ್‌ ಮಹಮ್ಮದ್‌ ಖಾನೆ, ಜೈನುಲ್‌ ಅಬೆದಿನ್‌, ಕೌಸರ್‌ ಖಾನ್‌, ನಸೀಮಾ ಆಪಾj ಸೇರಿ 12 ಕುಟುಂಬಗಳು ತಮ್ಮ ಸಮುದಾಯದವರ ಶುಭ ಕಾರ್ಯಗಳಿಗೆ, ಮರಣ ಸಂದರ್ಭದಲ್ಲೂ ಹೋಗುವಂತಿಲ್ಲ. ಈ 12 ಕುಟುಂಬಗಳ ಮನೆಗೂ ಇತರರು ಬರುವಂತಿಲ್ಲ, ಮಾತನಾಡುವಂತಿಲ್ಲ, ವಾಸವಿರುವ ಪ್ರದೇಶದ ಬಾವಿ ನೀರು ಸೇದುವಂತಿಲ್ಲ ಎಂದು ಮಸೀದಿ ಆಡಳಿತ ಸಮಿತಿ ನಿರ್ಬಂಧ ಹೇರಿದೆ.

ಈ ಬಗ್ಗೆ ಜಿಲ್ಲಾಡಳಿತಕ್ಕೆ ಬಹು ಹಿಂದೆಯೇ ದೂರು ನೀಡಲಾಗಿತ್ತು. ಈಗಲಾದರೂ ಜಿಲ್ಲಾಡಳಿತ ಈ ಬಹಿಷ್ಕಾರದಿಂದ ಮುಕ್ತಗೊಳಿಸಲಿ ಎಂಬುದು ಕೌಸರ್‌ ಖಾನ್‌, ನಜೀಮಾ ಆಫಾj ಮತ್ತಿರರರು ಮನವಿ ಮಾಡಿದ್ದಾರೆ.

ಮಗನ ಮದುವೆ ತಪ್ಪುವ ಸಂಭವ:
ತಮ್ಮ ಪುತ್ರ ಅಬ್ದುಲ್‌ ಸಲಾಂ ಅವರ ಮದುವೆ ಧಾರವಾಡದಲ್ಲಿ ಏ. 21ಕ್ಕೆ ನಿಗದಿಯಾಗಿದೆ. ಸಂಬಂಧಿಧಿಕರಿಗೆ, ಸಮುದಾಯದವರಿಗೆ, ಮಸೀದಿ ಆಡಳಿತ ಸಮಿತಿ ಸದಸ್ಯರಿಗೆ ಮದುವೆ ಆಮಂತ್ರಣ ನೀಡಲಾಗಿದೆ. ಮದುವೆ ಸರಾಗವಾಗಿ ನಡೆಯಬೇಕೆಂದರೆ ಜಮಾತ್‌ ಉಲ್‌ ಮುಸ್ಲಿಮೀನ್‌ ನೂರಾನಿ ಮಸೀದಿ ಆಡಳಿತ ಸಮಿತಿ ನಿರಾಕ್ಷೇಪಣಾ ಪತ್ರ ನೀಡಬೇಕು. ಮಸೀದಿ ಸಮಿತಿ ಸದಸ್ಯರಿಗಾದರೂ ಮದುವೆಗೆ ಹಾಜರಾಗಲು ಅನುಮತಿ ನೀಡಬೇಕು. ಇಲ್ಲದಿದ್ದರೆ ಮದುವೆ ಮುರಿದು ಬೀಳುವ ಸಂಭವ ಇದೆ ಎಂಬ ಜೈನುಲ್‌ ಅಬೆದಿನ್‌ ಆತಂಕದಿಂದ ಹೇಳಿದರು.

ಆಂಧ್ರದ ದಾವರ್‌ ಅಲಿ ಷಾ ಅವರ ಅನುಯಾಯಿಗಳಾಗಿದ್ದೇವೆ ಎಂಬ ಒಂದೇ ಕಾರಣಕ್ಕೆ 12 ಕುಟುಂಬಗಳಿಗೆ ಬಹಿಷ್ಕಾರ ಹಾಕುವುದು ಎಷ್ಟು ಸರಿ? ಈ ಸಮಸ್ಯೆಯನ್ನು ಜಿಲ್ಲಾಡಳಿತವೇ ಮಧ್ಯ ಪ್ರವೇಶಿಸಿ ಪರಿಹರಿಸಬೇಕು.
– ಅನ್ವರ್‌ ಅಹಮ್ಮದ್‌ ಖಾನೆ, ಬಹಿಷ್ಕಾರಕ್ಕೆ ಒಳಗಾಗಿದೆ ಎನ್ನಲಾದ ಕುಟುಂಬದ ಮುಖ್ಯಸ್ಥ

Advertisement

ಎರಡು ದಿನಗಳ ಹಿಂದೆ ಈ ಬಗ್ಗೆ  ಠಾಣೆಯಲ್ಲಿ ಪಿಟಿಶನ್‌ ಆಗಿದೆ. ಸಹಾಯಕ ಕಮಿಷನರ್‌ ಫೌಜಿಯಾ ತರನಂ ಅವರೂ ಮಾತುಕತೆ ಸಂದರ್ಭದಲ್ಲಿದ್ದರು. ಜಮಾತ್‌ ಉಲ್‌ ಮುಸ್ಲಿಮೀನ್‌ ನೂರಾನಿ ಮಸೀದಿಯ ಆಡಳಿತ ಸಮಿತಿಯವರು ಯಾರಿಗೂ ಬಹಿಷ್ಕಾರ ಹಾಕಿಲ್ಲ ಎನ್ನುತ್ತಿದ್ದಾರೆ. 20 ವರ್ಷಗಳಿಂದ 12 ಕುಟುಂಬಗಳು ಮಸೀದಿಗೆ ಚಂದಾ ತುಂಬಿ ರಸೀದಿ ಪಡೆದಿಲ್ಲ. ಮದುವೆ ಸಮಾರಂಭದ ಆಮಂತ್ರಣ ಕೊಟ್ಟರೆ ಮದುವೆಗೆ ಮಸೀದಿ ಸಮಿತಿ ಸದಸ್ಯರು ಹೋಗಬಹುದು. ಅದಕ್ಕೆ ಅಡ್ಡಿಪಡಿಸುವುದಿಲ್ಲ ಎಂದು ಮಸೀದಿ ಆಡಳಿತ ಮಂಡಳಿಯವರು ಬರೆದುಕೊಟ್ಟಿದ್ದಾರೆ. ಬಹಿಷ್ಕಾರದಂಥ ಪ್ರಸಂಗವೇ ಇಲ್ಲ ಎಂದೂ ಹೇಳಿದ್ದಾರೆ. ಈ ವಿವಾದವನ್ನು ಅಲ್ಪಸಂಖ್ಯಾತರ ಇಲಾಖೆಯ ಮೂಲಕ ಅಂತರಿಕವಾಗಿ ಬಗೆಹರಿಸಿಕೊಳ್ಳಲು ಸೂಚಿಸಲಾಗಿದೆ.
– ಉಮೇಶ್‌ ಪಾವುಸ್ಕರ್‌ . ಪಿಎಸ್‌ಐ. ಚಿತ್ತಾಕುಲಾ
 

Advertisement

Udayavani is now on Telegram. Click here to join our channel and stay updated with the latest news.

Next