ಸಿಟ್ರಿಕ್ ಎಂದರೆ ಲಿಂಬೆ. ತಿಳಿ ಹಳದಿ ಲಿಂಬೆ ಬಣ್ಣ ಈ ಪುಟ್ಟ ಹಕ್ಕಿಯಲ್ಲಿ ಪ್ರಧಾನವಾಗಿ ಎದ್ದು ಕಾಣುವುದರಿಂದ ಈ ಹಕ್ಕಿಗೆ ಈ ಹೆಸರು ಬಂದಿದೆ.Citrine wagtail (Matacilla citreola Pallas) RM-Sparrow + ಇದು ಗುಬ್ಬಚ್ಚಿಯಷ್ಟು ದೊಡ್ಡದಿದೆ. ಸಪೂರ ದೇಹ, ಉದ್ದವಾದ ಬಾಲವಿದೆ. ಇದು 15.5 ರಿಂದ 17 ಸೆಂ. ಮೀ. ದೊಡ್ಡ ಹಕ್ಕಿ. ಇದು ‘ಮೆಟಸಿಲಿಡಿಯಾ’ ಕುಟುಂಬಕ್ಕೆ ಸೇರಿದೆ. ಇದು ಹೆಜ್ಜೆಗೊಮ್ಮೆ ತನ್ನ ಬಾಲವನ್ನ ಮೇಲೆ , ಕೆಳಗೆ ಮಾಡುವುದರಿಂದ ಇದಕ್ಕೆ ಬಾಲ ಕುಣಿಸುವ ಹಕ್ಕಿ ಇಲ್ಲವೇ ಕುಂಡೆ ಕುಸ್ಕ ಅಂತ ಕರೆಯುತ್ತಾರೆ. ತಲೆ, ಹೊಟ್ಟೆ, ಕುತ್ತಿಗೆ ಕೆಳಭಾಗ ತಿಳಿ ಹಳದಿ ಬಣ್ಣ ಇದೆ. ಕಣ್ಣಿನ ಪಕ್ಕ ,ಕೆನ್ನೆಯಲ್ಲಿ ಅಚ್ಚ ಹಳದಿ ಮಚ್ಚೆ ಎದ್ದು ಕಾಣುತ್ತದೆ. ಬೆನ್ನು ಮತ್ತು ರೆಕ್ಕೆ ಹಳದಿ ಛಾಯೆಯ ಬೂದು ಬಣ್ಣದಿಂದ ಕೂಡಿರುತ್ತದೆ. ರೆಕ್ಕೆಯ ಗರಿಗಳಲ್ಲಿ, ಬುಡದಲ್ಲಿ ವರ್ತುಲಾಕಾರದಲ್ಲಿ ಬಿಳಿ ಗೆರೆ ಇದೆ.
ರೆಕ್ಕೆಯ ತುದಿಯ ಗರಿಯಲ್ಲಿ 3ಕ್ಕಿಂತ ಹೆಚ್ಚು ದಪ್ಪಬಿಳಿ ಗೆರೆ ಕಾಣುತ್ತದೆ. ಕಾಡು ಕುಂಡೆ ಕುಸ್ಕ, ಹಳದಿ ಕುಂಡೆಕುಸ್ಕ, ಬೂದು ಬಣ್ಣದ ಕುಂಡೆ ಕುಸ್ಕದ ರೆಕ್ಕೆ ಬಿಲಿ ಗಿರಿಗಳ ದಪ್ಪ ಕಡಿಮೆ ಇದೆ. ಇದರಿಂದ ಈ ಹಕ್ಕಿಯನ್ನು ಪ್ರತ್ಯೇಕವಾಗಿ ಗುರುತಿಸಬಹುದು. ಭಾರತಕ್ಕೆ ಚಳಿಗಾಲದಲ್ಲಿ ಬರುವ ಅತಿಥಿ ಇದು. 1500 ರಿಂದ 4600 ಮೀ. ಎತ್ತರದ ಹಿಮಾಲಯ ಪ್ರದೇಶದಲ್ಲೂ ಇದು ಕಾಣಸಿಗುತ್ತದೆ. ಬಲುಚಿಸ್ಥಾನದ ಉತ್ತರಭಾಗ, ಗುಲಘಾಟ್, ಕಾಶ್ಮೀರ, ಲಡಾಕ್ ಪ್ರದೇಶದಲ್ಲಿ ಉಂಟು.
ಭಾರತ, ಬಾಂಗ್ಲಾದೇಶ, ಸಿಲೋನ್, ಬರ್ಮಾ, ಪಾಕಿಸ್ಥಾನದಲ್ಲೂ ಗುಂಪು, ಗುಂಪಾಗಿ ನೋಡಬಹುದು. ನಾಗಪುರ, ಆಸಾಂ ಕರ್ನಾಟಕ, ಕೇರಳ ಪ್ರದೇಶಕ್ಕೂ ಬಂದು ಹೋಗುತ್ತವೆ. ಬಣ್ಣ ವ್ಯತ್ಯಾಸ ಆಧರಿಸಿ 3 ಉಪ ಜಾತಿಗಳಾಗಿ ಮಾಡಲಾಗಿದೆ. ಗಂಡು ಹೆಣ್ಣಿನಲ್ಲಿ ವ್ಯತ್ಯಾಸ ಇಲ್ಲ. ಬಯಲು ಜಾಗ, ಭತ್ತದ ಗದ್ದೆ, ನದೀತೀರ, ನೀರಿನ ಹೊಂಡದ ಹತ್ತಿರ ನೆಲದಮೇಲೆ ಓಡಾಡುತ್ತಾ, ತನ್ನ ಬಾಲ ಕುಣಿಸುತ್ತಾ, ಹುಳ ತಿನ್ನುತ್ತಿರುವ ದೃಷ್ಯ ಸಾಮಾನ್ಯವಾಗಿ ಕಾಣುವುದು.
ಇದು ಭತ್ತದ ಗದ್ದೆಗಳಿಗೆ ಬರುವ ಅದೇಷ್ಟೋ ಕ್ರಿಮಿ, ಕೀಟ ತಿನ್ನುವುದರಿಂದ ರೈತರಿಗೆ ತುಂಬಾ ಉಪಕಾರ ಮಾಡುವ ಹಕ್ಕಿ. ನಿಂತಲ್ಲಿಂದನೇ ಚಕ್ಕನೆ ಹಾರಿ- ಹಾರುತ್ತಿರುವ ಚಿಕ್ಕ ಮಿಡತೆ, ಇಲ್ಲವೇ ಕೀಟ ಹಿಡಿಯುವ ಚಾಕಚಕ್ಯತೆ ಇದಕ್ಕೆ ಸಿದ್ಧಿಸಿದೆ. ಬೇಸಿಗೆಯಲ್ಲಿ ತಲೆಯಲ್ಲಿರುವ ಅಚ್ಚ ತಿಳಿ ಹಳದಿಬಣ್ಣ ಇದನ್ನು ಗುರುತಿಸಲು ಸಹಾಯಕ. ಚಳಿಗಾಲದಲ್ಲಿ ತಲೆಯಲ್ಲಿ ಕೆಲವು ಬೂದು ಬಣ್ಣದ ಗರಿಯ ಮಚ್ಚೆ ಇರುವುದು. ಚೀ ಚಿಕ್, ಚೀ ಚಿಕ್ ಎಂದು ಕೂಗುತ್ತಾ ತನ್ನ ಬಾಲ ಕುಣಿಸುತ್ತಾ -ನೆಲದಮೇಲೆ ಓಡಾಡಿ ತನ್ನ ಆಹಾರ ಸಂಗ್ರಿಹಿಸಲು ಅನುಕೂಲವಾಗುವಂತೆ ದೃಢವಾದ ಕಾಲಿನ ರಚನೆ ಇದೆ. ಕಾಲಿನ ಮುಂದೆ 3 ಬೆರಳು, ಹಿಂದೆ ಒಂದು ಬೆರಳು ಇದಕ್ಕೆ ನೆರವಾಗಿದೆ. ಕಾಲು ಮತ್ತು ಚುಂಚು ಕಪ್ಪು ಮಿಶ್ರಿತ ಅಚ್ಚ ಬೂದು ಬಣ್ಣದಿಂದ ಕೂಡಿದೆ. ಹುಲ್ಲು ,ಜೊಂಡುಹುಲ್ಲು ಜಲಸಸ್ಯ ಉಪಯೋಗಿಸಿ ಬಟ್ಟಲಿನಂತೆ ಗೂಡು ಕಟ್ಟುತ್ತದೆ.
ಇದು ಟ್ರೀ ಪಿಪಿಟ್, ವಾಟರ್ ಪಿಪಿಟ್, ಪ್ಯಾಡಿ ಪಿಪಿಟ್ ಹಕ್ಕಿಯನ್ನು ತುಂಬಾ ಹೋಲುತ್ತದೆ. ಪೆರೋರಾ ನದಿಯ ತೀರ ಮತ್ತು ಸೈಬೇರಿಯಾದಲ್ಲೂ ಇದು ಮರಿಮಾಡುತ್ತದೆ. ಇದೇ ಹಕ್ಕಿಯನ್ನು ಹೋಲುವ ಹಳದಿ ಕುಂಡೆಕುಸ್ಕ ಹಕ್ಕಿ ಇದೆ. ಬೂದು ಬಣ್ಣದ ಕುಂಡೆಕುಸ್ಕ ಹಕ್ಕಿಯ ಹೊಟ್ಟೆ ಸ್ವಲ್ಪ ತಿಳಿ ಹಳದಿ ಛಾಯೆಯ ಬಿಳಿ ಬಣ್ಣ ಇದೆ.
ಇದನ್ನು ತಿಳಿದು ಲಿಂಬು ಕುಂಡೆಕುಸ್ಕ ಪ್ರತ್ಯೇಕತೆ ತಿಳಿಯಬಹುದು. ಇವುಗಳಿಗೆ ಜವಗು ಪ್ರದೇಶದ ಕೀಟಗಳೆಂದರೆ ತುಂಬಾ ಪ್ರಿಯ.