ನವದೆಹಲಿ:ಪೌರತ್ವ(ತಿದ್ದುಪಡಿ) ಮಸೂದೆ ದೇಶದ ಸಂವಿಧಾನದ ಜಾತ್ಯತೀತ ಹಾಗೂ ಸಮಾನತೆಯ ನೆಲೆಗಟ್ಟಿನ ವಿರುದ್ಧವಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಕೇಂದ್ರ ಗೃಹ ಸಚಿವ ಅಮತ್ ಶಾ ಸೋಮವಾರ ಲೋಕಸಭೆಯಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಲೋಕಸಭೆಯಲ್ಲಿ ಪೌರತ್ವ ಮಸೂದೆಯನ್ನು ಮಂಡಿಸಲು ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಉತ್ತರಿಸಿದ ಶಾ, ಒಂದು ವೇಳೆ ಕಾಂಗ್ರೆಸ್ ಪಕ್ಷಕ್ಕೆ ಧರ್ಮದ ಆಧಾರದ ಮೇಲೆ ಪೌರತ್ವ (ತಿದ್ದುಪಡಿ)ಮಸೂದೆ ಅಗತ್ಯವಿಲ್ಲ ಎಂದಾದರೆ. ಕಾಂಗ್ರೆಸ್ ಪಕ್ಷವೇ ದೇಶವನ್ನು ಧರ್ಮದ ಎಳೆಯ ಮೇಲೆ ಇಬ್ಭಾಗಿಸಲು ಹೊರಟಂತೆ ಎಂಬುದಾಗಿ ತಿರುಗೇಟು ನೀಡಿದರು.
ಪ್ರಸ್ತಾಪಿತ ಪೌರತ್ವ (ತಿದ್ದುಪಡಿ) ಮಸೂದೆ ಸಂವಿಧಾನದ ಯಾವುದೇ ಕಲಂ ಅನ್ನು ಉಲ್ಲಂಘಿಸಿಲ್ಲ. ಅಲ್ಲದೇ ಇದು ಶೇ.0.001ರಷ್ಟು ದೇಶದ ಅಲ್ಪಸಂಖ್ಯಾತರ ವಿರುದ್ಧವಾಗಿಲ್ಲ ಎಂಬುದಾಗಿ ಸ್ಪಷ್ಟಪಡಿಸುವುದಾಗಿ ಶಾ ಈ ಸಂದರ್ಭದಲ್ಲಿ ಲೋಕಸಭೆಯಲ್ಲಿ ಹೇಳಿದರು.
ಪೌರತ್ವ ತಿದ್ದುಪಡಿ ಮಸೂದೆ ಕುರಿತು ಸೂಕ್ತವಾದ ಸ್ಪಷ್ಟನೆ ನೀಡಿದ್ದೇನೆ. ಇನ್ನು ನಾನು ಏಕತೆ ಕುರಿತ ಜಗತ್ತಿನಾದ್ಯಂತ ಇರುವ ಕಾನೂನಿನ ಬಗ್ಗೆ ನಾನು ಚರ್ಚಿಸುತ್ತೇನೆ. ಒಂದು ವೇಳೆ ಇದನ್ನು ನಾವು ಸಮಾನತೆ ಅಂತ ಹೇಗೆ ಪರಿಭಾವಿಸಬೇಕು. ಶಿಕ್ಷಣ ಸೇರಿದಂತೆ ಅಲ್ಪಸಂಖ್ಯಾತರಿಗೆ ಇರುವ ವಿಶೇಷ ಕೋಟಾದ ಬಗ್ಗೆ ದಯವಿಟ್ಟು ವಿವರಣೆ ನೀಡಿ ಎಂದು ಶಾ ಹೇಳಿದರು.
ಇದೊಂದು ಪ್ರತಿಗಾಮಿ ಶಾಸನ ಎಂದು ಹಣೆಪಟ್ಟಿ ಹಚ್ಚಿ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದ ನಡುವೆಯೇ ಲೋಕಸಭೆಯಲ್ಲಿ ಪೌರತ್ವ (ತಿದ್ದುಪಡಿ) ಮಸೂದೆ ಪರ ಸಂಸದರು ಮತ ಚಲಾಯಿಸಿದ್ದರು. ಈ ಮಸೂದೆ ದೇಶದ ಅಲ್ಪಸಂಖ್ಯಾತರನ್ನು ಗುರಿಯಾಗಿರಿಸಿಕೊಂಡ ಶಾಸನವಾಗಿದೆ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ದಾಸ್ ವಾಗ್ದಾಳಿ ನಡೆಸಿದ್ದರು. ಕೆಳಮನೆಯಲ್ಲಿ ಮಸೂದೆ ಬಗ್ಗೆ ಗೃಹ ಸಚಿವ ಶಾ ಮತ್ತು ವಿಪಕ್ಷಗಳ ನಡುವೆ ವಾಕ್ಸಮರ ನಡೆದಿತ್ತು.