Advertisement

ಸ್ವಚ್ಛ ಸರ್ವೇಕ್ಷಣೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆ ಮುಖ್ಯ

12:10 PM Jan 05, 2018 | Team Udayavani |

ಮೈಸೂರು: ದೇಶದ ಸ್ವಚ್ಛನಗರಗಳ ಪಟ್ಟಿಯಲ್ಲಿ ಮೈಸೂರು ಮತ್ತೂಮ್ಮೆ ಅಗ್ರಸ್ಥಾನ ಪಡೆಯಲು ಸಾರ್ವಜನಿಕರು ಸ್ವಚ್ಛ ಸರ್ವೇಕ್ಷಣೆಯಲ್ಲಿ ಪಾಲ್ಗೊಳ್ಳುವಂತೆ ನಗರ ಪಾಲಿಕೆ ಆಯುಕ್ತ ಜಿ.ಜಗದೀಶ್‌ ಮನವಿ ಮಾಡಿದರು.

Advertisement

ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ನಡೆಯುತ್ತಿರುವ ಸ್ವಚ್ಛ ಸರ್ವೇಕ್ಷಣೆಯಲ್ಲಿ ಎರಡು ಬಾರಿ ಪ್ರಥಮ ಸ್ಥಾನ ಪಡೆದಿದ್ದ ಮೈಸೂರು, ಕಳೆದ ವರ್ಷ 5ನೇ ಸ್ಥಾನ ಪಡೆದಿದ್ದು, ಹೀಗಾಗಿ ಈ ಬಾರಿ ಸ್ವಚ್ಛತೆಯಲ್ಲಿ ಪ್ರಥಮ ಸ್ಥಾನ ಪಡೆಯಬೇಕೆಂಬ ಗುರಿ ಹೊಂದಲಾಗಿದೆ. ಆದರೆ ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಂತ ಮುಖ್ಯವಾಗಿದ್ದು, ಆದ್ದರಿಂದ ಗುರುವಾರದಿಂದ ಆರಂಭವಾಗಿರುವ ಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆಯಲ್ಲಿ ನಾಗರಿಕರು ಹೆಚ್ಚಾಗಿ ಭಾಗವಹಿಸಬೇಕಿದೆ.

ಸ್ವಚ್ಛ ಸರ್ವೇಕ್ಷಣೆ ಸಂದರ್ಭದಲ್ಲಿ ನಾಗರಿಕರ ಪ್ರತಿಕ್ರಿಯೆ ಪಡೆದು ನಿರ್ದಿಷ್ಟ ಅಂಕಗಳನ್ನು ನೀಡಲಿದ್ದು, ಆದ್ದರಿಂದ ಜ.4 ರಿಂದ ಮಾರ್ಚ್‌ 10ರವರೆಗೆ ನಡೆಯುವ ಸಮೀಕ್ಷೆಯಲ್ಲಿ ಭಾಗವಹಿಸಿ ಮೈಸೂರಿಗೆ ಮತ್ತೂಮ್ಮೆ ದೇಶದ ಸ್ವಚ್ಛನಗರ ಎಂಬ ಗರಿಮೆ ತಂದುಕೊಡಬೇಕಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.

ಅಭಿಪ್ರಾಯದ ಕೊರತೆ: ಸ್ವಚ್ಛ ಸರ್ವೇಕ್ಷಣೆಗೆ ಸಂಬಂಧಿಸಿದಂತೆ ಕಳೆದ ವರ್ಷ ನಾಗರಿಕ ಪ್ರತಿಕ್ರಿಯೆಯ ಕೊರತೆ, ಮಾರುಕಟ್ಟೆ, ವಾಣಿಜ್ಯ ಸ್ಥಳಗಳು, ಸಮುದಾಯ ಶೌಚಾಲಯಗಳ ಕೊರತೆಯಿಂದಾಗಿ ಹೆಚ್ಚಿನ ಅಂಕಗಳು ಲಭಿಸಲಿಲ್ಲ. ಆದರೆ, ಈ ವರ್ಷ ಮಾರುಕಟ್ಟೆಯಲ್ಲಿ ಅಗತ್ಯವಾದ ಸಾರ್ವಜನಿಕ ಮತ್ತು ಸಮುದಾಯದ ಶೌಚಾಲಯಗಳನ್ನು ಹೆಚ್ಚಾಗಿ ನಿರ್ಮಿಸಲಾಗಿದ್ದು,

ಅನೇಕ ಕಡೆಗಳಲ್ಲಿ ಡಸ್ಟ್‌ಬಿನ್‌ಗಳನ್ನು ಸಹ ಇರಿಸುವ ಮೂಲಕ ಕಳೆದ ಬಾರಿ ಉಂಟಾಗಿದ್ದ ತಪ್ಪುಗಳನ್ನು ಸರಿಪಡಿಸಿಕೊಳ್ಳಲಾಗಿದೆ. ಹೀಗಾಗಿ ಸಾರ್ವಜನಿಕರು ಸಹ ಹೆಚ್ಚಾಗಿ ಅಭಿಪ್ರಾಯಗಳನ್ನು ಹಂಚಿಕೊಂಡಲ್ಲಿ, ಮೈಸೂರು ನಗರ ಮತ್ತೂಮ್ಮೆ ಸ್ವಚ್ಛತೆಯಲ್ಲಿ ಮೊದಲ ಸ್ಥಾನಪಡೆಂ‌ುುವುದಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಈ ವರ್ಷ ಹೊಸತೇನಿದೆ: ಈ ಬಾರಿಯ ಸಮೀಕ್ಷೆಯಲ್ಲಿ ಪಾಲಿಕೆಯಿಂದ ಸಲ್ಲಿಸುವ ದಾಖಲೆ ಹಾಗೂ ಸ್ಥಳ ಪರಿಶೀಲನೆ ಸಂದರ್ಭದಲ್ಲಿನ ಮಾಹಿತಿ ಸರಿಯಾಗಿರದಿದ್ದಲ್ಲಿ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಈ ಕಾರಣದಿಂದ ಕಳೆದ ಮೂರು ತಿಂಗಳಿಂದಲೂ ಪಾಲಿಕೆ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಿ, ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಾಗಿದೆ.

ಆದ್ದರಿಂದ ಸಮೀಕ್ಷೆಯ 4000 ಅಂಕಗಳಲ್ಲಿ ನಾವು ಸಂಗ್ರಹಿಸಿರುವ ದಾಖಲೆಗಳ ಆಧಾರದಲ್ಲಿ 2600 ಅಂಕಗಳು ದೊರೆಯುವುದು ಖಚಿತವಾಗಿದೆ. ಇನ್ನು ಸ್ವಚ್ಛ ಸರ್ವೇಕ್ಷಣಾ ಆಪ್‌ಗ್ಳನ್ನು ಕನಿಷ್ಠ 18,000 ಮಂದಿ ಬಳಕೆ ಮಾಡಬೇಕಿದ್ದು, ಈಗಾಗಲೇ 27,000 ಮಂದಿ ಈ ಆಪ್‌ ಬಳಕೆ ಮಾಡುತ್ತಿದ್ದಾರೆ. ಇದೂ ಸಹ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಗೆ ಅನುಕೂಲವಾಗಲಿದೆ. ಕಳೆದ ವರ್ಷ ಸ್ವಚ್ಛ ಸರ್ವೇಕ್ಷಣೆಯಲ್ಲಿ 434 ನಗರಗಳು ಭಾಗವಹಿಸಿದ್ದು, ಈ ಬಾರಿ 4000ಕ್ಕೂ ಹೆಚ್ಚು ನಗರಗಳು ಭಾಗವಹಿಸುತ್ತಿವೆ ಎಂದರು.

ಮೇಯರ್‌ ಎಂ.ಜೆ.ರವಿಕುಮಾರ್‌, ಪಾಲಿಕೆ ಸದಸ್ಯರಾದ ಮಹದೇವಪ್ಪ, ಕೆ.ವಿ.ಮಲ್ಲೇಶ್‌, ಜಗದೀಶ್‌, ಚಲುವೇಗೌಡ, ಆರೋಗ್ಯಾಧಿಕಾರಿ ಡಾ.ನಾಗರಾಜ್‌, ಮಾಜಿ ಎಂಎಲ್ಸಿ ಡಿ.ಮಾದೇಗೌಡ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಇನ್ನಿತರರು ಹಾಜರಿದ್ದರು.

ತಾಂತ್ರಿಕ ಸಮಸ್ಯೆ ಇದೆ: ಸ್ವಚ್ಛ ಸರ್ವೇಕ್ಷಣೆಯಲ್ಲಿ ಸಾರ್ವಜನಿಕರು ಮೊಬೈಲ್‌ ಮೂಲಕ ಅಭಿಪ್ರಾಯ ನೀಡುವ ಪ್ರಕ್ರಿಯೆಯಲ್ಲಿ ತಾಂತ್ರಿಕೆ ಸಮಸ್ಯೆ ಎದುರಾಗಿದ್ದು, ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳ ಮೂಲಕ ಸ್ವಚ್ಛ ಭಾರತ್‌ ಮಿಷನ್‌ಗೆ ದೂರು ನೀಡಲಾಗಿದೆ ಎಂದು ಪಾಲಿಕೆ ಆಯುಕ್ತ ಜಿ.ಜಗದೀಶ್‌ ತಿಳಿಸಿದರು.

ಸ್ವಚ್ಛ ಸರ್ವೇಕ್ಷಣ್‌ ಸಮೀಕ್ಷೆ ವೇಳೆ ಸಾರ್ವಜನಿಕರು ಟೋಲ್‌ ಫ್ರೀ ಸಂಖ್ಯೆ 1969ಗೆ ಕರೆ ಮಾಡಿ ತಮ್ಮ ಅನಿಸಿಕೆ ನೀಡಬಹುದಾಗಿದೆ. ಆದರೆ ಬಿಎಸ್‌ಎನ್‌ಎಲ್‌ ಮೊಬೈಲ್‌ ಬಳಕೆದಾರರು ಈ ಸಂಖ್ಯೆಗೆ ಕರೆಮಾಡಿದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಲು ತೊಂದರೆಯಾಗುತ್ತಿದ್ದು, ಈ ಬಗ್ಗೆ ಈಗಾಗಲೇ ಬಿಎಸ್‌ಎನ್‌ಎಲ್‌ಗೆ ದೂರು ನೀಡಲಾಗಿದೆ. ಉಳಿದಂತೆ ಬೇರೆ ನೆಟ್‌ವರ್ಕ್‌ಗೆ ಸೇರಿದ ಯಾವುದೇ ಮೊಬೈಲ್‌ ಮೂಲಕ ಸಾರ್ವಜನಿಕರು ತಮ್ಮ ಪ್ರತಿಕ್ರಿಯೆ ನೀಡಲು ಸಮಸ್ಯೆ ಆಗುತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next