Advertisement

ಬೋಳದಲ್ಲಿ ಊರವರೇ ಸೇರಿ ಕೆರೆಯ ಹೂಳೆತ್ತಿದರು…!

12:04 PM May 18, 2020 | Sriram |

ಬೆಳ್ಮಣ್‌: ಬೋಳ ಗ್ರಾ.ಪಂ. ವ್ಯಾಪ್ತಿಯ ಕೆರೆ ಕೋಡಿಯ ಪುರಾತನ ಪಾಳು ಬಿದ್ದ ವಿಶಾಲ ಕೆರೆಯೊಂದನ್ನು ಗ್ರಾಮಸ್ಥರೇ ಸೇರಿ ಹೂಳೆತ್ತಿ ಸುದ್ದಿಯಾಗಿದ್ದಾರೆ.

Advertisement

ಕೋವಿಡ್-19 ಕಾರಣದ ಲಾಕ್‌ಡೌನ್‌ ಸಂದರ್ಭ ಕೆಲಸವಿಲ್ಲದೆ ಖಾಲಿ ಕುಳಿತು ಹರಟೆ ಹೊಡೆಯುತ್ತಿದ್ದ ಮಹಿಳೆಯರು ಪುರುಷರೆಲ್ಲಾ ಸೇರಿ ಜಲ ಸಂರಕ್ಷಣೆಯ ಕಾಳಜಿ ತೋರಿ ಇತರ ಗ್ರಾಮಸ್ಥರಿಗೆ ಮಾದರಿಯಾಗಿದ್ದಾರೆ.

ಬಾವಿ, ಬೋರ್‌ವೆಲ್‌ಗ‌ಳಿಗೆ ನೀರಿನಾಸರೆ
ಬೋಳ ಗ್ರಾ. ಪಂ.ವ್ಯಾಪ್ತಿಯ ನೂರಾರು ತೆರೆದ ಬಾವಿ, ಬೋರ್‌ವೆಲ್‌ಗ‌ಳ ನೀರಿನ ಒರತೆಗಳಿಗೆ ಈ ಕೆರೆ ಆಸರೆಯಾಗಲಿದು, ಹಲವಾರು ವರ್ಷಗಳಿಂದ ಪಾಳು ಬಿದ್ದಿತ್ತು. ಜಲ ಕ್ರಾಂತಿಯ ಬಗ್ಗೆ ಮಾತನಾಡುವ ಮಂದಿಗೆ ಈ ಕೆಲಸ ಸವಾಲಾಗುವಂತೆ ಮಾಡಿದೆ. ಸ್ವತಃ ಪಂಚಾಯತ್‌ ಅಧ್ಯಕ್ಷ ಉಪಾಧ್ಯಕ್ಷರೇ ಈ ಕಾಯಕದಲ್ಲಿ ಹಾರೆ ಪಿಕ್ಕಾಸು ಹಿಡಿದಿರುವುದೂ ವಿಶೇಷ.

ಸ್ಥಳೀಯರಾದ ಕಾರ್ಕಳ ತಾ.ಪಂ.ನ ಮಾಜಿ ಆಧ್ಯಕ್ಷ ಜಯರಾಮ ಸಾಲ್ಯಾನ್‌ ಚಾಲನೆ ನೀಡಿದ್ದು ಸುಮಾರು 15 ದಿನಗಳಲ್ಲಿ ಈ ಹೂಳೆತ್ತುವಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಬೋಳ ಗಾ.ಪಂ.ನ ಮುಖ್ಯ ರಸ್ತೆಯಲ್ಲಿ ಸರಕಾರಿ ಜಮೀನಿನಲ್ಲಿರುವ ಈ ವಿಶಾಲ ಕೆರೆ ಇನ್ನು ಮುಂದಿನ ದಿನಗಳಲ್ಲಿ ನೀರಿನಿಂದ ತುಂಬಿ ಕಂಗೊಳಿಸಲಿದೆ. ಈ ಮೂಲಕ ಈ ಪರಿಸರದ ಬಾವಿ, ಬೋರ್‌ವೆಲ್‌ಗ‌ಳಲ್ಲಿಯೂ ನೀರಿನ ಒರತೆ ಹೆಚ್ಚಲಿದೆ. ಬೋಳದ ಜನರ ಈ ಕಾಳಜಿ ಇತರರಿಗೂ ಮಾದರಿ.

ಕಾರ್ಕಳ ಶಾಸಕರು, ಜಿ.ಪಂ., ತಾ.ಪಂ. ಸದಸ್ಯರ ಸಹಕಾರ ಹಾಗೂ ಅನುದಾನಗಳಿಂದಾಗಿ ಬೋಳ ಗಾ. ಪಂ.ವ್ಯಾಪ್ತಿಯಲ್ಲಿ ನೀರು, ರಸ್ತೆ ಮತ್ತಿನ್ನಿತರ ಮೂಲ ಸೌಲಭ್ಯಗಳನ್ನು ಪೂರೈಸಲಾಗುತ್ತಿದೆ. ಲಾಕ್‌ಡೌನ್‌ ಸಂದರ್ಭ ಸಮಯ ಹಾಳು ಮಾಡದೇ ಜನ ಮಾಡುತ್ತಿರುವ ಸಾಮಾಜಿಕ ಕಳಕಳಿಯ ಕಾರ್ಯ ಶ್ಲಾಘನೀಯ. ಪಂಚಾಯತ್‌ ವತಿಯಿಂದ ಇವರಿಗೆ ಸಂಪೂರ್ಣ ನೆರವು ನೀಡಲಾಗುವುದು ಎಂದಿದ್ದಾರೆ.

Advertisement

ಪಂಚಾಯತ್‌ ಅಧ್ಯಕ್ಷ, ಉಪಾಧ್ಯಕ್ಷರು ಸಾಥ್‌
ಬೋಳ ಗ್ರಾ.ಪಂ.ವ್ಯಾಪ್ತಿಯ ಈ ಮಾದರಿ ಕೆರೆ ಹೂಳೆತ್ತುವಿಕೆಗೆ ಪ್ರೇರಣೆ ಹಾಗೂ ಸಾಥ್‌ ನೀಡಿದವರು ಪಂಚಾಯತ್‌ ಅಧ್ಯಕ್ಷ ಬೋಳ ಸತೀಶ್‌ ಪೂಜಾರಿ ಹಾಗೂ ಉಪಾಧ್ಯಕ್ಷ ದಿನೇಶ್‌ ಪೂಜಾರಿ. ಇವರಿಬ್ಬರೂ ತಲಾ 10 ಕಾರ್ಮಿಕರನ್ನು ಈ ಯೋಜನೆಗೆ ಪ್ರಾಯೋಜಿಸಿದ್ದು ದುಡಿಯುವ ಈ ಕಾರ್ಮಿಕರಿಗೆ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ನೀಡುವ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next