Advertisement

ಪೌರಕಾರ್ಮಿಕರೇ, ಪ್ರವಾಸಿಗರ ಪ್ರೀತಿ ವಿಶ್ವಾಸ ಗೆಲ್ಲಿ: ಸೋಮಣ್ಣ

09:25 PM Sep 25, 2019 | Lakshmi GovindaRaju |

ಮೈಸೂರು: ಮೈಸೂರು ನಗರದ ಹಿರಿಮೆಯನ್ನು ಕಾಪಾಡುವ ಜವಾಬ್ದಾರಿ ಪೌರ ಕಾರ್ಮಿಕರ ಮೇಲಿದ್ದು, ನಗರವನ್ನು ಸ್ವಚ್ಛವಾಗಿರಿಸಿ ಬರುವಂತಹ ಪ್ರವಾಸಿಗರ ಪ್ರೀತಿ ವಿಶ್ವಾಸ ಗೆಲ್ಲಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

Advertisement

ಪೌರ ಕಾರ್ಮಿಕರಿಗಾಗಿ ನಗರದ ರಾಜೇಂದ್ರ ಕಲಾಮಂದಿರದಲ್ಲಿ ಆಯೋಜಿಸಿದ್ದ, ಸವಲತ್ತು ವಿತರಣೆ ಹಾಗೂ ಸಹ ಭೋಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮೈಸೂರು ನಗರವನ್ನು ಸ್ವಚ್ಛ ನಗರ ಎಂಬ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಕಾರಣಕರ್ತರಾದ ಎಲ್ಲಾ ಪೌರ ಕಾರ್ಮಿಕರಿಗೆ ನಾನು ಆಭಾರಿಯಾಗಿರುತ್ತೇನೆ ಎಂದು ತಿಳಿಸಿದರು.

ಖಾತೆಗೆ ವೇತನ ನೇರ ಜಮೆ: ಗುತ್ತಿಗೆದಾರರ ಮೂಲಕ ಸಂಬಳ ಪಡೆಯುತ್ತಿರುವ ಪೌರ ಕಾರ್ಮಿಕರಿಗೆ ಮೈಸೂರು ಮಹಾನಗರ ಪಾಲಿಕೆಯಿಂದ ನೇರವಾಗಿ ತಮ್ಮ ಖಾತೆಗೆ ಸಂಬಳ ನೀಡುವಂತೆ ಪಾಲಿಕೆಗೆ ಅನುದಾನ ನೀಡಲು ತೀರ್ಮಾನಿಸಲಾಗಿದ್ದು, ಇನ್ನೊಂದು ತಿಂಗಳಲ್ಲಿ ಈ ಯೋಜನೆ ಕಾರ್ಯ ರೂಪಕ್ಕೆ ಬರಲಿದೆ ಎಂದು ಭರವಸೆ ನೀಡಿದರು.

ಮಕ್ಕಳನ್ನು ಓದಿಸಿ: ಪೌರ ಕಾರ್ಮಿಕರು ನಮಗೆಲ್ಲಾ ಉತ್ತಮ ಪರಿಸರ ಕಲ್ಪಿಸಿದ್ದು, ಅವರಿಗಾಗಿ ಮಹಾನಗರ ಪಾಲಿಕೆ ಹಾಗೂ ಸರ್ಕಾರ ಸದಾ ಜೊತೆಯಲ್ಲಿರುತ್ತದೆ. ಎಲ್ಲಾ ಕಾರ್ಮಿಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ ಮಾಡದೇ ಶಿಕ್ಷಿತರನ್ನಾಗಿ ಮಾಡಿ ಒಳ್ಳೆಯ ಉದ್ಯೋಗ ಪಡೆದುಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

ವಿತರಣೆ: ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ 10 ಪೌರ ಕಾರ್ಮಿಕರು ಹಾಗೂ ಒಳಚರಂಡಿ ಕಾರ್ಮಿಕರಿಗೆ ರೈನ್‌ ಕೋಟ್‌, ಗುರುತಿನ ಚೀಟಿ ಹಾಗೂ ಸಮವಸ್ತ್ರವ‌ನ್ನು ವಿತರಿಸಿದರು. ಸ್ವಚ್ಛತಾ ಉಪ ಸಮಿತಿ ವತಿಯಿಂದ ಪ್ಲಾಸ್ಟಿಕ್‌ ಮುಕ್ತ ದಸರಾ ಆಚರಣೆಗಾಗಿ ಭಿತ್ತಿಚಿತ್ರ ಬಿಡುಗಡೆಗೊಳಿಸಿದರು. ನಂತರ ಸಚಿವರು ಪೌರ ಕಾರ್ಮಿಕರಿಗೆ ಕೀರು, ಒಬ್ಬಟ್ಟು, ಜಾಮೂನು, ರೈಸ್‌ಬಾತ್‌, ಅಕ್ಕಿ ರೊಟ್ಟಿ, ಅನ್ನ -ಸಾಂಬಾರ್‌, ಮಸಾಲೆವಡೆ, ತರಕಾರಿ ಪಲ್ಯ ಬಡಿಸಿ ಅವರೊಂದಿಗೆ ತಾವೂ ಕುಳಿತು ಭೋಜನ ಮಾಡಿದರು.

Advertisement

ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್‌ಸಿಂಹ, ಮೈಸೂರು ಮೇಯರ್‌ ಪುಷ್ಪಲತಾ ಜಗನ್ನಾಥ್‌, ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌, ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣ, ಸ್ವಚ್ಛತಾ ಉಪ ಸಮಿತಿಯ ಪದಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next