Advertisement

ವಿಷಾಸುರನ ದಯೆಯಿಂದ ಬದಲಿಸಬೇಕಾದ ನಿರ್ಣಯಗಳು

04:15 AM Aug 29, 2020 | Hari Prasad |

ಅಂದು ಬೆಳಿಗ್ಗೆ ಎಂಟು ಗಂಟೆಗೆ ಸರಿಯಾಗಿ, ಬೆಳಗ್ಗಿನ ಸ್ನಾನಾದಿ ನಿತ್ಯಕರ್ಮಗಳನ್ನು ಮುಗಿಸಿಕೊಂಡು ಬೆಚ್ಚಗಿನ ಕಾಫಿಯನ್ನು ಹೀರುತ್ತಾ ದಿನಪತ್ರಿಕೆಯನ್ನು ಓದುತ್ತಿದ್ದೆ.

Advertisement

ಆವಾಗಲೇ ನೆನಪಾಗಿದ್ದು, ಹಿಂದಿನ ದಿನ ಮಧ್ಯರಾತ್ರಿಯಿಂದ ಲಾಕ್ ಡೌನ್ ಹೇರಲಾಗಿದೆ ಅನ್ನೋದು. “ಏನು ಮಾಡುವುದು? ಇನ್ನು 15 ದಿನಗಳನ್ನು ಮನೆಯ ಒಳಗಡೆ ಹೇಗೆ ಕಳೆಯುವುದು?” ಎನ್ನುವುದೇ ಮಹಾ ಚಿಂತೆಯಾಗಿ ಹೋಯಿತು.ಈ ಚಿಂತೆಯು ನನಗೊಬ್ಬಳಿಗೇ ಕಾಡಿರುವುದಲ್ಲ. ವಿಶ್ವದ ಮೂಲೆಮೂಲೆಗಳಲ್ಲೂ ಅನೇಕರಿಗೆ ಕಾಡಿರುವಂಥದ್ದು.

ಈ ” ಕೋವಿಡ್ 19″ ಎಂಬ ವಿಷಾಸುರ ಪ್ರತಿಯೊಬ್ಬರಿಗೂ ಭಯದ ಜೊತೆಗೆ ಸಂಕಟವನ್ನೂ ನೀಡಿರುವುದು ವಾಸ್ತವಿಕ ಸತ್ಯ. ಸುಮಾರು ಅರ್ಧ ವರ್ಷದಿಂದಲೇ ಕಾಡುತ್ತಿರುವ ಈ ಸೋಂಕಿನಿಂದ ಜಗತ್ತಿನ ವ್ಯಾವಹಾರಿಕ ವಾತಾವರಣಕ್ಕೆ ಬೀರಿರುವ ಅಡ್ಡ ಪರಿಣಾಮಗಳನ್ನು ಸರಿಪಡಿಸಲು ಏನು ಮಾಡಬಹುದು ಎನ್ನುವುದು ಆಲೋಚಿಸಲೇಬೇಕಾದ ಸಂಗತಿ.

ಇಂಥ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ, ಸಣ್ಣ ಪುಟ್ಟ ವ್ಯವಹಾರ ನಡೆಸುತ್ತಿರುವ ಉದ್ಯಮಿಗಳಿಗೆ, ಸಣ್ಣ ಕೈಗಾರಿಕಾ ಉದ್ಯಮಿಗಳು ಹಾಗೂ ಅಲ್ಲಿ ಸಣ್ಣ ಮಟ್ಟಿನ ಸಂಬಳ ಪಡೆದುಕೊಂಡು ಕೆಲಸ ಮಾಡುತ್ತಿರುವ ಜನರು – ಇವರೆಲ್ಲಾ ತುಂಬಾ ಹಾನಿ ಅನುಭವಿಸುವ ಭಯದಲ್ಲಿ ದಿನ ಕಳೆಯುತ್ತಿರುವುದು ತಿಳಿದಿರುವ ಸಂಗತಿ.

ಹೀಗಿರುವಾಗ, ಎಲ್ಲರೂ ಅವರವರ ಆಯವ್ಯಯದ ಯೋಜನೆಗಳನ್ನು ಚೆನ್ನಾಗಿ ಅರ್ಥೈಸಿಕೊಂಡು ಇತಿಮಿತಿಗಳನ್ನು ಮತ್ತೆ ವ್ಯಾಖ್ಯಾನಿಸುವುದು ಅನಿವಾರ್ಯ. ಇದಕ್ಕೆ ಏನು ಮಾಡಬಹುದು ಎನ್ನುವುದನ್ನು ಮುಂದೆ ಓದೋಣ ಬನ್ನಿ..

Advertisement

ಇಡೀ ಜಗತ್ತೇ ಈ ಕೋವಿಡಾಸುರನ ಹರಡುವಿಕೆಗೆ ತತ್ತರಿಸುತ್ತಿದೆ. ಜೊತೆಗೆ ಮನೆಮನೆಯಲ್ಲೂ, ವ್ಯಾಪಾರ ಘಟಕಗಳಲ್ಲೂ, ಸಣ್ಣ ಹಾಗೂ ಮಧ್ಯಮ ಸಂಸ್ಥೆಗಳಲ್ಲೂ ಆರ್ಥಿಕ ಬಿಕ್ಕಟ್ಟು ತಡೆಗಟ್ಟಲಾಗದ ಸಮಸ್ಯೆಯಾಗಿ ಪರಿಣಮಿಸಿದೆ. ಇಂಥ ಸಮಯದಲ್ಲಿ ಎಲ್ಲರೂ ಗಾಬರಿಗೊಳ್ಳದೆ ಮುಂಬರುವ ದಿನಗಳಲ್ಲಿ ಏನು ಕಾದಿದೆ ಅನ್ನುವುದನ್ನು ವಿಶ್ಲೇಷಿಸಿ ನಿರ್ಧಾರಗಳನ್ನು ಕೈಗೊಳ್ಳುವುದು ಉತ್ತಮ.

ಕೌಟುಂಬಿಕವಾಗಿರಲಿ, ವ್ಯಾವಹಾರಿಕವಾಗಿರಲಿ – ಈ ಪರಿಸ್ಥಿತಿಯಿಂದ ನೋವಿಗೊಳಗಾಗದೆ ಹೊರಬರುವುದೇ ಅತಿ ಅಗತ್ಯವಾದ ಸಂಗತಿ. ಈ ಸಾಂಕ್ರಾಮಿಕ ರೋಗವು ಪ್ರತಿಯೊಬ್ಬರ ಜೀವನ ಶೈಲಿ, ಸಾಮಾಜಿಕ ನಡವಳಿಕೆ, ಪ್ರವಾಸ ಅಭ್ಯಾಸಗಳು, ಖರ್ಚುವೆಚ್ಚಗಳ ಮಾದರಿ, ದೇಶವಿದೇಶಗಳ ಪರಸ್ಪರಾವಲಂಬನೆ, ವ್ಯಾವಹಾರಿಕ ವಾತಾವರಣ – ಎಲ್ಲವನ್ನೂ ಬದಲಿಸಿದೆ. ಈ ಬದಲಾವಣೆಯಿಂದ ಒಳ್ಳೆಯದಾಗುವುದೋ, ಕೆಟ್ಟದ್ದಾಗುವುದೋ ಎಂಬುದು ಈಗಲೇ ಅರ್ಥ ಮಾಡಿಕೊಳ್ಳುವುದು ಕಷ್ಟಕರ.

ಈ ಪರಿಣಾಮಗಳಿಂದ ಆರ್ಥಿಕತೆಯ ಮೇಲೆ ಎಂಥ ಪ್ರಭಾವ ಬೀರುವುದು ಎನ್ನುವುದು ಇಷ್ಟು ಹೊತ್ತಿಗೆ ಎಲ್ಲರಿಗೂ ತಿಳಿದಿದೆ. ಆದರೆ,ಆರ್ಥಿಕತೆಯನ್ನು ಸ್ಥಿರವಾಗಿಡುವುದು ದೇಶದ ಸರಕಾರದ ಜವಾಬ್ದಾರಿ ಮಾತ್ರವಲ್ಲದೆ, ದೇಶದಲ್ಲಿರುವ ಪ್ರತಿಯೊಬ್ಬ ಉದ್ಯಮಿ, ಸಣ್ಣ ಹಾಗೂ ಮಧ್ಯಮ ಸಂಸ್ಥೆಗಳ ಜವಾಬ್ದಾರಿಯೂ ಆಗಿದೆ.

ಭಾರತ ಸರಕಾರವು ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ಹಲವಾರು ರೀತಿಯಲ್ಲಿ ಸಹಕಾರ ನೀಡುವಂಥ ಹಣಕಾಸು ಕ್ರಮಗಳನ್ನು ಜನರಿಗೆ ಉಪಯೋಗವಾಗುವಂತೆ ಜಾರಿಗೊಳಿಸಿದೆ. ಮಾತ್ರವಲ್ಲದೆ ಸ್ವದೇಶೀ ಕಾಯ್ದೆ, ಸೂಕ್ಷ್ಮ ಸಣ್ಣ ಹಾಗೂ ಮಧ್ಯಮ  ಕೈಗಾರಿಕೆಗಳ ಅಭಿವೃದ್ಧಿ ಕಾಯ್ದೆ ಮುಂತಾಗಿ ಹಲವಾರು ರೀತಿಯಲ್ಲಿ ಉದ್ಯಮಿಗಳಿಗೆ ಬಲ ನೀಡುವಂಥ ಯೋಜನೆಗಳನ್ನು ಪರಿಚಯಿಸಿದೆ.

ಈ ಎಲ್ಲ ಸೌಲಭ್ಯಗಳ ಬಲ ಪಡೆದು ಲಾಕ್ ಡೌನ್ ತೆರೆದಂತೆ ತಮ್ಮ ಉದ್ಯಮವನ್ನು ಮತ್ತೆ ಜೀವಭರಿಸಲು ತಂತ್ರವನ್ನು ಯೋಜಿಸಬೇಕಾಗಿದೆ. ಇಲ್ಲವಾದಲ್ಲಿ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಬದುಕುಳಿಯುವುದು ತುಂಬಾ ಕಷ್ಟಕರ.

ಮೌಲ್ಯಮಾಪನ, ಅಂದಾಜು ಹಾಗೂ ಯೋಜನೆ:
ಕೋವಿಡ್ 19  ಶುರುವಾದಾಗಿನಿಂದ ಇವತ್ತಿನವರೆಗೆ ವ್ಯವಹಾರ ಹೇಗೆ ನಡೆದಿದೆ, ಎಷ್ಟು ಹಾನಿಯುಂಟಾಗಿದೆ, ಹಿಂದಿನ ವರ್ಷ ಇದೇ ಸಮಯದಲ್ಲಿ ಹೇಗೆ ನಡೆದಿದೆ, ಈಗ ಹೇಗೆ ನಡೆಯುತ್ತಿದೆ, ಎಷ್ಟು ಜನ ನೌಕರರನ್ನು ಕೆಲಸದಿಂದ ತೆಗೆಯಲಾಗಿದೆ, ಎಷ್ಟು ಸರಕುಗಳು ವ್ಯವಹಾರದಲ್ಲಿ ಇದೆ, ಇಂದಿನ ವಹಿವಾಟಿನ ರೀತಿಯಲ್ಲಿ ಅಂದಾಜು ಎಷ್ಟು ಸರಕು ಬೇಕಾಗುತ್ತದೆ – ಹೀಗೆ ಎಲ್ಲ ವಿಚಾರಗಳನ್ನು  ಯೋಚಿಸಿ, ಚರ್ಚಿಸಿ ಮುಂದಿನ ತಿಂಗಳುಗಳ ಉಳಿಯುವಿಕೆಗೆ ಯೋಜನೆಗಳನ್ನು ನಿರ್ಧರಿಸಬೇಕು. ಒಂದು ನಿರ್ಧಾರಕ್ಕೆ ಬಂದ ಮೇಲೆ ಆ ಯೋಜನೆಗಳ ಸಾಧಕ-ಬಾಧಕಗಳ ಬಗ್ಗೆ ಚಿಂತನೆ ನಡೆಸಿ, ನಿಯತಕಾಲಿಕವಾಗಿ ಪರಿಶೀಲಿಸುತ್ತಿರಬೇಕು. ಕೆಲಸಕ್ಕೆ ಬಾರದ ಯೋಜನೆಗಳನ್ನು ಸರಿಪಡಿಸಿ ಉಪಯೋಗಕ್ಕೆ ಬರುವಂತೆ ಮಾಡಬೇಕು.

ಆರ್ಥಿಕ ಪರಿಸ್ಥಿತಿ:
ಉದ್ಯಮಗಳು ತಮ್ಮ ಹಣಕಾಸಿನ ಪರಿಸ್ಥಿತಿಯನ್ನು ಗಮನಿಸಿ, ಸರಕಾರವು ಜಾರಿಗೊಳಿಸಿರುವ ಸಾಲ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕು. ಹಣವನ್ನು ಮಾಡುವ ಮೊದಲು ಹಣವನ್ನು ವ್ಯಯಿಯಾಬೇಕಾಗುತ್ತದೆ ಅನ್ನುವುದನ್ನು ತಿಳಿದು, ಹಣವನ್ನು ಎಲ್ಲಿ ವ್ಯಯಿಸಬೇಕು ಅನ್ನೋದನ್ನು ಸರಿಯಾಗಿ ನಿರ್ಧಾರ ಮಾಡಬೇಕು. ಇಲ್ಲವಾದಲ್ಲಿ ಒಮ್ಮೆ ವ್ಯಯಿಸಿದ ಹಣವನ್ನು ಮತ್ತೆ ಗಳಿಸಲು ತುಂಬಾ ಶ್ರಮ ಪಡಬೇಕಾಗುತ್ತದೆ.

ಅತಿಯಾದ ಸಾಲ ಮಾಡದೆ, ವಹಿವಾಟುಗಳನ್ನು ಹೆಚ್ಚಿಸಲು ಮಾರ್ಕೆಟಿಂಗ್ ಮಾಡಿ ಹಣವನ್ನು ಹೂಡಿಕೆ ಮಾಡುವಾಗ ಜಾಸ್ತಿಯಾಗಿ ಚಲಾವಣೆಯಲ್ಲಿರುವ ಅಗತ್ಯ ಸರಕುಗಳನ್ನು ಖರೀದಿಸಬೇಕು. ಇದರಿಂದ ಸರಕುಗಳು ಬೇಗನೆ ಚಲಾವಣೆ ಆಗಿ ಬಂಡವಾಳ ವೃದ್ಧಿಸುವಲ್ಲಿ ಉಪಯೋಗವಾಗುತ್ತದೆ.

ಸಿಬ್ಬಂದಿ ವರ್ಗ, ಕಾರ್ಯಾಚರಣೆ ಹಾಗೂ ಮೂಲ ಸೌಕರ್ಯಗಳು:
ಕೋವಿಡ್ 19 ನಿಂದಾಗಿ ಮನೆಯಿಂದಲೇ ಕೆಲಸ ಮಾಡುವಂಥ ಪರಿಸ್ಥಿತಿಗಳು ಹೆಚ್ಚಾಗಿದೆ. ಹಲವಾರು ಉದ್ಯಮಗಳಲ್ಲಿ ಮಾಡಬೇಕಾದ ಕೆಲಸಗಳು ಮನೆಯಿಂದ ನಿರ್ವಹಿಸುವುದು ಕಷ್ಟಕರ. ಆದರೆ ಅಂತ ಸೌಲಭ್ಯ ಇರುವಲ್ಲಿ ಮನೆಯಿಂದಲೇ ಕಾರ್ಯಾಚರಣೆ ಮಾಡುವಾಗ ಅನೇಕ ರೀತಿಯ ಸೌಕರ್ಯಗಳನ್ನು ನೀಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಸಿಬ್ಬಂದಿಗಳ ಸಹಕಾರವೂ ಅತ್ಯಗತ್ಯ.

ಡಿಜಿಟಲ್ ಆಗಿ ಕೆಲಸ ಮಾಡಬೇಕಾದಾಗ ಉದ್ಯಮಗಳು ಹಲವಾರು ಸೌಕರ್ಯಗಳನ್ನು ಸಿಬ್ಬಂದಿಗಳಿಗೂ ನೀಡಬೇಕು, ಜೊತೆಗೆ ಗ್ರಾಹಕರಿಗೂ ಡಿಜಿಟಲ್ ಆಗಿ ಹಣ ಪಾವತಿ ಮಾಡುವ ಸೌಕರ್ಯಗಳನ್ನೂ ಒದಗಿಸಬೇಕಾಗುತ್ತದೆ.

ಡಿಜಿಟಲ್ ಆಗಿ ಕಾರ್ಯ ನಿರ್ವಹಿಸಲು ಉದ್ಯಮಗಲು ಬಹಳ ಎಚ್ಚರಿಕೆಯಿಂದ ಖರ್ಚುಗಳನ್ನು ನಿರ್ಧರಿಸಬೇಕು.  ಬ್ಯಾಂಕುಗಳಿಂದ ಸಿಗುವ ಸೌಕರ್ಯಗಳ ಲಾಭ ಪಡೆದರೂ, ಆ ದುಡ್ಡು ಸಾಕಾಗದೆ ಇರಬಹುದು. ಇಂಥ ಪರಿಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಕಾರ್ಯನಿರ್ವಹಿಸಬೇಕಾಗುತ್ತದೆ.

ಪೂರೈಕೆದಾರರ ನಿರ್ಬಂಧನೆಗಳು
ಉದ್ಯಮಗಳು ತಮ್ಮ ನ್ಯೂನ್ಯತೆಗಳನ್ನು ಅರ್ಥಿಸಿಕೊಳ್ಳುವುದರ ಜೊತೆಗೆ ತಮ್ಮ ಪೂರೈಕೆದಾರರ ನಿರ್ಬಂಧನೆಗಳನ್ನೂ ಅರ್ಥೈಸಿಕೊಳ್ಳಬೇಕು. ಹಾಗೂ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಬೇರೆ ಬೇರೆ ಪೂರೈಕೆದಾರರ ಜೊತೆಗೆ ಒಳ್ಳೆಯ ನಂಟು ಬೆಳೆಸಿಕೊಳ್ಳಬೇಕು. ಇದರಿಂದ ತಮ್ಮ ವಹಿವಾಟುಗಳಿಗೆ ನಿಲುಗಡೆಯಾಗುವಂಥ ಸಂಭವಗಳು ಕಡಿಮೆಯಾಗುತ್ತದೆ.

ಉತ್ಪನ್ನಗಳು
ಕೋವಿಡ್ 19 ಹರಡುವುದರ ಮೊದಲು ಚಾಲ್ತಿಯಲ್ಲಿದ್ದ ಸರಕುಗಳು ಈಗ ಮಾನ್ಯತೆ ಪಡೆಯದೇ ಇರಬಹುದು. ಹಾಗಾಗಿ ಉದ್ಯಮಗಳು ತಾವು ಒದಗಿಸುತ್ತಿರುವ ಉತ್ಪನ್ನಗಳನ್ನು ಕಾಲದ ಬೇಡಿಕೆಗಳ ಅನುಗುಣವಾಗಿ ನಿರ್ಧರಿಸಿ ಗ್ರಾಹಕರಿಗೆ ಒದಗಿಸಿ ಕೊಡಬೇಕು. ಇದರಿಂದ ವಹಿವಾಟು ನಿಶ್ಚಲವಾಗದೆ ನಡೆಯುತ್ತಲೇ ಇರುತ್ತದೆ. ಈ ಮೇಲಿನಂತೆ ಉದ್ಯಮಗಳು ತಮ್ಮ ಯೋಜನೆಗಳನ್ನು ನಿರ್ಧರಿಸಿದರೆ, ಈ ಕಷ್ಟಕರ ಪರಿಸ್ಥಿತಿಗಳಿಂದ ಹಾನಿಯಾಗದಂತೆ ಮುಂದೆ ಚಲಿಸಬಹುದು.

ಹಾಗೆಯೇ, ಮನೆಮನೆಗಳಲ್ಲೂ ತಮ್ಮ ಖರ್ಚುವೆಚ್ಚಗಳನ್ನು ಆಲೋಚಿಸಿ ನಿರ್ಧರಿಸಿದರೆ ಕಷ್ಟಕರ ಪರಿಸ್ಥಿತಿಗಳಲ್ಲಿ ಭಯವಿಲ್ಲದೆ ಜೀವನ ಸಾಗಿಸಬಹುದು.ಅಗತ್ಯವಿರುವ ವಸ್ತುಗಳನ್ನು ಮಾತ್ರವೇ ತೆಗೆದುಕೊಂಡು, ಹಣವನ್ನು ಉಳಿಸಬೇಕು. ಕಷ್ಟಪಟ್ಟು ಗಳಿಸಿದ ಹಣವನ್ನು  ನಿಮಿಷಾರ್ಧದಲ್ಲಿ ವೆಚ್ಚ ಮಾಡಬಹುದು. ಆದರೆ ಅದೇ ಹಣವನ್ನು ಮತ್ತೆ ಗಳಿಸಲು ಅಷ್ಟೇ ಕಷ್ಟಪಡಬೇಕಾಗುತ್ತದೆ ಅನ್ನೋದನ್ನು ತಿಳಿದು ವ್ಯವಹರಿಸಿದರೆ ಉತ್ತಮ.

ಕೋವಿಡ್ 19 ಎನ್ನುವುದು ಸದ್ಯದಲ್ಲಿ ದೂರವಾಗುವ ಸಮಸ್ಯೆ ಅಲ್ಲ. ಅದರೊಂದಿಗೆ ಬದುಕುವುದನ್ನು ನಾವು ಕಲಿಯಬೇಕಾಗಿದೆ. ಈಗ ಅತಿಯಾದ ಲಾಭ ಗಳಿಸುವುದಾಗಲೀ, ಐಷಾರಾಮಿಜೀವನ ನಡೆಸುವುದಾಗಲಿ ಹಲವರಿಗೆ ಸಾಧ್ಯವಿಲ್ಲ. ನೂತನವಾದ ಸಾಮಾನ್ಯತೆಯನ್ನು ಅರಿತು, ಅದರಂತೆಯೇ ಬದುಕುವುದನ್ನು ಕಲಿತು, ಜೀವಿಸುವುದೇ ಇಂದಿಗೆ ಒಳಿತು.


– ದೀಪಲಕ್ಷ್ಮಿ ಭಟ್

Advertisement

Udayavani is now on Telegram. Click here to join our channel and stay updated with the latest news.

Next