Advertisement

ಹೊಗೆಗೂಡುಗಳಾಗಿರುವ ನಗರಗಳು ಬದಲಾಗಲು ಸಿದ್ಧವಿವೆ!

06:00 AM Sep 22, 2018 | |

ನಮ್ಮ ನಗರಗಳು ಬದಲಾಗುತ್ತಿರುವುದು ಸುಳ್ಳಲ್ಲ. ಒಂದು ಸಂದರ್ಭದಲ್ಲಿ ಎಲೆಕ್ಟ್ರಿಕ್‌ ಕಾರುಗಳೆಂದರೆ ದೂರ ಓಡುತ್ತಿದ್ದವರು ಈಗ ಪರವಾಗಿಲ್ಲ, ಒಮ್ಮೆ ನೋಡೋಣ ಎನ್ನುವಂತಿದ್ದಾರೆ. ಇದಕ್ಕೆ ಮೂಲ ಕಾರಣ ಹೊಗೆಗೂಡುಗಳಾಗುತ್ತಿರುವ ನಗರಗಳು ಹಾಗೂ ಜನರಲ್ಲಿ ಹೆಚ್ಚುತ್ತಿರುವ ಪರಿಸರದ ಬಗೆಗಿನ ಕಾಳಜಿ. 

Advertisement

ಇಡೀ ಜಗತ್ತು ನಿಧಾನವಾಗಿಯಾದರೂ ಎಲೆಕ್ಟ್ರಿಕ್‌ ವಾಹನಗಳನ್ನು ಸ್ವಾಗತಿಸತೊಡಗಿದೆ. ಅದರಲ್ಲೂ ಅಭಿವೃದ್ಧಿಗೊಂಡ ರಾಷ್ಟ್ರಗಳಲ್ಲಿ ಈ ಪರಂಪರೆ ಆರಂಭವಾಗಿ ಕೆಲವು ವರ್ಷಗಳು ಕಳೆದಿವೆ. ಆದರೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆ ಹವಾದ ತೀವ್ರತೆ ಕೊಂಚ ಕಡಿಮೆ. ಇದರ ಮಧ್ಯೆಯೂ ಸಮಾಧಾನಕರ ಸಂಗತಿಯೆಂದರೆ ಅದರ ಕುರಿತ ಒಲವು ಹೆಚ್ಚತೊಡಗಿರುವುದಂತೂ ಸತ್ಯ.

ವಾಹನ ತಯಾರಕ ಕಂಪೆನಿಗಳೂ ಇದರತ್ತ ಆಕರ್ಷಿತವಾಗಿವೆ. ಪ್ರಸ್ತುತ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವೂ ಎಲೆಕ್ಟ್ರಿಕ್‌ ವಾಹನಗಳನ್ನು ಪ್ರೋತ್ಸಾಹಿಸುವತ್ತ ಸ್ಪಷ್ಟ ನಿಲುವನ್ನು ತಾಳಿದೆ. ಅದರ ಪ್ರಕಾರ 2030ರೊಳಗೆ ಇಡೀ ದೇಶ ಎಲೆಕ್ಟ್ರಿಕ್‌ ವಾಹನಗಳ (ಮುಖ್ಯವಾಗಿ ಕಾರು) ಸದ್ದೇ ಕೇಳುತ್ತಿರಬೇಕು. ಇಂಥದೊಂದು ನಿರ್ಣಯವನ್ನು ಕೈಗೊಳ್ಳುವ ಮೊದಲು ಅದರಿಂದ ಆಗಬಹುದಾದ ಪ್ರಯೋಜನಗಳ ಕುರಿತೂ ಲೆಕ್ಕ ಹಾಕಲಾಗಿದೆ. ಒಂದೆಡೆ ಆರೋಗ್ಯಕರ ಸಮಾಜವೂ ನಿರ್ಮಾಣ. ಮತ್ತೂಂದೆಡೆ ಆರ್ಥಿಕ ಮಿತವ್ಯಯ ಸಾಧಿಸಲೂ ಸಾಧ್ಯವಾಗಬಹುದು ಎಂಬುದು ಸರಕಾರದ ದೂರದ ಲೆಕ್ಕಾಚಾರ.

ವಾಯು ಮಾಲಿನ್ಯ
ಇಂದು ಮೆಟ್ರೋ ನಗರಗಳೂ ಸೇರಿದಂತೆ ತ್ವರಿತಗತಿಯಲ್ಲಿ ಬೆಳೆಯುತ್ತಿರುವ ನಗರಗಳನ್ನು ಕಿತ್ತುತಿನ್ನುತ್ತಿರುವ ಸಮಸ್ಯೆಯೆಂದರೆ ವಾಯುಮಾಲಿನ್ಯ. ಪ್ರತಿ ವರ್ಷವೂ ದಿಲ್ಲಿಯ ಕಥೆಯನ್ನು ನೋಡುತ್ತಲೇ ಇದ್ದೇವೆ. ಹೊಗೆಯಿಂದ (ವಾಯು ಮಾಲಿನ್ಯ)ಇಡೀ ದಿಲ್ಲಿ ಮೂಗು ಮುಚ್ಚಿಕೊಂಡು ಬದುಕುತ್ತದೆ. ಎಷ್ಟೋ ಜನರು ಬೀದಿಗಿಳಿಯಲೇ ಹಿಂಜರಿಯುತ್ತಾರೆ. ಬಸ್ಸುಗಳಿರಲಿ, ವಿಮಾನಗಳೂ ಹಾರಲು ಅವಕಾಶವಾಗದ ಸ್ಥಿತಿ ಉದ್ಭವಿಸುತ್ತದೆ. ಇದು ಇಂದು ದಿಲ್ಲಿಯ ಸ್ಥಿತಿ ಇರಬಹುದು. ಆದರೆ ಮುಂದೆ ಹಲವು ನಗರಗಳ ಸ್ಥಿತಿ ಇದಕ್ಕಿಂತ ಘೋರವಾಗಿರುವುದರಲ್ಲಿ ಅನುಮಾನವೇ ಇಲ್ಲ. ಈಗಲೇ ಬೆಂಗಳೂರು ಕುದಿಯತೊಡಗಿದೆ. ಹೆಚ್ಚಿನ ವಾಹನ ಸಂಖ್ಯೆ, ಜನಸಂಖ್ಯೆ ಎಲ್ಲದರಿಂದಲೂ ಹಸಿರು ಪ್ರದೇಶ ಕರಗಿ ಹೋಗಿ ಉಷ್ಣಾಂಶದ ಮಟ್ಟ ಹೆಚ್ಚುತ್ತಲೇ ಇದೆ. ಅದೊಂದು ಬಗೆಯಲ್ಲಿ ನೆರೆ ನೀರು ಸೊಂಟದ ಮಟ್ಟದಲ್ಲಿದ್ದಂತೆ. ಸ್ವಲ್ಪ ಕಾಲ ನಡೆಯಬಹುದು. ಆದರೆ ಮೂಗಿನ ಮಟ್ಟಕ್ಕೆ ನೀರು ಬಂದರೆ ಮುಳುಗಲೇಬೇಕಲ್ಲ. 

ದಿಲ್ಲಿ ಈಗ ಮುಳುಗುತ್ತಿದೆ !
ಎಲೆಕ್ಟ್ರಿಕ್‌ ಹೊಗೆ ರಹಿತವಾದ ಕಾರಣ ವಾಯು ಮಾಲಿನ್ಯ ನಿಯಂತ್ರಣಕ್ಕೆ ಮಹತ್ವದ ಕೊಡುಗೆ ನೀಡಲಿದೆ. ನಮಗೆ ನೂರಕ್ಕೆ ನೂರರಷ್ಟು ವಾಯುಮಾಲಿನ್ಯದಿಂದ ಮುಕ್ತಿ ಸಿಗದಿದ್ದರೂ ಶೇ. 75 ರಷ್ಟು ವಾಯು ಮಾಲಿನ್ಯ ನಿಯಂತ್ರಣವಾದರೆ ಇಡೀ ದೇಶದ ನಾಗರಿಕರಿಗೆ 50 ವರ್ಷ ಆಯಸ್ಸು ಹೆಚ್ಚು ಸಿಕ್ಕಿದಂತೆಯೇ. ಇದರಲ್ಲಿ ಯಾವುದೇ ಅನುಮಾನವೇ ಇಲ್ಲ. ಇದರೊಂದಿಗೆ ಕಚ್ಚಾ ತೈಲ ಆಮದನ್ನು ಗಣನೀಯವಾಗಿ ತಗ್ಗಿಸುತ್ತದೆ. ಅದರಿಂದ ಆಗುವ ಲಾಭವೇ ಅತ್ಯಧಿಕ.

Advertisement

ಸುಮಾರು ಒಂದೆರಡು ತಿಂಗಳಿಂದ ಪೆಟ್ರೋಲ್‌ ಡೀಸೆಲ್‌ ಬೆಲೆ ಏರುತ್ತಲೇ ಇದೆ. ಈಗ ಸುಮಾರು 84 ರೂ. ವರೆಗೆ ಬಂದು ನಿಂತಿದೆ. ಕೆಲವು ನಗರಗಳಲ್ಲಿ 90 ರೂ. ವರೆಗೂ ಲೀಟರ್‌ನ ಪೆಟ್ರೋಲ್‌ ಬೆಲೆ ಇದೆ. ಜನಸಾಮಾನ್ಯರ  ಜೇಬನ್ನು ಪೆಟ್ರೋಲ್‌ ಬೆಲೆ ಸುಡುತ್ತಿರುವುದೂ ಸುಳ್ಳಲ್ಲ. ಇದೆಲ್ಲವನ್ನೂ ನೋಡಿಕೊಂಡು ಕೇಂದ್ರ ಸರಕಾರ ಸುಮ್ಮನಿದೆ ಎಂದು ಪ್ರತಿಪಕ್ಷಗಳು ಭಾರತ ಬಂದ್‌ ನಡೆಸಿದ್ದೂ ಆಯಿತು. ಅದಕ್ಕೆ ಕೇಂದ್ರ ಸರಕಾರ “ಅವುಗಳ ಬೆಲೆ ನಿಯಂತ್ರಣ ನಮ್ಮ ಕೈಯಲ್ಲಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಳಿತವಾಗುತ್ತಿದೆ’ ಎಂದು ಹೇಳಿ ಸುಮ್ಮನಾಗಿತ್ತು. ಕೊನೆಗೂ ಕೆಲವು ರಾಜ್ಯ ಸರಕಾರಗಳು ರಾಜ್ಯದ ತೆರಿಗೆ ಪ್ರಮಾಣವನ್ನು  ಇಳಿಸಿ ಲೀಟರ್‌ಗೆ 2 ರೂ. ಇಳಿಕೆ ಮಾಡಿದವು. ಅದನ್ನೇ ನಮ್ಮ 
ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರವೂ ಅನುಸರಿಸಿತು. ಅದು ಬೇರೆ ಸಂಗತಿ.

ನಿಜ, ನಾವು ನಮ್ಮ ಅಗತ್ಯದ ಶೇ. 80 ರಷ್ಟು ಕಚ್ಚಾತೈಲವನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಇದಕ್ಕೆ ಪೂರಕವಾಗಿ ನಮ್ಮ ವಾಹನ ವ್ಯವಸ್ಥೆ (ಸಾರಿಗೆ ವ್ಯವಸ್ಥೆ)ಯೂ ಬಹುತೇಕ ನಂಬಿಕೊಂಡಿರುವುದು ಪೆಟ್ರೋಲ್‌, ಡೀಸೆಲ್‌ನ್ನೇ. 2016-17 ರಲ್ಲಿ ನಾವು 4.7 ಲಕ್ಷ ಕೋಟಿ ರೂ. ಗಳನ್ನು (70 ಶತಕೋಟಿ ಅಮೆರಿಕನ್‌ ಡಾಲರ್‌) ಕಚ್ಚಾ ತೈಲ ಆಮದಿಗೆ ವಿನಿಯೋಗಿಸಿದ್ದೆವು.  ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕಾರು ಕಂಪೆನಿಗಳೂ ಹೆಚ್ಚೆಚ್ಚು ಕಾರುಗಳನ್ನು ತಯಾರಿಸುತ್ತಿವೆ. ನಾವೂ ಮುಗಿಬೀಳುತ್ತಿದ್ದೇವೆ. ಒಟ್ಟೂ ಪರಿಣಾಮವೇನೆಂದರೆ ರಸ್ತೆಯಲ್ಲಿ ವಾಹನಗಳದ್ದೇ ಸಾಲು.ಇವೆಲ್ಲವೂ ಮೂಗಿನವರೆಗೆ ನೀರು ಬಿಟ್ಟುಕೊಳ್ಳುವ ಕ್ರಮವೇ.

ಜನರೇಕೆ ಸುಮ್ಮನಿದ್ದಾರೆ?
ಹಾಗಾದರೆ ಜನರೇಕೆ ಸುಮ್ಮನಿದ್ದಾರೆ ಎನ್ನುವ ಪ್ರಶ್ನೆ ಏಳಬಹುದು. ಇಷ್ಟೆಲ್ಲಾ ಸಮಸ್ಯೆಗಳಿರುವಾಗಲೂ ಎಲೆಕ್ಟ್ರಿಕ್‌ ಕಾರುಗಳೇಕೆ ಜನಪ್ರಿಯ ವಾಗಲಿಲ್ಲ ಎನ್ನುವ ಮಾತೂ ಕೇಳಿಬರುತ್ತದೆ. ಇದಕ್ಕೆ ಹತ್ತು ಹಲವು ಕಾರಣಗಳಿರಬಹುದು. ಆದರೆ ಈಗ ನಿಧಾನವಾಗಿ ಅದರತ್ತ ವಾಲುತ್ತಿರುವುದಂತೂ ಸತ್ಯ. ಹಲವು ಬಾರಿ ಸರಕಾರಗಳ ನೀತಿ, ಒಲವುಗಳೂ ಜನರ ಆಲೋಚನೆಯನ್ನು ನಿರ್ಧರಿಸುತ್ತವೆ ಎನ್ನುವ ಮಾತೂ ಉಂಟು. 

ಬೆಂಗಳೂರು ಮೂಲದ ಕಂಪೆನಿ ರೇವಾ ಭಾರತದ ಮೊದಲ ಎಲೆಕ್ಟ್ರಿಕ್‌ ಕಾರು. ಅದರ ಬಗ್ಗೆ ಹೇಳುವುದಕ್ಕೇ ಬಹಳಷ್ಟಿದೆ. 19954ರಲ್ಲಿ ಚೇತನ್‌ ಕಂಪೆನಿ ಸ್ಥಾಪಿಸಿದರು. ಬಳಿಕ ಅಮೆರಿಕದ ಮತ್ತೂಂದು ಕಂಪೆನಿಯೊಂದಿಗೆ ಸೇರಿ 2001ರಲ್ಲಿ ರೇವಾ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಚಿಕ್ಕ ಕಾರೊಂದು ಪುಟ ಪುಟನೇ ಓಡುತ್ತಿತ್ತು ರಸ್ತೆಯ ಮೇಲೆ. ನೂರಾರು ಪೆಟ್ರೋಲ್‌ ಕಾರುಗಳ ಸುತ್ತ ಓಡುತ್ತಿದ್ದ ಪುಟ್ಟ ಎಲೆಕ್ಟ್ರಿಕ್‌ ಕಾರುಗಳನ್ನು 
ನೋಡುವುದೇ ಒಂದು ಸೋಜಿಗ ವೆನಿಸುತ್ತಿತ್ತು. ಬೆಂಕಿಪೊಟ್ಟಣವೊಂದು ಜೀವಬಂದು ಓಡುತ್ತಿದೆ ಎಂದೆನಿಸುತ್ತಿತ್ತು. 2010ರಲ್ಲಿ ಮಹೀಂದ್ರಾ ಕಂಪೆನಿ ರೇವಾವನ್ನು ಖರೀದಿಸಿ ಹೊಸ ರೂಪದಲ್ಲಿ ಬಿಡುಗಡೆಗೊಳಿಸಿತು.

ಆದರೆ ರೇವಾ ಮೊದಲ ರೂಪದಲ್ಲಿ ಮಾರುಕಟ್ಟೆಯಲ್ಲಿ ಅಷ್ಟೊಂದು ಜನಪ್ರಿಯತೆ ಗಳಿಸಲಿಲ್ಲ. ಅದಕ್ಕೆ ಮೂಲ ಕಾರಣವೆಂದರೆ ಸರಕಾರದ ನೀತಿ. ಯಾಕೆಂದರೆ ಕಾರನ್ನು ರೂಪಿಸತೊಡಗಿದಾಗ ಸರಕಾರದಿಂದ ಸಬ್ಸಿಡಿ ದೊರೆಯುವ ಭರವಸೆ ಸಿಕ್ಕಿತ್ತು.  ಅದಕ್ಕೆ ಬೇಕಾಗುವ ಕೆಲವು ಬಿಡಿಭಾಗಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲೂ ತೆರಿಗೆ ರಿಯಾಯಿತಿಯ ಆಶ್ವಾಸನೆ ಸಿಕ್ಕಿತ್ತು. ಅದರ ಹಿನ್ನೆಲೆಯಲ್ಲಿ ಸಂಶೋಧನೆ ಮುಗಿಸಿ ಉತ್ಪನ್ನ ಅಭಿವೃದ್ಧಿಗೊಳಿಸಿದಾಗ ಎರಡೂ ಈಡೇರಲಿಲ್ಲ. ಇತ್ತ ಸಬ್ಸಿಡಿ ಸೌಲಭ್ಯವೂ ಕೈಗೆ ಸಿಗಲಿಲ್ಲ. ಜತೆಗೆ ಬಿಡಿ ಭಾಗಗಳ ಮೇಲೆ ಶೇ. 8ರ ಬದಲು 16ರಷ್ಟು ತೆರಿಗೆ ವಿಧಿಸಲಾಯಿತು. ಇವೆಲ್ಲದಕ್ಕೂ ಹೋಲಿಸಿದಾಗ ರೇವಾ ಯಾಕೋ ಬದಿಗೆ ಸರಿಯಿತು. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿನ ಆಡಳಿತ ಆಗಲೇ ಅಂದರೆ ಹದಿನೆಂಟು ವರ್ಷಗಳ ಹಿಂದೆಯೇ ತನ್ನಲ್ಲಿ ಉತ್ಪಾದನೆಯಾಗುವ ಕಾರುಗಳ ಪೈಕಿ ಶೇ. 2ರಷ್ಟು ಎಲೆಕ್ಟ್ರಿಕ್‌ ಕಾರುಗಳು ಇರಲೇಬೇಕೆಂದು ಸೂಚಿಸಿತ್ತು. ಜತೆಗೆ ಅಮೆರಿಕ ಸರಕಾರ ಪ್ರತಿ ಎಲೆಕ್ಟ್ರಿಕ್‌ ವಾಹನಗಳ ಖರೀದಿಗೆ ಸುಮಾರು 42 ಸಾವಿರ ಡಾಲರ್‌ ಸಾಲ ಸಹಾಯಧನ ಕೊಡುತ್ತಿತ್ತು. ಸ್ವಿಜರ್‌ ಲ್ಯಾಂಡ್‌ ಸಹ ಆ ಹೊತ್ತಿಗೆ 11 ಸಾವಿರ ಡಾಲರ್‌ಗಳ ಸಹಾಯಧನ ನೀಡುತ್ತಿತ್ತು. ಆ ಸರಕಾರವಂತೂ ಎಲೆಕ್ಟ್ರಿಕ್‌ ಕಾರುಗಳ ಪ್ರೋತ್ಸಾಹಕ್ಕೆ ತನ್ನ ಆಯವ್ಯಯದಲ್ಲೇ ಕೋಟ್ಯಂತರ ರೂ. ಗಳನ್ನು ಕಾದಿರಿಸಿತ್ತು. ಇಂಥ ಆಸಕ್ತಿ ನಮ್ಮ ಸರಕಾರಗಳು ತೋರಿದ್ದು ಆಗ ಕಡಿಮೆ. ಇದರೊಂದಿಗೆ ಚಾರ್ಜಿಂಗ್‌ ಸೌಲಭ್ಯಗಳನ್ನು ಕಲ್ಪಿಸಬೇಕು. ಅಂಥ ಯಾವುದೇ ಬೆಳವಣಿಗೆ ಆಗ ಇರಲಿಲ್ಲ. ಹಾಗಾಗಿ ಜನರೂ ಆಸಕ್ತಿ ತೋರಿಸಲಿಲ್ಲ, ಅಷ್ಟೇ.

ಈಗ ಬದಲಾಗಿದೆ
ನಿಜಕ್ಕೂ ಈಗ ಬದಲಾಗಿದೆ. ನಗರಗಳಲ್ಲಿನ ಹೊಗೆ ಕಂಡು ಎಲೆಕ್ಟ್ರಿಕ್‌ ವಾಹನಗಳು ಸುಸಜ್ಜಿತವಾಗಿ ರೂಪುಗೊಂಡು ಮಾರುಕಟ್ಟೆಗೆ ಬಂದರೆ ಕೊಳ್ಳಲು ತಯಾರಿದ್ದಾರೆ. ಎಲ್ಲರ ಮನಸ್ಥಿತಿಯೂ ಬದಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯೇ ನಡೆಸಿದ ಒಂದು ಸಮೀಕ್ಷೆ ಪ್ರಕಾರ ದೇಶದ ಶೇ. 87 ರಷ್ಟು ವಾಹನ ಚಾಲಕರು ಮತ್ತು ವಾಹನ ಮಾಲಕರು ಅತ್ಯುತ್ತಮವಾದ,ತೀರಾ ಕೈ ಕಚ್ಚದಂಥ ಎಲೆಕ್ಟ್ರಿಕ್‌ ಕಾರುಗಳು ಬಂದರೆ ಕೊಳ್ಳಲು ತಯಾರಿದ್ದೇವೆ ಎಂದಿದ್ದಾರೆ. ಅಲ್ಲಿಗೆ ನಿಜಕ್ಕೂ ನಮ್ಮ ನಗರಗಳು ಬದಲಾಗುತ್ತಿವೆ !

ನಗರಗಳು ಹೊಗೆಗೂಡುಗಳಾಗುತ್ತಿವೆ ಎಂಬ ಆತಂಕ ಹಾಗೂ ಹೆಚ್ಚುತ್ತಿರುವ ಪರಿಸರದ ಮೇಲಿನ ಕಾಳಜಿ ಎರಡೂ ಕೂಡಿ ಒಂದು ಆರೋಗ್ಯಕರ ಬೆಳವಣಿಗೆಗೆ ಕಾರಣವಾದರೆ ಸಾಕು.

Advertisement

Udayavani is now on Telegram. Click here to join our channel and stay updated with the latest news.

Next