Advertisement

ಹಣ್ಣಿನ ಚೀಲ

09:52 AM Apr 05, 2019 | Hari Prasad |

ಒಂದು ಊರಿನಲ್ಲಿ ಒಬ್ಬ ರಾಜನಿದ್ದನು. ಅವನಿಗೆ ಮೂರು ಜನ ಮಂತ್ರಿಗಳು. ಅವರೆಲ್ಲರಿಗೂ ಬೇರೆ ಬೇರೆ ಜವಾಬ್ದಾರಿಗಳಿದ್ದವು. ಮೊದಲ ಮಂತ್ರಿಯು ರಾಜನು ನೋಡಲಿ ಬಿಡಲಿ ತನ್ನ ಕೆಲಸವನ್ನು ನಿಯತ್ತಿನಿಂದ ಮಾಡುತ್ತಿದ್ದನು. ಎರಡನೆಯ ಮಂತ್ರಿ, ರಾಜನು ನೋಡುತ್ತಾನೆ ಎಂದು ತಿಳಿದಾಗ ಮಾತ್ರ ಚೆನ್ನಾಗಿ ಕೆಲಸ ಮಾಡುತ್ತಿದ್ದ. ಮೂರನೆಯ ಮಂತ್ರಿ ಚೆನ್ನಾಗಿ ಕೆಲಸ ಮಾಡುತ್ತಿರಲಿಲ್ಲ.

Advertisement

ಒಂದು ಸಲ ರಾಜನು ಮೂರು ಜನ ಮಂತ್ರಿಗಳನ್ನೂ ಕರೆದು ನೀವೆಲ್ಲಾ ಕಾಡಿಗೆ ಹೋಗಿ ಒಂದು ಚೀಲದ ತುಂಬ ಹಣ್ಣುಗಳನ್ನು ಕಿತ್ತುಕೊಂಡು ಬರಬೇಕು ಎಂದು ಆಜ್ಞೆ ಮಾಡಿದನು. ಅದರಂತೆ ಮೂರು ಜನರೂ ಕಾಡಿಗೆ ತೆರಳಿ ಹಣ್ಣುಗಳನ್ನು ಕೀಳತೊಡಗಿದರು. ಮೊದಲ ಮಂತ್ರಿಯು ಚೀಲದ ತುಂಬಾ ಹಣ್ಣು ಕಿತ್ತುಕೊಂಡು ಚೀಲದಲ್ಲಿ ತುಂಬಿಕೊಂಡು ಹೊರಟನು. ಎರಡನೆಯ ಮಂತ್ರಿ ಸ್ವಲ್ಪ ಮೈಗಳ್ಳನಾಗಿ­ದ್ದರಿಂದ ರಾಜನು ಚೀಲವನ್ನು ಪೂರ್ತಿಯಾಗಿ ಪರೀಕ್ಷಿಸುವು­ದಿಲ್ಲವೆಂದು ಚೀಲದ ತಳಭಾಗದಲ್ಲಿ ಗಿಡದ ಎಲೆ, ಕಸ ಮುಂತಾದ ತ್ಯಾಜ್ಯಗಳನ್ನು ತುಂಬಿ ಮೇಲ್ಭಾಗದಲ್ಲಿ ಮಾತ್ರ ಹಣ್ಣು­ಗಳನ್ನು ಕಿತ್ತು ತುಂಬಿದನು. ಮೂರನೆಯ ಮಂತ್ರಿ ತುಂಬಾ ಸೋಮಾರಿಯಾ ಗಿದ್ದರಿಂದ ಅವನು ಚೀಲ ಪೂರ್ತಿ ಗಿಡದ ಎಲೆ, ಕಸ ಮುಂತಾದವನ್ನು ತುಂಬಿಕೊಂಡು ಅರಮನೆಗೆ ಬಂದನು.

ಮೂರು ಮಂತ್ರಿಗಳನ್ನೂ ನೋಡಿದ ರಾಜನು, ಅವರು ತಂದ ಚೀಲದ ಸಮೇತ ಬಂಧಿಸಿ ಸೆರೆಮನೆಗೆ ಕಳುಹಿಸಿ ಎಂದು ಆಜ್ಞೆ ಮಾಡಿದನು. ಅದರಂತೆ ಮೂರು ಮಂತ್ರಿಗಳನ್ನು ಒಂದು ತಿಂಗಳ ಕಾಲ ಪ್ರತ್ಯೇಕ ಬಂದೀಖಾನೆಗಳಲ್ಲಿ ಇಡಲಾಯಿತು. ಒಂದು ತಿಂಗಳ ನಂತರ ರಾಜನು ಮಂತ್ರಿಗಳನ್ನು ಕರೆದುಕೊಂಡು ಬರಲು ಸೈನಿಕರಿಗೆ ತಿಳಿಸಿದನು. ಮೊದಲ ಮಂತ್ರಿಯು ತಾನು ತಂದ ಚೀಲದಲ್ಲಿನ ಹಣ್ಣುಗಳನ್ನು ದಿನಾಲೂ ಸೇವಿಸುತ್ತಾ ಚೆನ್ನಾಗಿಯೇ ಆರೋಗ್ಯ ಕಾಪಾಡಿಕೊಂಡಿದ್ದನು. ಎರಡನೆಯ ಮಂತ್ರಿಯ ಬಳಿ ಅರ್ಧ ಚೀಲ ಮಾತ್ರ ಹಣ್ಣಿದ್ದರಿಂದ ಬಹಳ ಬೇಗ ಅವೆಲ್ಲಾ ಖಾಲಿಯಾಗಿ ಕೃಶ ಶರೀರದವನಾಗಿದ್ದನು. ಮೂರನೆಯ ಮಂತ್ರಿಯ ಚೀಲದಲ್ಲಿ ಹಣ್ಣೇ ಇರಲಿಲ್ಲವಾದ್ದರಿಂದ ಆತ ಬಂದೀಖಾನೆಯಲ್ಲಿ ಹಸಿವಿನಿಂದ ಇನ್ನೇನು ಸತ್ತುಹೋಗುವಂತಿದ್ದನು. ಮಂತ್ರಿಗಳಿಗೆ ರಾಜನ ಸಂದೇಶ ಅರ್ಥವಾಗಿತ್ತು.

– ವೀರೇಶ್‌ ಎಸ್‌. ಭದ್ರಶೆಟ್ಟಿ, 9ನೇ ತರಗತಿ, ಸಂಯುಕ್ತ ಕ್ರೀಡಾ ವಸತಿ ಶಾಲೆ, ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next