ಎರಡು ವರ್ಷಗಳಾಗಿದ್ದವು ಪ್ರಣೀತಾ ಅಭಿನಯದ ಕನ್ನಡ ಚಿತ್ರವೊಂದು ಬಿಡುಗಡೆಯಾಗಿ. ಅಜೇಯ್ ರಾವ್ ಅಭಿನಯದ ಸೆಕೆಂಡ್ ಹ್ಯಾಂಡ್ ಲವರ್ ಚಿತ್ರದ ಇಬ್ಬರು ನಾಯಕಿಯರ ಪೈಕಿ ಒಬ್ಬರಾಗಿ ಕಾಣಿಸಿಕೊಂಡಿದ್ದೇ ಕೊಂಡಿದ್ದು, ಆ ನಂತರ ಅವರು ಯಾವೊಂದು ಕನ್ನಡ ಚಿತ್ರದಲ್ಲೂ ನಟಿಸಿರಲಿಲ್ಲ. ಈಗ ಎರಡು ವರ್ಷಗಳ ನಂತರ ಪ್ರಣೀತಾ ಅಭಿನಯದ ಮಾಸ್ ಲೀಡರ್ ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಅವರು ಶಿವರಾಜಕುಮಾರ್ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ಈ ಸಮಯದಲ್ಲಿ ಪ್ರಣೀತಾ ಯಾಕೆ ಯಾವೊಂದು ಚಿತ್ರದಲ್ಲೂ ನಟಿಸಲಿಲ್ಲ ಎಂಬ ಪ್ರಶ್ನೆಯೊಂದು ಸ್ವಾಭಾವಿಕವಾಗಿ ಬರಬಹುದು. “ನಾನ್ಯಾವತ್ತೂ ದೊಡ್ಡ ಚಿತ್ರ ಅಥವಾ ಸಣ್ಣ ಚಿತ್ರ ಎಂದು ನೋಡಿಲ್ಲ, ಕಥೆ ಮತ್ತು ತಂಡ ಇಷ್ಟವಾದರೆ ಮಾತ್ರ ಸಿನೆಮಾ ಒಪ್ಪುತ್ತೇನೆ’ ಎಂದು ಪ್ರಣೀತಾ ಬಹಳ ಹಿಂದೆ ಹೇಳಿಕೊಂಡಿದ್ದರು. ಈಗಲೂ ಅದನ್ನೇ ರೂಢಿಸಿಕೊಂಡು ಬರುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಅವರ ಅಭಿನಯದ ಯಾವೊಂದು ಚಿತ್ರವೂ ಬಿಡುಗಡೆಯಾಗಿಲ್ಲ ಎಂದು ಹೇಳಬಹುದೇನೋ.
ಅದಕ್ಕೆ ಸರಿಯಾಗಿ, ಕನ್ನಡದಲ್ಲಿ ಯಾವೊಂದು ಚಿತ್ರದಲ್ಲಿ ಪ್ರಣೀತಾ ನಟಿಸದಿದ್ದರೂ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಪ್ರಣೀತಾ ಬಿಝಿಯಾಗಿದ್ದರು. ಈಗೊಂದೆರೆಡು ವರ್ಷಗಳನ್ನೇ ನೋಡಿ, ತಮಿಳಿನಲ್ಲಿ ಜೆಮಿನಿ ಗಣೇಶನುಂ ಸುರುಳಿ ರಾಜನುಂ, ಎನಕ್ಕು ವಾಯ್ತಾ ಅಡಿಮೈಗಳ್, ತೆಲುಗಿನಲ್ಲಿ ಬ್ರಹ್ಮೋತ್ಸವಂ, ಡೈನಮೇಟ್, ಮಾಸ್ ಮುಂತಾದ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
“ತಮಿಳು, ತೆಲುಗಿನಲ್ಲಿ ಅದೆಷ್ಟೇ ಚಿತ್ರಗಳಲ್ಲಿ ನಟಿಸಿದರೂ, ಕನ್ನಡ ಚಿತ್ರರಂಗವನ್ನು ಬಿಟ್ಟು ಹೋಗುವುದಿಲ್ಲ’ ಎನ್ನುತ್ತಾರೆ ಪ್ರಣೀತಾ. ಈ ಎರಡು ವರ್ಷಗಳಲ್ಲಿ ಅವರು ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸದಿರುವ ಕುರಿತು, ಹಲವು ಜನ ಅವರನ್ನು ಪ್ರಶ್ನೆ ಮಾಡಿದ್ದಾರಂತೆ. ಅದಕ್ಕೆ ಪ್ರಣೀತಾ ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ, ವಾಪಸು ಬರುವುದಕ್ಕೆ ತಾನೆಲ್ಲೂ ಹೋಗಿಯೇ ಇರಲಿಲ್ಲ ಎಂಬ ಅಭಿಪ್ರಾಯ ಅವರದು. ಯಾವುದೇ ಭಾಷೆಯಲ್ಲಿ ನಟಿಸಿದರೂ, ತನ್ನ ಮೊದಲ ಆದ್ಯತೆ ಕನ್ನಡ ಮತ್ತು ಯಾವುದೇ ಭಾಷೆಯಲ್ಲಿ ನಟಿಸಿದರೂ, ವಾಪಸು ಬರುವುದು ಬೆಂಗಳೂರಿಗೆ ಎಂಬುದು ಪ್ರಣೀತಾ ಉತ್ತರ.
ಹಾಗಾದರೆ, ಪ್ರಣೀತಾ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸುತ್ತಾರಾ? ಈ ಪ್ರಶ್ನೆಗೆ ಈಗಲೇ ಉತ್ತರ ಹೇಳುವುದು ಕಷ್ಟ. ಕಾರಣ, ಅದೇ ಕಥೆ ಮತ್ತು ತಂಡ. ಅವೆರಡೂ ಇಷ್ಟವಾದರೆ ಪ್ರಣೀತಾ ಇನ್ನಷ್ಟು ಚಿತ್ರಗಳಲ್ಲಿ ನಟಿಸಬಹುದು.