ಶೂನ್ಯ ಬಂಡವಾಳದಲ್ಲಿ ಕೃಷಿ, ಶೂನ್ಯ ಬಂಡವಾಳದಲ್ಲಿ ಉದ್ಯಮ ಮುಂತಾದವು ಶುರು ಮಾಡುವುದರ ಬಗ್ಗೆ ನೀವೆಲ್ಲ ಕೇಳಿರುತ್ತೀರಿ. ಆದರೆ ಶೂನ್ಯ ಬಂಡವಾಳದಲ್ಲಿ ಸಿನಿಮಾ ಮಾಡುವುದನ್ನು ಎಂದಾದರೂ ಕೇಳಿದ್ದೀರಾ? ಚಿತ್ರರಂಗದಲ್ಲಿ ಇದನ್ನು ಕೇಳುವುದಿರಲಿ, ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಒಂದು ಸಿನಿಮಾ ಮಾಡಬೇಕು ಅಂದ್ರೆ ನಮ್ಮ ನಿರ್ಮಾಪಕರು, ನಿರ್ದೇಶಕರು, ನಟ-ನಟಿಯರು ಕೋಟಿ ಕೋಟಿ ಖರ್ಚಾಗುತ್ತದೆ ಎಂದು ಲೆಕ್ಕಾಚಾರ ಹಾಕುವಾಗಲೇ, ಇಲ್ಲೊಂದು ಹೊಸಬರ ತಂಡ ಶೂನ್ಯ ಬಂಡವಾಳದಲ್ಲಿ ಸದ್ದಿಲ್ಲದೆ ಒಂದು ಸಿನಿಮಾ ಮಾಡಿ ಮುಗಿಸಿದೆ.
ಅಷ್ಟೇ ಅಲ್ಲದೆ ಸದ್ಯ ಫಸ್ಟ್ ಕಾಪಿಯೊಂದಿಗೆ ಹೊರಬಂದಿರುವ ಈ ಚಿತ್ರ ಸೆನ್ಸಾರ್ ಮುಂದಿದ್ದು, ಶೀಘ್ರದಲ್ಲಿಯೇ ರಿಲೀಸ್ ಕೂಡ ಆಗಲಿದೆ ಅಂದ್ರೆ ನೀವು ನಂಬಲೇಬೇಕು. ಹೌದು, ಚಿತ್ರರಂಗದ ಮಟ್ಟಿಗೆ ಸೋಜಿಗ ಎನಿಸಿದರೂ, ಇಂಥದ್ದೊಂದು ಪ್ರಯತ್ನ ನಡೆದಿದೆ. ಸಮಾನ ಮನಸ್ಕ ಸಿನಿಮಾ ಪ್ರೇಮಿಗಳು ಸೇರಿ ಇಂಥದ್ದೊಂದು ಸಿನಿಮಾವನ್ನು ಸಾಧ್ಯವಾಗಿಸಿದ್ದಾರೆ. ಯಾರೂ ಈ ಚಿತ್ರಕ್ಕೆ ನೇರವಾಗಿ ಎಲ್ಲಿಯೂ ಹಣ ಹೂಡದೆಯೇ, ಶ್ರಮದಾನ ಮಾಡುವ ಮೂಲಕ ಚಿತ್ರವನ್ನು ನಿರ್ಮಿಸಿದ್ದಾರೆ. ಅಂದಹಾಗೆ, ಆ ಚಿತ್ರದ ಹೆಸರು “ಮದುವೆ ಊಟ’.
ಇನ್ನು ಚಿತ್ರದಲ್ಲಿ ಅಭಿನಯ, ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಇವೆಲ್ಲಾವನ್ನು ಚಿತ್ರತಂಡದ ಸದಸ್ಯರು ಉಚಿತವಾಗಿ ಮಾಡಿದ್ದಾರಂತೆ. ಕೇವಲ ನಾಲ್ಕು ಜಾಗದಲ್ಲಿ ಶೂಟಿಂಗ್ ನಡೆಸಲಾಗಿದ್ದು, ಯಾವ ಕಮರ್ಶಿಯಲ್ ಸಿನಿಮಾಗಳಿಗೂ ಕಡಿಮೆ ಇಲ್ಲದಂತೆ ನಮ್ಮ ಚಿತ್ರ ಮೂಡಿಬಂದಿದೆ ಎನ್ನುತ್ತದೆ ಚಿತ್ರತಂಡ. “ವ್ಯಾಸರ ಜನಪ್ರಿಯ ನುಡಿ ಸಂಶಯಾತ್ಮ ವಿನಶ್ಯತಿ. ಅಂದರೆ ಸಂಶಯ ಹೊಂದಿರುವವರು ನಾಶ ಆಗ್ತಾರೆ. ಅವರು ಸುಖದಿಂದ ಇರೋದಿಲ್ಲ. ಬೇರೆಯವರನ್ನು ಸಂತೋಷದಿಂದ ಇರಲು ಬಿಡುವುದಿಲ್ಲ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಅರ್ಜುನನಿಗೆ ಹೇಳಿದ ಮಾತಿನಂತೆ ಈ ಚಿತ್ರದ ಕಥನ ಇರಲಿದೆ. ಜೀವನವೆಲ್ಲಾ ಸಂಶಯಪಡುವ ನಾವು ಮದುವೆಯಾಗುವವರ ಯೋಚನೆ, ಆಲೋಚನೆ ಮತ್ತು ಹಿನ್ನಲೆ ಬೇರೆಯಾಗಿರುತ್ತದೆ. ಅವರ ಮೇಲೆ ಅನುಮಾನಪಟ್ಟರೆ ಬದುಕು ಎಲ್ಲಿಗೋ ತೆಗೆದುಕೊಂಡು ಹೋಗುತ್ತದೆ. ಪ್ರಸಕ್ತ ಸಮಾಜದಲ್ಲಿ ಶೇಕಡ 30 ರಷ್ಟು ಜನರು ಇದೇ ರೀತಿಯಲ್ಲಿ ಸಾಗುತ್ತಿದ್ದಾರೆ. ನಿಮಾನ್ಸ್‌ದಲ್ಲಿ ರೋಗಿಗಳು ಸಾಕಷ್ಟು ಮಂದಿ ಇದರಿಂದಲೇ ನರಳುತ್ತಿದ್ದಾರೆ. ಅಮೆರಿಕಾದಲ್ಲಿ ಒಂದಷ್ಟು ಮಂದಿ ಸೈಕಿಯಾಟ್ರಿಕ್ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ.
ಸಂಬಂಧಗಳಲ್ಲಿ ಭಾವನೆಗಳ ಅಭದ್ರತೆ ಇಲ್ಲದಿದ್ದರೆ ಏನಾಗುತ್ತೆ ಎಂಬುದು ಕತೆಯ ತಿರುಳು’ ಎಂದು ಚಿತ್ರದ ಬಗ್ಗೆ ವಿವರಣೆ ಕೊಡುತ್ತದೆ ಚಿತ್ರತಂಡ. ಮಹೇಶ್ ಲೋನಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವುದರ ಜೊತೆಗೆ ಚಿತ್ರದಲ್ಲಿ ಒಂದು ಪಾತ್ರಕ್ಕೆ ಬಣ್ಣವನ್ನೂ ಹಚ್ಚಿದ್ದಾರೆ. ಉಳಿದಂತೆ ಜೈ, ಸಾವನ್, ಆಕಾಶ್, ಧರ್ಮೇಂದ್ರ ಅರಸ್, ಗಾಯಿತ್ರಿ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರವಿತೇಜ, ವಿಕಾಸ್ ವಸಿಷ್ಟ ಮತ್ತು ಶ್ರೀಕಾಂತ್ ಅತ್ರಯ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದು, ಮಧುಸೂಧನ್ ಹಿನ್ನಲೆ ಸಂಗೀತ ನೀಡಿದ್ದಾರೆ.
ಇನ್ನೊಂದು ವಿಶೇಷವೆಂದರೆ, ತಂಡವು ಇದೆಲ್ಲಾವನ್ನು ನಿಭಾಯಿಸಿರುವುದರ ಜೊತೆಗೆ ಹಳ್ಳಿಗಳನ್ನು ರಕ್ಷಿಸೋಣ ಎನ್ನುವ ಪರಿಕಲ್ಪನೆಯೊಂದಿಗೆ ಮೂಲಭೂತ ಸೌಕರ್ಯ ಇಲ್ಲದ ಹಳ್ಳಿಯನ್ನು ಅಭಿವೃದ್ದಿಗೊಳಿಸಲು ಯೋಜನೆ ರೂಪಿಸಿಕೊಂಡಿದೆ. ಮೊದಲ ಹಂತವಾಗಿ ಯಾದಗಿರಿ ಜಿಲ್ಲೆಯ ಗಂಗನಾಳ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದು, ಇದಕ್ಕಾಗಿ ಚಿತ್ರದ ಪ್ರಿ-ಟಿಕೆಟ್‌ನ್ನು ಖರೀದಿಸುವವರ ಹೆಸರನ್ನು ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಹಾಕಲು ಪ್ಲಾನ್ ಮಾಡಿಕೊಂಡಿದೆ.