“ಜೋಗಿ’ ಚಿತ್ರದ ನಿರ್ಮಾಪಕ, ಅಶ್ವಿನಿ ರೆಕಾರ್ಡಿಂಗ್ ಕಂಪೆನಿಯ ರೂವಾರಿ ಅಶ್ವಿನಿ ರಾಮ್ ಪ್ರಸಾದ್ ಈಗ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 2017ರಲ್ಲಿ ತೆರೆಕಂಡ “ಸರ್ಕಾರಿ ಕೆಲಸ ದೇವರ ಕೆಲಸ’ ಚಿತ್ರದ ನಂತರ ಚಿತ್ರ ನಿರ್ಮಾಣದ ಚಟುವಟಿಕೆಗಳಿಂದ ಕೊಂಚ ಗ್ಯಾಪ್ ತೆಗೆದುಕೊಂಡು, ತಮ್ಮ ಕಂಪೆನಿ ಕೆಲಸಗಳಲ್ಲಿ ನಿರತವಾಗಿದ್ದ ಅಶ್ವಿನಿ ರಾಮ್ ಪ್ರಸಾದ್, ಈಗ “ಘಾರ್ಗಾ’ ಚಿತ್ರದ ಮೂಲಕ ತಮ್ಮ ಪುತ್ರ ಅರುಣ್ ರಾಮ್ ಪ್ರಸಾದ್ ಅವರನ್ನು ಹೀರೋ ಆಗಿ ತೆರೆಮೇಲೆ ತರುತ್ತಿದ್ದಾರೆ.
ಈಗಾಗಲೇ “ಘಾರ್ಗಾ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. “ಘಾರ್ಗಾ’ ಚಿತ್ರದಲ್ಲಿ ಅರುಣ್ ರಾಮ್ ಪ್ರಸಾದ್, ಒಬ್ಬ ಕಾದಂಬರಿಕಾರನಾಗಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರಕ್ಕೆ ಶಶಿಧರ್ ನಿರ್ದೇಶಕರು. “ಫಾರ್ಗಾ’ ಎನ್ನುವುದು ಒಬ್ಬ ಋಷಿಯ ಹೆಸರಾಗಿದ್ದು, ತಮ್ಮ ಚಿತ್ರದ ಕಥೆಗೆ ಸರಿ ಹೊಂದುತ್ತೆ ಎಂಬ ಕಾರಣಕ್ಕೆ ಚಿತ್ರತಂಡ ಶೀರ್ಷಿಕೆಯನ್ನಾಗಿಸಿದೆಯಂತೆ.
ಇಲ್ಲಿ “ಘಾರ್ಗಾ’ ಅನ್ನೋದು ಒಂದು ಊರಿನ ಹೆಸರಾಗಿದ್ದು, ಸಸ್ಪೆನ್ಸ್-ಥಿಲ್ಲರ್ ಕಂ ಆಕ್ಷನ್ ಕಥಾಹಂದರವನ್ನ ಇಟ್ಟುಕೊಂಡು ಚಿತ್ರ ಮೂಡಿಬರುತ್ತಿದೆ ಎನ್ನುವುದು ಚಿತ್ರತಂಡದ ಮಾತು. ಸದ್ಯ “ಘಾರ್ಗಾ’ ಚಿತ್ರ ಒಂದು ಲಿರಿಕಲ್ ವೀಡಿಯೋ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ. ಇದೇ ವೇಳೆ “ಘಾರ್ಗಾ’ ಚಿತ್ರದ ಬಗ್ಗೆ ಮಾತನಾಡಿರುವ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್, “ನನ್ನ ಮಗ ಒಬ್ಬ ನಿರ್ಮಾಪಕನ ಮಗನಾಗಿ ಚಿತ್ರರಂಗಕ್ಕೆ ಬರುವುದಕ್ಕಿಂತ, ಒಬ್ಬ ಕಲಾವಿದನಾಗಿ ಬರಬೇಕು.
ಹಾಗಾಗಿ ನನ್ನ ಮಗನನ್ನು ಈ ಚಿತ್ರದ ಮೂಲಕ ಒಬ್ಬ ಹೀರೋ ಅನ್ನೋದಕ್ಕಿಂತ, ಒಬ್ಬ ಕಲಾವಿದನಾಗಿ ಲಾಂಚ್ ಮಾಡುತ್ತಿದ್ದೇವೆ. ಇಲ್ಲಿ ಅವನು ತನ್ನ ಸ್ವಂತ ಪ್ರತಿಭೆಯಿಂದ ಗುರುತಿಸಿಕೊಳ್ಳಬೇಕು ಅನ್ನೋದು ನಮ್ಮ ಆಸೆ’ ಎನ್ನುತ್ತಾರೆ.ಇನ್ನು “ಜೋಗಿ’ ಚಿತ್ರದ ನಂತರ ಮತ್ತೂಂದು ಬಹುನಿರೀಕ್ಷಿತ ಚಿತ್ರವನ್ನು ತೆರೆಗೆ ತರುತ್ತಿರುವುದರ ಬಗ್ಗೆ ಮಾತನಾಡುವ ಅಶ್ವಿನಿ ರಾಮ್ ಪ್ರಸಾದ್, “ಕನ್ನಡ ಚಿತ್ರರಂಗದ ಟ್ರೆಂಡ್ ಈಗ ಸಂಪೂರ್ಣ ಬದಲಾಗಿದೆ. ಚಿತ್ರದ ಕಂಟೆಂಟ್ ಮತ್ತು ಕ್ವಾಲಿಟಿ ಚೆನ್ನಾಗಿದ್ದರೆ, ಖಂಡಿತ ಥಿಯೇಟರ್‌ಗೆ ಜನ ಬಂದೇ ಬರುತ್ತಾರೆ.
ಹಾಗಾಗಿ ಹೊಸ ಕಂಟೆಂಟ್ ಮತ್ತು ವಿಭಿನ್ನ ನಿರೂಪಣೆ ಇಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ. ಯಾವುದಕ್ಕೂ ರಾಜಿ ಇಲ್ಲದೆ ಸಿನಿಮಾ ಮಾಡಿದ್ದೇವೆ. ಒಂದೊಳ್ಳೆ ಕಾನ್ಸೆಪ್ಟ್ ಮೇಲೆ ಮಾಡಿರುವ ಸಿನಿಮಾ ಗೆಲ್ಲುವ ನಂಬಿಕೆ ಇದೆ’ ಎಂದು ಭರವಸೆಯ ಮಾತುಗಳನ್ನಾಡುತ್ತಾರೆ. “ಘಾರ್ಗಾ’ದಲ್ಲಿ ಅರುಣ್ ರಾಮ್ ಪ್ರಸಾದ್‌ಗೆ ನಾಯಕಿಯಾಗಿ ರಾಘವಿ ಜೋಡಿಯಾಗಿದ್ದಾರೆ. ಉಳಿದಂತೆ ಸಾಯಿಕುಮಾರ್, ಅರುಣ್ ಸಾಗರ್, ಮಿತ್ರಾ, ದೇವ್ ಗಿಲ್, ರಾಹುಲ್ ದೇವ್, ರಾಘವೇಂದ್ರ ಸರವಣ, ಅವಿನಾಶ್ ರೈ ಹೀಗೆ ಕನ್ನಡ, ಹಿಂದಿ ಮತ್ತು ತೆಲುಗಿನ ದೊಡ್ಡ ಕಲಾವಿದರ ದಂಡೇ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದೆ.
ಚಿತ್ರಕ್ಕೆ ಗುರುಪ್ರಸಾದ್ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಸದ್ಯ ಬಿಡುಗಡೆಯಾಗಿರುವ “ಘಾರ್ಗಾ’ ಚಿತ್ರದ ಲಿರಿಕಲ್ ವೀಡಿಯೋ ಬಿಡುಗಡೆಯಾದ 48 ಗಂಟೆಗಳಲ್ಲಿ 2 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಒಂದಷ್ಟು ಸೌಂಡ್ ಮಾಡುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ವರ್ಷದ ಮಧ್ಯ ಭಾಗದಲ್ಲಿ “ಘಾರ್ಗಾ’ ತೆರೆ ಕಾಣಲಿದೆ.