Advertisement
ಪ್ರಕರಣದ ಸಂಬಂಧ ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡುವಂತೆ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು.
ವಿಚಾರಣೆ ಎದುರಿಸಿ ಬಂದ ಬಳಿಕ ಈ ಕುರಿತು ಸುದ್ದಿಗಾರರ ಜತೆಗೆ ಮಾತನಾಡಿದ ರವಿ, ನನ್ನ ಮೇಲೆ ಬೆಳಗಾವಿ ಸುವರ್ಣ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಮತ್ತು ವಿಧಾನಸಭೆ ಮೊಗಸಾಲೆಯಿಂದ ವಿಧಾನ ಪರಿಷತ್ಗೆ ಬರುತ್ತಿದ್ದಾಗ ನಡೆದ ಹಲ್ಲೆಗೆ ಸಂಬಂಧಿಸಿ ಸಭಾಪತಿಗಳಿಗೆ ನಮ್ಮ ಸದಸ್ಯರು ದೂರು ಕೊಟ್ಟಿದ್ದರು. ಆ ಹಿನ್ನೆಲೆ ಯಲ್ಲಿ ಸಭಾಪತಿಗಳು ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಸೂಚಿಸಿದ್ದರು. ಆ ಸಂಬಂಧ ಸಿಐಡಿ ಅಧಿಕಾರಿಗಳಿಗೆ ನಡೆದ ಘಟನೆ ಕುರಿತು ಹೇಳಿಕೆ ನೀಡಿದ್ದೇನೆ. ಹಲ್ಲೆ ನಡೆಸಲು ಬಂದಿರುವವರು ಯಾರು, ಏನು ಘೋಷಣೆ ಕೂಗಿದ್ದರು, ಏನೆಲ್ಲ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂಬುದನ್ನೆಲ್ಲ ಹೇಳಿಕೆಯಲ್ಲಿ ದಾಖಲಿಸಿದ್ದೇನೆ ಎಂದು ತಿಳಿಸಿದ್ದಾರೆ. ತನಿಖೆಗೆ ಸಹಕಾರ ನೀಡುತ್ತೇನೆ
ಸಭಾಪತಿಗಳಿಗೆ ನಡೆದ ವಾಸ್ತವಿಕ ಘಟನೆ ಕುರಿತು ದೂರು ನೀಡಲಾಗಿತ್ತು. ಸುಮಾರು 3 ಗಂಟೆಗೆ ನಾವು ಊಟ ಮುಗಿಸಿಕೊಂಡು ಬರುತ್ತಿರುವ ಸಂದರ್ಭದಲ್ಲಿ ಸುವರ್ಣಸೌಧದ ಪಶ್ಚಿಮ ದ್ವಾರದ ಬಳಿ ಮೊದಲನೇ ಬಾರಿಗೆ ನನ್ನ ಮೇಲೆ ಹಲ್ಲೆ ನಡೆಸಿದ್ದರು. ಮತ್ತೆ 4.15ಕ್ಕೆ ಸುವರ್ಣಸೌಧದ ಒಳಗೆ ವಿಧಾನಸಭೆ ಮೊಗಸಾಲೆಯಲ್ಲಿ ಆರ್. ಅಶೋಕ್ ಜತೆ ಮಾತನಾಡಿ ವಿಧಾನ ಪರಿಷತ್ತಿಗೆ ವಾಪಸ್ ಬರುತ್ತಿರುವ ವೇಳೆ 2ನೇ ಬಾರಿ ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸಿದವರ ಬಗ್ಗೆ ನನಗಿರುವ ಮಾಹಿತಿಯನ್ನು ನೀಡಿದ್ದೇನೆ. ಸಿಸಿ ಕೆಮರಾದಲ್ಲೂ ದಾಖಲೆ ಲಭ್ಯವಿದೆ. ಹಲ್ಲೆ ನಡೆಸಿದವರಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಪ್ತ ಸಹಾಯಕನಾಗಿರುವ ಸಂಗನಗೌಡ ಹಾಗೂ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ, ಪಿಎ ಸದ್ದಾಂ ಎಂಬವರನ್ನು ನಾನು ಗುರುತಿಸಿದ್ದೇನೆ. ಸಿಸಿ ಕೆಮರಾ ದಾಖಲೆ ನೋಡಿದರೆ ಗುರುತಿಸಬಲ್ಲೆ ಎಂಬುದನ್ನು ಹೇಳಿದ್ದೇನೆ. ಯಾವಾಗ ಬರಲು ಸೂಚಿಸಿದರೂ ತನಿಖೆಗೆ ಸಹಕರಿಸುವುದಾಗಿ ಹೇಳಿದ್ದೇನೆ ಎಂದು ಸಿ.ಟಿ. ರವಿ ತಿಳಿಸಿದರು.