ನವದೆಹಲಿ:ಸಿಐಡಿ ವಿಭಾಗದ ಪೊಲೀಸ್ ಅಧಿಕಾರಿಯನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಜಮ್ಮು-ಕಾಶ್ಮೀರದ ಶ್ರೀನಗರದ ಹೊರವಲಯದಲ್ಲಿರುವ ಕಾನಿಪೋರಾದಲ್ಲಿ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಹಸುವಿಗೆ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು; ಕಗ್ಗೋಡ್ಲು ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ
ವರದಿಗಳ ಪ್ರಕಾರ, ಸಿಐಡಿ ಇನ್ಸ್ ಪೆಕ್ಟರ್ ಪರ್ವೈಝ್ ಅಹ್ಮದ್ ದಾರ್ ಅವರನ್ನು ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ದಾರ್ ಅವರನ್ನು ಪರಿಂಪೋರಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ನೌಗಾಮ್ ಪ್ರದೇಶದ ಮಸೀದಿಯಲ್ಲಿ ಸಂಜೆ ಪ್ರಾರ್ಥನೆ ಸಲ್ಲಿಸಿದ ನಂತರ ಪರ್ವೈಝ್ ದಾರ್ ಮನೆಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಭಯೋತ್ಪಾದಕರು ಗುಂಡು ಹಾರಿಸಿ ಹತ್ಯೆಗೈದಿರುವುದಾಗಿ ವರದಿ ತಿಳಿಸಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ, ದಾರಿಮಧ್ಯೆಯೇ ಕೊನೆಯುಸಿರೆಳೆದಿರುವುದಾಗಿ ವೈದ್ಯರು ಘೋಷಿಸಿದ್ದರು.
ಜೂನ್ 21ರಂದು ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರಾದಲ್ಲಿ ಭದ್ರತಾ ಪಡೆಗಳ ಮುಖಾಮುಖಿಯಲ್ಲಿ ಮೂವರು ಪೊಲೀಸರು ಮತ್ತು ಇತರ ನಾಲ್ವರನ್ನು ಹತ್ಯೆಗೈದ ಪ್ರಕರಣದಲ್ಲಿ ಭಾಗಿಯಾಗಿದ್ದ ಉನ್ನತ ಕಮಾಂಡರ್ ಮುದಾಸೀರ್ ಪಂಡಿತ್ ಸೇರಿದಂತೆ ಕನಿಷ್ಠ ಮೂವರು ಲಷ್ಕರ್ ಎ ತೊಯ್ಬಾದ ಉಗ್ರರನ್ನು ಹೊಡೆದುರುಳಿಸಲಾಗಿತ್ತು.