Advertisement

ಚಟ್ನೀ ದೋಸ್ತ್

06:00 AM Dec 19, 2018 | |

ದೋಸೆ, ಪೂರಿ, ಚಪಾತಿ, ಇಡ್ಲಿಯಂಥ ಬೆಳಗಿನ ತಿಂಡಿಗಳೇ ಇರಲಿ ಅಥವಾ ಬಿಸಿ ಬಿಸಿ ಅನ್ನವೇ ಆಗಿರಲಿ, ರುಚಿ ರುಚಿಯಾದ ಗಟ್ಟಿ ಚಟ್ನಿ ಜೊತೆಗಿದ್ದರೆ ಸ್ವಲ್ಪ ಜಾಸ್ತಿಯೇ ತಿನ್ನಬೇಕೆನಿಸುತ್ತದೆ. ಬಾಯಿಗೆ ರುಚಿ ಎನಿಸುವ, ಆರೋಗ್ಯಕ್ಕೂ ಹಿತ ಎನಿಸುವ ಕೆಲವು ಬಗೆಯ ಚಟ್ನಿ ರೆಸಿಪಿಗಳು ಇಲ್ಲಿವೆ. 

Advertisement

1.ಕರಿಬೇವು ಚಟ್ನಿ
ಬೇಕಾಗುವ ಸಾಮಗ್ರಿ: ಕರಿಬೇವು ಸೊಪ್ಪು- 1/2ಕಪ್‌, ಶೇಂಗಾ- 1/4ಕಪ್‌, ತೆಂಗಿನ ತುರಿ- 1ಕಪ್‌, ಹುಣಸೆ ಹಣ್ಣು- ಸ್ವಲ್ಪ, ಬೆಲ್ಲ- ಸ್ವಲ್ಪ/ಬೇಕಿದ್ದರೆ, ಹಸಿಮೆಣಸು- 3, ಬೆಳ್ಳುಳ್ಳಿ- 3 ಎಸಳು, ಶುಂಠಿ ಒಂದಿಂಚು, ಉಪ್ಪು ರುಚಿಗೆ ತಕ್ಕಷ್ಟು. ಒಗ್ಗರಣೆಗೆ: ಎಣ್ಣೆ -1ಚಮಚ, ಸಾಸಿವೆ- 1/2ಚಮಚ, ಉದ್ದಿನ ಬೇಳೆ- 1/2 ಚಮಚ, ಕರಿಬೇವು ಐದಾರು ಎಸಳು.

ಮಾಡುವ ವಿಧಾನ: ಮೊದಲು ಶೇಂಗಾ ಬೀಜವನ್ನು ಹುರಿದು ಸಿಪ್ಪೆ ತೆಗೆದುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ, ಅದರಲ್ಲಿ ಬೆಳ್ಳುಳ್ಳಿ, ಹಸಿ ಮೆಣಸು ಮತ್ತು ಶುಂಠಿ ಹಾಕಿ ಹುರಿಯಿರಿ. ಅವುಗಳು ಬಾಡುತ್ತಾ ಬಂದಾಗ ಕರಿಬೇವು ಸೊಪ್ಪನ್ನು ಹಾಕಿ ಹುರಿದುಕೊಳ್ಳಿ. ತೆಂಗಿನ ತುರಿ, ಹುಣಸೆ ಹಣ್ಣು, ಬೆಲ್ಲ, ಶೇಂಗಾ, ಉಪ್ಪು ಹಾಗೂ ಹುರಿದ ಪದಾರ್ಥಗಳನ್ನು ಹಾಕಿ, ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿ. ಕೈ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಸಾಸಿವೆ, ಉದ್ದಿನ ಬೇಳೆ ಮತ್ತು ಕರಿಬೇವು ಹಾಕಿ ರುಬ್ಬಿದ ಮಿಶ್ರಣಕ್ಕೆ ಒಗ್ಗರಣೆ ಮಾಡಿ.

2. ಶುಂಠಿ ಚಟ್ನಿ
ಬೇಕಾಗುವ ಸಾಮಗ್ರಿ: ಅರ್ಧ ಕಪ್‌ ಶುಂಠಿ, ಒಂದು ಕಪ್‌ ಬೆಲ್ಲ, ಲಿಂಬೆಗಾತ್ರದ ಹುಣಸೆ ಹಣ್ಣು, ಅರಿಶಿನ ಅರ್ಧ ಚಮಚ, ಒಣ ಮೆಣಸು ಹತ್ತು, ಉಪ್ಪು ರುಚಿಗೆ ತಕ್ಕಷ್ಟು, ಉದ್ದಿನ ಬೇಳೆ ಎರಡು ಚಮಚ, ಸಾಸಿವೆ ಒಂದು ಚಮಚ, ಇಂಗು ಚಿಕ್ಕ ತುಂಡು, ಎಣ್ಣೆ ಎರಡು ಚಮಚ.

ಮಾಡುವ ವಿಧಾನ: ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ, ಉದ್ದಿನ ಬೇಳೆ, ಒಣಮೆಣಸು ಹಾಕಿ ಹುರಿಯಿರಿ. ನಂತರ ಚಿಕ್ಕದಾಗಿ ಕತ್ತರಿಸಿಕೊಂಡ ಶುಂಠಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ. ಅರಿಶಿನ, ಇಂಗು, ಹುಣಸೆ ಹಣ್ಣನ್ನು ಹಾಕಿ ಹುರಿಯಿರಿ. ಈ ಎÇÉಾ ಪದಾರ್ಥಗಳನ್ನು ಸೇರಿಸಿ ಮತ್ತೆ ಎರಡು ನಿಮಿಷ ಹುರಿದು, ಮಿಶ್ರಣ ಆರಿದ ನಂತರ, ಬೆಲ್ಲ ಮತ್ತು ಉಪ್ಪನ್ನು ಸೇರಿಸಿ, ನೀರು ಹಾಕದೆ ನುಣ್ಣಗೆ ರುಬ್ಬಿಕೊಳ್ಳಿ. ಈ ಚಟ್ನಿಯನ್ನು ಅನ್ನ, ಗಂಜಿ, ರೊಟ್ಟಿ, ಚಪಾತಿಯೊಂದಿಗೆ ಸವಿಯಬಹುದು. ಈ ಚಟ್ನಿಯನ್ನು ಡಬ್ಬಿಯಲ್ಲಿ ಹಾಕಿ, ಶೇಖರಿಸಿಟ್ಟರೆ ತಿಂಗಳವರೆಗೆ ಇರುತ್ತದೆ.  ಆರೋಗ್ಯದ ದೃಷ್ಟಿಯಿಂದಲೂ ಶುಂಠಿ ಸೇವನೆ ಒಳ್ಳೆಯದು. ಅಜೀರ್ಣ, ಕಫ‌, ವಾತ, ಮೂಲವ್ಯಾಧಿ, ಸಂಧಿವಾತದ ಸಮಸ್ಯೆಗೆ ಶುಂಠಿ ರಾಮಬಾಣ.

Advertisement

3. ಸೀಮೆ ಬದನೆ ಚಟ್ನಿ
ಬೇಕಾಗುವ ಸಾಮಗ್ರಿ: ದೊಡ್ಡ ಸೀಮೆ ಬದನೆಕಾಯಿ-ಒಂದು, ಹಸಿಮೆಣಸು- 4,  ಈರುಳ್ಳಿ- ಒಂದು/ಬೇಕಿದ್ದರೆ, ಹುರಿಗಡಲೆ-2 ಚಮಚ, ತೆಂಗಿನ ತುರಿ- 1/2 ಕಪ್‌, ಹುಣಸೆ ರಸ ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು ಸ್ವಲ್ಪ, ಎಣ್ಣೆ ಸ್ವಲ್ಪ. ಒಗ್ಗರಣೆಗೆ: ಎಣ್ಣೆ, ಸಾಸಿವೆ, ಕರಿಬೇವು ಸೊಪ್ಪು ಸ್ವಲ್ಪ.

ಮಾಡುವ ವಿಧಾನ: ಸೀಮೆ ಬದನೆಕಾಯಿಯನ್ನು ಸಿಪ್ಪೆಸಹಿತ ಸಣ್ಣಗೆ ಹೆಚ್ಚಿಕೊಳ್ಳಿ. ಬಾಣಲೆಯಲ್ಲಿ 3 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ಅದರಲ್ಲಿ ಹಸಿ ಮೆಣಸು, ಈರುಳ್ಳಿ ಮತ್ತು ಸೀಮೆ ಬದನೆಕಾಯಿ ಹಾಕಿ ಹುರಿಯಿರಿ. ನಂತರ ಮುಚ್ಚಳ ಮುಚ್ಚಿ ಬೇಯಿಸಿ. ಬೇಕಿದ್ದರೆ ಸ್ವಲ್ಪ ನೀರು ಹಾಕಿ. (ಸೀಮೆ ಬದನೆಕಾಯಿಯಲ್ಲಿ ನೀರಿನಂಶ ಇರುವುದರಿಂದ ನೀರು ಹಾಕಬೇಕೆಂದಿಲ್ಲ) ಬೆಂದ ನಂತರ ಆರಲು ಬಿಡಿ. ಮಿಕ್ಸಿಯಲ್ಲಿ ಬೇಯಿಸಿದ ಪದಾರ್ಥ, ತೆಂಗಿನ ತುರಿ, ಹುರಿಗಡಲೆ, ಕೊತ್ತಂಬರಿ ಸೊಪ್ಪು, ಉಪ್ಪು ಮತ್ತು ಹುಣಸೆ ರಸ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ಒಂದು ಬಟ್ಟಲಿನಲ್ಲಿ ಹಾಕಿ, ಒಗ್ಗರಣೆ ಹಾಕಿ.

4. ಎಲೆಕೋಸಿನ ಚಟ್ನಿ/ಕ್ಯಾಬೇಜ… ಚಟ್ನಿ.
ಬೇಕಾಗುವ ಸಾಮಗ್ರಿ: ಹೆಚ್ಚಿದ ಎಲೆಕೋಸು- ಎರಡು ಕಪ್‌, ಟೊಮೆಟೊ-1, ಬೆಳ್ಳುಳ್ಳಿ-5 ಎಸಳು, ಹಸಿ ಶುಂಠಿ- ಒಂದಿಂಚು, ಹಸಿ ಮೆಣಸು- 2, ಒಣಮೆಣಸು- 2, ಧನಿಯಾ- ಒಂದೂವರೆ ಚಮಚ, ಉದ್ದಿನ ಬೇಳೆ- 1ಚಮಚ, ಇಂಗು- ಚಿಟಿಕೆ, ಅರಿಶಿನ- 1/4 ಚಮಚ, ಎಣ್ಣೆ ಒಂದು ಚಮಚ, ಹುಣಸೆ ಹಣ್ಣು-ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ಬೆಲ್ಲ ಸ್ವಲ್ಪ/ಬೇಕಿದ್ದರೆ. ಒಗ್ಗರಣೆಗೆ: ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಒಣಮೆಣಸು, ಕರಿಬೇವು.

ಮಾಡುವ ವಿಧಾನ: ಎಲೆಕೋಸನ್ನು ಚಿಕ್ಕದಾಗಿ ಕತ್ತರಿಸಿ. ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಧನಿಯಾ, ಉದ್ದಿನ ಬೇಳೆ, ಹಸಿ ಮೆಣಸು, ಒಣಮೆಣಸು, ಬೆಳ್ಳುಳ್ಳಿ, ಶುಂಠಿ, ಇಂಗು ಮತ್ತು ಅರಿಶಿನ ಹಾಕಿ ಕೆಂಬಣ್ಣ ಬರುವವರೆಗೆ ಹುರಿಯಿರಿ. ಹುರಿದ ಪದಾರ್ಥಗಳ ಜೊತೆಗೆ ಹೆಚ್ಚಿದ ಎಲೆಕೋಸು ಹಾಗೂ ಟೊಮೇಟೊ ಹಾಕಿ ಬಾಡಿಸಿ. ಎಲ್ಲಾ ಪದಾರ್ಥಗಳು ಬೆಂದ ನಂತರ ಒಲೆಯಿಂದ ಇಳಿಸಿ. ಆರಿದ ನಂತರ, ಹುಣಸೆ ಹಣ್ಣು, ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನುಣ್ಣಗೆ ರುಬ್ಬಿ, ಅದಕ್ಕೆ ಒಗ್ಗರಣೆ ಹಾಕಿ. ಹಸಿಯ ಎಲೆಕೋಸಿನಲ್ಲಿ ಎ, ಬಿ ಮತ್ತು ಬಿ 2 ಜೀವಸತ್ವ ಇರುವುದರಿಂದ, ಈ ಚಟ್ನಿ ಆರೋಗ್ಯಕ್ಕೆ ಬಹಳ ಒಳ್ಳೆಯದು. 

ವೇದಾವತಿ ಎಚ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next