ಕುಂದಾಪುರ: ಗೌಡ ಸಾರಸ್ವತ ಬ್ರಾಹ್ಮಣ, ವಿಶ್ವಕರ್ಮ ಮತ್ತು ದೈವಜ್ಞ ಬ್ರಾಹ್ಮಣ ಸಮಾಜದ ಮುತ್ತೈದೆಯರ ಶ್ರೇಷ್ಠ ಆಚರಣೆಗಳಲ್ಲಿ ಒಂದಾಗಿರುವ ಶ್ರಾವಣ ಮಾಸದ ಚೂಡಿ ಪೂಜೆ ಪ್ರಾರಂಭವಾಗಿದೆ. ತುಳಸಿ ಸಾನ್ನಿಧ್ಯದಲ್ಲಿ ಶ್ರಾವಣ ಮಾಸದ ಪ್ರತೀ ಶುಕ್ರವಾರ ಮತ್ತು ರವಿವಾರ ಚೂಡಿ ಪೂಜೆ ನಡೆಯುತ್ತದೆ.
ಚೂಡಿ: ಸಿಂಹ ಮಾಸದ ಶ್ರಾವಣದಲ್ಲಿ ಸೂರ್ಯ ದೇವನು ಸಿಂಹ ರಾಶಿಗೆ ಪ್ರವೇಶಿಸುವ ಸಂದರ್ಭದಲ್ಲಿ ಸೂರ್ಯ ದೇವನ ಬಿಂಬವನ್ನು ರಂಗೋಲಿಯಲ್ಲಿ ಬರೆದು ಅದರ ಹತ್ತಿರ ಗರಿಕೆ, ಲಕ್ಷ್ಮೀ ಸಾನ್ನಿಧ್ಯವುಳ್ಳ ಹೂಗಳನ್ನು ಅರ್ಪಿಸಿ ಸೂರ್ಯನಿಗೆ ವಂದನೆ ಸಲ್ಲಿಸಲಾಗುತ್ತದೆ. ಗರಿಕೆ ಹುಲ್ಲಿನೊಂದಿಗೆ ರಥ ಪುಷ್ಟ, ಕರವೀರ, ಮಿಠಾಯಿ ಹೂವು ಹಾಗೂ ಸಸ್ಯಗಳನ್ನು ಜೋಡಿಸಿ ಬಾಳೆ ನಾರಿನಿಂದ ಚೂಡಿ ಕಟ್ಟಲಾಗುತ್ತದೆ.
ಕಥೆ: ರಕ್ಕಸ ದೊರೆ ಜಲಂಧರನ ಪತ್ನಿ ವೃಂದಾ ಪತಿವ್ರತೆಯಾಗಿದ್ದಳು. ವಿಷ್ಣುವಿನ ಪರಮ ಭಕ್ತೆ. ಜಲಂಧರನಿಂದ ದೇವತೆಗಳನ್ನು ರಕ್ಷಿಸಲು ವಿಷ್ಣು ಅವಕಾಶಕ್ಕಾಗಿ ಕಾಯುತ್ತಿರುತ್ತಾನೆ. ಜಲಂಧರ ಸಾಯಬೇಕಾದರೆ ವೃಂದಾಳ ಪಾತಿವ್ರತ್ಯಕ್ಕೆ ಧಕ್ಕೆ ಬರಬೇಕು. ಹೀಗಾಗಿ ಜಲಂಧರ ಯುದ್ಧಕ್ಕೆ ತೆರಳಿದ್ದ ಸಂದರ್ಭದಲ್ಲಿ ವಿಷ್ಣು ಆತನ ರೂಪದಲ್ಲಿ ವೃಂದಾಳ ಬಳಿಗೆ ಬರುತ್ತಾನೆ. ತನ್ನ ಗಂಡನೆಂದು ನಂಬಿ ವೃಂದಾ ವಿಷ್ಣುವನ್ನು ಕೂಡುತ್ತಾಳೆ. ಯುದ್ದ ಭೂಮಿಯಲ್ಲಿ ಜಲಂಧರ ಸಾಯುತ್ತಾನೆ. ಪತಿಯ ಸಾವಿನಿಂದ ದುಃಖೀತಳಾದ ವೃಂದಾ ಮತ್ತೆ ಪಾತಿವ್ರತ್ಯ ಕೊಡಿಸುವಂತೆ ವಿಷ್ಣುವಿನ ಮೊರೆ ಹೋಗುತ್ತಾಳೆ. ಶ್ರಾವಣ ಮಾಸದಲ್ಲಿ ವಿವಿಧ ಹೂವುಗಳನ್ನು ನಾರಿನಿಂದ ಕಟ್ಟಿ ತುಳಸಿಗೆ ಅರ್ಪಿಸಿ, ತುಳಸಿ ದೇವಿಯನ್ನು ಪೂಜಿಸುವಂತೆ ವೃಂದಾಳಿಗೆ ತಿಳಿಸುತ್ತಾನೆ. ತುಳಸಿಯನ್ನು ಪೂಜಿಸಿ ವೃಂದಾ ಪವಿತ್ರಳಾಗುವ ಕಥೆಯೇ ಚೂಡಿ ಪೂಜೆಗೆ ಹಿನ್ನೆಲೆ.
ಕ್ರಮ: ಪೂಜೆಯ ಅನಂತರ ಮೊದಲ ಚೂಡಿಯನ್ನು ಗಂಡನಿಗೆ ನೀಡಿ ಕಾಲಿಗೆರಗಿ ಆಶೀರ್ವಾದ ಬೇಡುತ್ತಾರೆ. ಸುಮಂಗಲಿಯರು ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಮುತ್ತೈದೆಯರು ಬೆಳಗ್ಗೆ ಬಾವಿ ದಂಡೆಗೆ ಹಳದಿ, ಕುಂಕುಮ ಹಚ್ಚಿ ಹೂವು ಇಟ್ಟು ನೀರಿಗೆ ಹರಿದ್ರಾ ಕುಂಕುಮ ಅರ್ಪಿಸಿ ಅಂಗಳದಲ್ಲಿ ತುಳಸಿ ಕಟ್ಟೆ ಎದುರು ರಂಗೋಲಿ, ಹೊಸ್ತಿಲಿಗೆ ಶೇಡಿ ಬರೆದು ಅಲಂಕರಿಸಿ ಚೂಡಿ ಪೂಜೆ ಪ್ರಾರಂಭಿಸುತ್ತಾರೆ. ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದವರು ತಮ್ಮೂರ ದೇವಸ್ಥಾನಗಳಲ್ಲಿ ಸಾಮೂಹಿಕ ಚೂಡಿ ಪೂಜೆಯನ್ನು ಆಚರಿಸುತ್ತಿರುವ ರೂಢಿ ಇದೆ.