Advertisement

ಮನುಕುಲದ ಕಲ್ಯಾಣಕ್ಕಾಗಿ ಕ್ರಿಸ್ತನ ಬದುಕು ಅರ್ಪಣೆ

02:55 AM Dec 20, 2018 | Team Udayavani |

ಉಡುಪಿ: ನಿಜವಾದ ಪ್ರೀತಿ ತ್ಯಾಗದಲ್ಲಿದೆ. ಮನುಕುಲದ ಕಲ್ಯಾಣಕ್ಕಾಗಿ ತನ್ನನ್ನೇ ಅರ್ಪಿಸಿದ ಏಸುಕ್ರಿಸ್ತ ಪ್ರೀತಿಯ ಅರ್ಥ ತ್ಯಾಗವೆಂಬ ಸಂದೇಶ ಸಾರಿದ್ದಾರೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೋ ಹೇಳಿದರು. ಡಿ. 19ರಂದು ಉಡುಪಿಯಲ್ಲಿ ಮಾಧ್ಯಮದವರಿಗಾಗಿ ಆಯೋಜಿಸಲಾಗಿದ್ದ ಕ್ರಿಸ್ಮಸ್‌ ಸ್ನೇಹಕೂಟದಲ್ಲಿ ಅವರು ಸಂದೇಶ ನೀಡಿದರು. ಶಾಂತಿ ಮತ್ತು ಪ್ರೀತಿ ಏಸು ನೀಡಿದ ಎರಡು ಪ್ರಮುಖ ಸಂದೇಶ. ಪ್ರೀತಿ ಹಂಚುವುದು ಕ್ರಿಸ್ಮಸ್‌ನ ಪ್ರಮುಖ ಧ್ಯೇಯ. ನಾವೆಲ್ಲರೂ ಪ್ರೀತಿ-ಶಾಂತಿಯ ಸಾಧನಗಳಾಗಬೇಕಾಗಿದೆ ಎಂದು ಅವರು ಹೇಳಿದರು.
 
ಎಸ್‌ಪಿ ಲಕ್ಷ್ಮಣ ಬ.ನಿಂಬರಗಿ ಅವರು ಮಾತನಾಡಿ, ಎಲ್ಲಾ ಧರ್ಮಗಳು ಕೂಡ ಶಾಂತಿಯ ಸಂದೇಶವನ್ನೇ ನೀಡಿವೆ. ಇಂತಹ ಕಾರ್ಯಕ್ರಮಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆ ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರು ಮಾತನಾಡಿ, ಏಸುಕ್ರಿಸ್ತ ಸಾರಿದ ದಯೆ, ಮಾನವೀಯತೆ ಮತ್ತು ಕರುಣೆಯ ಸಂದೇಶಗಳು ಇಂದಿಗೂ ಅಗತ್ಯವಾಗಿವೆ ಎಂದು ಹೇಳಿದರು. 

Advertisement

ನೀರಿನ ಸಂರಕ್ಷಣೆ, ಜಾಗೃತಿ ನಡೆಸುತ್ತಿರುವ ಜೋಸೆಫ್ರೆ ಬೆಲ್ಲೋ, ಮಣ್ಣಿನ ಕಲಾಕೃತಿಗಳ ರಚನೆಯಲ್ಲಿ ಅಂತಾರಾಷ್ಟ್ರೀಯ ಸಾಧನೆ ಮಾಡಿರುವ ಲಾರೆನ್ಸ್‌ ಪಿಂಟೋ ಪಲಿಮಾರು ಅವರನ್ನು ಸಮ್ಮಾನಿಸಲಾಯಿತು. ಸಾರ್ವಜನಿಕ ಸಂಪರ್ಕಾಧಿಕಾರಿ ಫಾ| ರಾಯ್ಸನ್‌ ಫೆರ್ನಾಂಡಿಸ್‌ ಸ್ವಾಗತಿಸಿದರು. ಫಾ| ಚೇತನ್‌ ಲೋಬೋ ಕಾರ್ಯಕ್ರಮ ನಿರ್ವಹಿಸಿದರು. ಮೈಕಲ್‌ ರೋಡ್ರಿಗಸ್‌ ವಂದಿಸಿದರು.

ಸಾಮಾಜಿಕ ಕಾರ್ಯ
ಉಡುಪಿ ಧಮಪ್ರಾಂತ್ಯದ ವತಿಯಿಂದ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ 50,000ಕ್ಕಿಂತಲೂ ಅಧಿಕ ಸಸಿಗಳನ್ನು ನೆಟ್ಟು ಪೋಷಿಸುವ ‘ಹಸಿರು ಕರ್ನಾಟಕ’ವನ್ನು ನಡೆಸಲಾಗಿದೆ. ನೀರು ಇಂಗಿಸುವ, ಸರಕಾರಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಕೆಲಸಗಳು ನಡೆದಿವೆ. ಲಯನ್ಸ್‌ ಕ್ಲಬ್‌ ಜತೆ ಸೇರಿ 7,000 ಮಂದಿ ಪ್ರಾಥಮಿಕ ಶಾಲಾ ಮಕ್ಕಳ ನೇತ್ರತಪಾಸಣೆ ನಡೆಸಲಾಗಿದೆ. ಪ್ರತಿಯೊಂದು ಧರ್ಮಗಳ ಜತೆ ಉತ್ತಮ ಬಾಂಧವ್ಯ ಬೆಸೆಯುವ ಉದ್ದೇಶದಿಂದ ತಾಲೂಕು ಮಟ್ಟದಲ್ಲಿ ಸೌಹಾರ್ದ ದೀಪಾವಳಿ, ಈದ್‌ ಮತ್ತು ಕ್ರಿಸ್ಮಸ್‌ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಬಿಷಪ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next