Advertisement

ಸಂತ ಫಿಲೋಮಿನಾ ಕಾಲೇಜಿನಲ್ಲಿ ಕ್ರಿಸ್ಮಸ್‌ ಸಹಮಿಲನ

02:59 PM Dec 25, 2017 | Team Udayavani |

ದರ್ಬೆ: ಪರಸ್ಪರ ಪ್ರೀತಿ ಮತ್ತು ತ್ಯಾಗದ ಸಂದೇಶವನ್ನು ಸಾರುವ ಕ್ರಿಸ್ಮಸ್‌ ಹಬ್ಬವು ಕ್ರೈಸ್ತ ಬಾಂಧವರಿಗೆ ಮಾತ್ರ
ಸೀಮಿತವಾಗಿರದೆ, ಸೌಹಾರ್ದತೆಯಿಂದ ವಿಶ್ವಾದ್ಯಂತ ಅತ್ಯಂತ ಶ್ರದ್ಧೆ ಮತ್ತು ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ ಎಂದು ಪುತ್ತೂರಿನ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ| ಎಂ. ಕೆ. ಪ್ರಸಾದ್‌ ಭಂಡಾರಿ ಹೇಳಿದರು.

Advertisement

ಸಂತ ಫಿಲೋಮಿನಾ ಪದವಿ ಮತ್ತು ಪದವಿಪೂರ್ವ ಕಾಲೇಜುಗಳ ವತಿಯಿಂದ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಆಯೋಜಿಸಲಾದ ಕ್ರಿಸ್ಮಸ್‌ ಸಹಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕ್ರಿಸ್ಮಸ್‌ ಹಬ್ಬವನ್ನು ಜಾತಿ, ಮತ, ಧರ್ಮದ ಭೇದಭಾವವಿಲ್ಲದೆ ವಿಶ್ವಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ.
ಈ ಹಬ್ಬದ ಆಚರಣೆಯಲ್ಲಿ ಎಲ್ಲ ವರ್ಗದವರನ್ನು ಒಗ್ಗೂಡಿಸುವುದರಿಂದ ವಿಶ್ವ ಶಾಂತಿಗೆ ಸಹಾಯಕವಾಗುತ್ತದೆ. ಕ್ರೈಸ್ತ ಧರ್ಮವು ದೀನ ದಲಿತರು, ರೋಗರುಜಿನದಲ್ಲಿರುವವರನ್ನು ಸಲಹುವ ಉತ್ತಮ ತತ್ತ್ವಾದರ್ಶವನ್ನು ಒಳಗೊಂಡಿದೆ. ಇಂತಹ ಉದಾತ್ತ ಸಂದೇಶಗಳು ಸಮಾಜದ ಎಲ್ಲ ವರ್ಗಗಳ ಜನರ ಏಳಿಗೆಗೆ ಪೂರಕವಾಗಿದೆ ಎಂದು ಹೇಳಿದರು.

ಸಹೋದರ ಭಾವನೆ
ಪ.ಪೂ. ಕಾಲೇಜಿನ ಪ್ರಾಂಶುಪಾಲ ವಂ| ವಿಜಯ್‌ ಲೋಬೊ ಕ್ರಿಸ್ಮಸ್‌ ಹಬ್ಬದ ಸಂದೇಶ ನೀಡಿ, ಕ್ರಿಸ್ಮಸ್‌ ದೇವರ ಪ್ರೀತಿಯನ್ನು ಅನುಭವಿಸುವ, ಪರಸ್ಪರ ಹಂಚಿಕೊಳ್ಳುವ ಒಂದು ವೈಶಿಷ್ಟ್ಯಪೂರ್ಣ ಹಬ್ಬವಾಗಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಬಣ್ಣ ಬಣ್ಣದ ಮಿನುಗುವ ದೀಪಗಳು, ಕ್ರಿಸ್ಮಸ್‌ ಟ್ರೀ, ಗೋದಲಿ ಮುಂತಾದವುಗಳನ್ನು ರಚಿಸುವ ಮೂಲಕ ತಮ್ಮ ಮನೆಗಳನ್ನು ಸಿಂಗರಿಸಿಕೊಳ್ಳುವುದನ್ನು ಕಾಣುತ್ತೇವೆ. ಹಾಗೆಯೇ ವಿವಿಧ ಧರ್ಮದವರ ಜತೆಗೂಡಿ ಈ ಹಬ್ಬವನ್ನಾಚರಿಸುವುದರಿಂದ ಸಮಾಜದಲ್ಲಿ ಪರಸ್ಪರ ಸಹೋದರ ಭಾವನೆ ಸೃಷ್ಟಿಯಾಗುತ್ತದೆ ಎಂದು ಹೇಳಿದರು.

ಪ್ರೀತಿಯ ಹಂಚಿಕೆ ಉದ್ದೇಶ
ಕಾಲೇಜಿನ ಕ್ಯಾಂಪಸ್‌ ನಿರ್ದೇಶಕ ವಂ| ಡಾ| ಆ್ಯಂಟನಿ ಪ್ರಕಾಶ್‌ ಮೊಂತೆರೊ ಪ್ರಾಸ್ತಾವಿಕ ಮಾತುಗಳನ್ನಾಡಿ, ಕ್ರಿಸ್ಮಸ್‌ ಹಬ್ಬವನ್ನು ಆಚರಿಸುವ ಈ ಸಮಯದಲ್ಲಿ ನಾವೆಲ್ಲರೂ ಅತ್ಯಂತ ಆಹ್ಲಾದಕರ ವಾತಾವರಣವನ್ನು ಹೊಂದಿದ್ದೇವೆ. ಯೇಸು ದೇವರು ಮಾನವನಾಗಿ ಬಂದು, ಜನರನ್ನು ಅಸತ್ಯದಿಂದ ಸತ್ಯ, ಕತ್ತಲೆಯಿಂದ ಬೆಳಕು, ಅಧರ್ಮದಿಂದ ಧರ್ಮದ ಕಡೆಗೆ ಮುಂದುವರಿಯುವಂತೆ ಪ್ರೇರೇಪಿಸಿದರು. ಈ ಶಿಕ್ಷಣ ಸಂಸ್ಥೆಯ ಬೆಳವಣಿಗೆಯಲ್ಲಿ ಸಹಾಯ ಮಾಡಿದ ಪ್ರತಿಯೊಬ್ಬರನ್ನೂ ಆಹ್ವಾನಿಸಿ, ಪ್ರೀತಿಯನ್ನು ಪರಸ್ಪರ ಹಂಚಿಕೊಳ್ಳುವುದೇ ಕ್ರಿಸ್ಮಸ್‌ ಸಹಮಿಲನದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಪ್ರಾಂಶುಪಾಲ ಪ್ರೊ| ಲಿಯೋ ನೊರೊನ್ಹಾ ಸ್ವಾಗತಿಸಿ, ದಿವ್ಯಚೇತನ ಸಂಘದ ಸದಸ್ಯರು ಕ್ರಿಸ್ಮಸ್‌ ಕ್ಯಾರೆಲ್‌ ಗೀತೆಯನ್ನು ಹಾಡಿದರು. ಕಚೇರಿ ಸಿಬಂದಿ ಮಾರಿಯೆಟ್‌ ಶೆರ್ಲಿ ಡಿ’ಸೋಜಾ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರಶಾಂತ್‌ ರೈ ನಿರ್ವಹಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next