ಮೈಸೂರು: ಕ್ರಿಸ್‌ಮಸ್ ಅಂಗವಾಗಿ ನಗರದ ಚರ್ಚ್, ಶಾಲೆಗಳಲ್ಲಿ ಕ್ರೈಸ್ತ ಬಾಂಧವರು ಕ್ರಿಸ್ತನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಸಂಭ್ರಮಿಸಿದರು. ಮಂಗಳವಾರ ರಾತ್ರಿಯೇ ಸೆಂಟ್ ಫಿಲೋಮಿನಾ ಚರ್ಚ್ ಸೇರಿದಂತೆ ನಗರದ ಹಲವೆಡೆ ಇರುವ ಚರ್ಚ್‌ಗಳಲ್ಲಿ ವಿಶೇಷ ಅಲಂಕಾರ ಹಾಗೂ ಏಸುವಿಗೆ ಮೇಣದ ಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸಲಾಯಿತು. ಬುಧವಾರವು ನೂರಾರು ಮಂದಿ ಭಕ್ತರು ಮುಂಜಾನೆಯಿಂದಲೇ ಚರ್ಚ್‌ಗೆ ಆಗಮಿಸಿ ಏಸುವಿನ ಮೂರ್ತಿ ಕಣ್ತುಂಬಿ ಕೊಂಡರು. ದೇವದೂತನಲ್ಲಿ ವಿಶೇಷ ಪಾರ್ಥನೆ ಸಲ್ಲಿಸಿದರು.
ನಗರದ ಹಿನಕಲ್‌ನ ಇನ್ಫೆಂಟ್ ಜೀಸಸ್ ಚರ್ಚ್, ಲಕ್ಷ್ಮೀಪುರಂನ ಹಾಡ್ವಿಕ್ ಚರ್ಚ್, ಬೆಂಗಳೂರು-ಮೈಸೂರು ರಸ್ತೆಯ ವೆಸ್ಲಿ ಚರ್ಚ್, ಗಾಂಧಿ ನಗರದ ಸಂತ ಅಣ್ಣಮ್ಮ ಚರ್ಚ್, ಬಾರ್ಥಲೋಮಿಯೊ ಚರ್ಚ್, ರಾಮಕೃಷ್ಣ ನಗರದಲ್ಲಿರುವ ಏಸು ಕೃಪಾಲಯ, ಸೇಂಟ್ ಫಿಲೋಮಿನಾ, ಸೇಂಟ್ ಜೋಸೆಫ್ ಚರ್ಚ್‌ಗಳು ವಿಶೇಷವಾಗಿ ಅಲಂಕೃತಗೊಂಡಿದ್ದವು. ಚರ್ಚ್‌ಗಳಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿತ್ತು. ಕ್ರೈಸ್ತರು ಮಾತ್ರವಲ್ಲದೆ, ವಿವಿಧ ಸಮುದಾಯದ ಜನರು ಕ್ರಿಸ್‌ಮಸ್ ಹಬ್ಬದಲ್ಲಿ ಸಿಹಿ ತಿಂದು ಸಂಭ್ರಮಿಸಿದರು.
ಕ್ರಿಸ್‌ಮಸ್ ಆಚರಣೆಗೂ ಮುನ್ನಾ ಡಿ.24ರ ರಾತ್ರಿ 11 ಗಂಟೆಯಿಂದ ಕರೋಲ್ ಕ್ರೈಸ್ತಗೀತೆಗಳನ್ನು ಹಾಡಲಾಯಿತು. ಹಬ್ಬಕ್ಕಿಂತ ಮೊದಲೇ ಆರಂಭವಾಗಿದ್ದ ಈ ಸಂಪ್ರದಾಯದಲ್ಲಿ ಯುವಕರ ಗುಂಪುಗಳು ರಾತ್ರಿ ತಮ್ಮ ಪ್ರದೇಶದ ಮನೆ ಮನೆಗಳಿಗೆ ತೆರಳಿ ಕರೋಲ್‌ಗಳನ್ನು (ಭಜನೆ ಅಥವಾ ಸೌಹಾರ್ದತೆಯ ಸಂದೇಶ ಸಾರುವ ಕ್ರಿಸ್ಮಸ್ ಹಾಡುಗಳು) ಹಾಡಿ ಸಂಭ್ರಮಿಸಿದರು. ಆ ಮೂಲಕ ಯೇಸು ಕ್ರಿಸ್ತನು ಈ ಮನೆಯಲ್ಲೇ ಹುಟ್ಟಿದ್ದಾನೆ ಮತ್ತು ಈ ಮನೆಯಲ್ಲಿ ಜೀವಿಸುತ್ತಾನೆ ಎಂದು ಸಾರಿ ಪವಿತ್ರ ಭಾವನೆ ಮೂಡಿಸಿದರು.
ಸಂಪನ್ಮೂಲ ಹಂಚಿ ತಿನ್ನಿ: ಕ್ರಿಸ್‌ಮಸ್ ಹಬ್ಬದಲ್ಲಿ ಕ್ರೈಸ್ತರು ಶಾಂತಿ ನೆಮ್ಮದಿಯನ್ನು ಬಯಸುವ ಜೊತೆಗೆ, ಅಂದು ಉಳ್ಳವರು ತಮ್ಮ ಬಳಿಯಿರುವ ಸಂಪನ್ಮೂಲವನ್ನೂ ಬಡವರಿಗೆ ಹಾಗೂ ಪುಟ್ಟ ಮಕ್ಕಳಿಗೆ ದಾನ ಮಾಡುತ್ತಾರೆ. ಇದರಿಂದ ಅವರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಕ್ರಿಸ್‌ಮಸ್ ಹಬ್ಬ ಆಚರಣೆಯ ಅಂಗವಾಗಿ ಸಂಭ್ರಮದಲ್ಲಿ ಪಾಲ್ಗೊಂಡ ಮಕ್ಕಳು ಹಾಗೂ ಇತರರಿಗೆ ಸಿಹಿ ಹಂಚುವ ಮೂಲಕ ಸಂಪನ್ಮೂಲವನ್ನು ಹಂಚಿತಿನ್ನಿ ಎಂಬ ಸಂದೇಶವನ್ನು ಬಿಷಪ್ ಡಾ.ಕೆ.ಎ.ವಿಲಿಯಂ ಸಾರಿದರು.
ದೇವದೂತನ ಬದುಕು ಅನಾವರಣ: ಸೇಂಟ್ ಫೀಲೊಮಿನಾ ಚರ್ಚ್‌ನಲ್ಲಿ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಪ್ರಕೃತಿಯ ಸೃಷ್ಟಿಯ ಚಿತ್ರಣ, ಏಸುವಿನ ಜನನ, ಬಾಲ್ಯ, ಬದುಕನ್ನು ತಿಳಿಸುವ ಚಿತ್ರಣ ಹಾಗೂ ಪ್ರಸ್ತುತ ಮನುಷ್ಯ ಹೇಗೆ ಸಮಸ್ಯೆಗಳಿಂದ ನಲುಗುತ್ತಿದ್ದಾನೆ ಎಂಬುದನ್ನು ಕಟ್ಟಿಕೊಡುವ ಮಾದರಿಯನ್ನು ನಿರ್ಮಿಸಲಾಗಿತ್ತು.
ದೀಪ ಜ್ಞಾನದ ಸಂಕೇತ: ಕ್ರಿಸ್‌ಮಸ್ ಸಂಭ್ರಮದ ವಾತಾವರಣದಲ್ಲಿ ಪ್ರಾರ್ಥನಾ ಮಂದಿರಕ್ಕೆ ಆಗಮಿಸಿದ ಭಕ್ತರು, ಶಾಂತಿಗಾಗಿ ಮೇಣದ ಬತ್ತಿಗಳನ್ನು ಹಚ್ಚಿ ಪ್ರಾರ್ಥನೆ ಸಲ್ಲಿಸಿದರು. ಪೋಷಕರು ತಮ್ಮ ಮಕ್ಕಳಿಗೆ ಚರ್ಚ್‌ನ ಗೋಡೆಗಳ ಮೇಲೆ ಬರೆಯಲಾಗಿದ್ದ, ಸಾಲುಗಳನ್ನು ಓದಿ ಅದರ ಅರ್ಥವನ್ನು ಹೇಳುತ್ತಿದ್ದರು. ವೃದ್ಧರು, ವಯಸ್ಕರು ಮೇಣದ ಬತ್ತಿಯ ಹಚ್ಚಿ ಆ ಬೆಳಕಿನ ನಡುವೆ ಧ್ಯಾನದಲ್ಲಿ ಮಗ್ನರಾಗಿದ್ದರು. ಯುವತಿಯರೂ ಮೆರಿಯಮ್ಮ ಪ್ರತಿಮೆ ಮುಂಭಾಗದಲ್ಲಿ ಹಣತೆ ಹಚ್ಚಿ ಸುಖ, ಶಾಂತಿ ನೆಮ್ಮದಿ ಕರುಣಿಸುವಂತೆ ಪ್ರಾರ್ಥಿಸಿದರು.
ಸಂತಕ್ಲಾಸ್ ಕ್ಯಾಪ್ ಆಕರ್ಷಣೆ: ಪ್ರಾರ್ಥನೆ ಸಲ್ಲಿಸಲು ಸೇಂಟ್ ಫೀಲೊಂಮಿನಾ ಚರ್ಚ್‌ಗೆ ಮಂಗಳವಾರ ರಾತ್ರಿ ಆಗಮಿಸಿದ ಬಹುತೇಕರು ಸಂತಕ್ಲಾಸ್ ಅವರ ಕ್ಯಾಪ್ ಧರಿಸಿ ಸಂಭ್ರಮಿಸಿದರೆ, ಯುವಕ, ಯುವತಿಯರು ಕ್ರಿಸ್‌ಮಸ್ ಟ್ರೀ, ಬೃಹತ್ ಗೋಪುರದ ಎದುರು ನಿಂತು ಸೆಲ್ಫಿ ತೆಗೆದು ಖುಷಿಪಟ್ಟರು.