Advertisement

ಶಿರ್ತಾಡಿಯಲ್ಲಿ ಕೋವಿಡ್ ಜಾಗೃತಿ ಮೂಡಿಸುವ ವಿಶಿಷ್ಟ ನಕ್ಷತ್ರ

10:14 PM Dec 21, 2020 | mahesh |

ಮೂಡುಬಿದಿರೆ: ಏಳು ವರ್ಷಗಳಿಂದ ಕ್ರಿಸ್ಮಸ್‌ ಸಂದರ್ಭ ಶಿರ್ತಾಡಿಯಲ್ಲಿ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ವಿಶಿಷ್ಟ ನಕ್ಷತ್ರಗಳನ್ನು ರೂಪಿಸುತ್ತ ಬಂದಿರುವ ಪ್ರಸನ್ನ ಜೋಯೆಲ್‌ ಸಿಕ್ವೇರ ಮತ್ತವರ ಗೆಳೆಯರಾದ ಯತೀಶ್‌ ಕುಲಾಲ್‌, ನವೀನ್‌ ಶೆಟ್ಟಿ ಈ ಬಾರಿ ಬಿದಿರು, ಬಟ್ಟೆ, ಕೊರೊನಾ ಮಾಸ್ಕ್, ಸ್ಯಾನಿಟೈಸರ್‌ ಬಾಟಲಿಗಳನ್ನು ಬಳಸಿಕೊಂಡು ಕೋವಿಡ್ ಜಾಗೃತಿ ಸಂದೇಶ ನೀಡಲು ಸಜ್ಜಾಗಿದ್ದಾರೆ.

Advertisement

ನಕ್ಷತ್ರ ಸುಮಾರು 13 ಅಡಿ ಎತ್ತರ, 12 ಅಡಿ ಅಗಲವಿದೆ. ಹಂದರ ರೂಪಿಸಲು ಸುಮಾರು 20 ಕಿಲೋಗ್ರಾಂ ಬಿದಿರು, 160 ಅಡಿ ಉದ್ದದ ಬಿಳಿಬಟ್ಟೆ, 400 ಮಾಸ್ಕ್ಗಳು, 5 ಸ್ಯಾನಿಟೈಸರ್‌ ಬಾಟಲಿ, 1,200 ಗುಂಡುಪಿನ್‌ಗಳನ್ನು ಬಳಸಿದ್ದಾರೆ. ಈ ಮೂವರು ಸುಮಾರು 8 ದಿನಗಳ ಪರಿಶ್ರಮದಿಂದ ಈ ನಕ್ಷತ್ರ ತಯಾರಿಸಿದ್ದಾರೆ. ಈ ನಕ್ಷತ್ರದ ನಡುವೆ ಕೊರೊನಾ ವೈರಸ್‌ ಆಕೃತಿ ರಚಿಸಲಾಗಿದೆ. ಈ ನಕ್ಷತ್ರ ಹಗಲಲ್ಲೂ ಮಿಂಚುತ್ತದೆ. ರಾತ್ರಿಯೂ ಬೆಳಕಿನ ವಿಶೇಷ ಸಂಯೋಜನೆಯೊಂದಿಗೆ ಬೆಳಗುತ್ತದೆ.

ಶಿರ್ತಾಡಿಯ ಮೌಂಟ್‌ಕಾರ್ಮೆಲ್‌ ಚರ್ಚ್‌ನ ಆವರಣದಲ್ಲಿರುವ ಬಾದಾಮಿ ಮರಕ್ಕೆ ಈ ನಕ್ಷತ್ರವನ್ನು ನೆಲ ಬಿಟ್ಟು 5 ಅಡಿ ಎತ್ತರದಲ್ಲಿ ತೂಗುಹಾಕಲಾಗಿದೆ. ಈ ಗೆಳೆಯರು ನಕ್ಷತ್ರ ರಚನೆಯ ಮೂಲಕ ಪ್ರತಿ ವರ್ಷ ಧಾರ್ಮಿಕ ಸೌಹಾರ್ದದ ಮಹತ್ವವನ್ನು ಸಾರುತ್ತಾ ಬಂದಿದ್ದಾರೆ. ಈ ಬಾರಿ ಲೋಕಕಂಟಕವಾಗಿ ಪರಿಣಮಿಸಿರುವ ಕೊರೊನಾ ವೈರಸ್‌ ಸೋಂಕಿನ ಬಗ್ಗೆ ತಿಳಿವಳಿಕೆ ನೀಡುವ ನಕ್ಷತ್ರ ರಚನೆಯ ಮೂಲಕ ಲೋಕಕ್ಕೆ ಆರೋಗ್ಯ ಸಂದೇಶವನ್ನು ಸಾರುತ್ತಿದ್ದಾರೆ.

“ಸರ್ವ ಧರ್ಮಗಳ ನಡುವೆ ಸಹಬಾಳ್ವೆ, ಸೌಹಾರ್ದದ ವಾತಾವರಣ ಈ ಜಗತ್ತಿನ ಇಂದಿನ ಅನಿವಾರ್ಯ. ಜಾತಿ ಧರ್ಮ ಗಳಾಚೆ ನಾವೆಲ್ಲರೂ ಮನುಷ್ಯರು ಎಂಬ ಮೂಲತತ್ವದ ಆಧಾರದಲ್ಲಿ ಜತೆಯಾಗಿ ಈ ನಕ್ಷತ್ರ ನಿರ್ಮಿಸಿದ್ದೇವೆ’ ಎಂದು ಸಹವರ್ತಿ ಯತೀಶ್‌ ಕುಲಾಲ್‌ ಶಿರ್ತಾಡಿ ತಿಳಿಸಿದ್ದಾರೆ.

“ಕೊರೊನಾ ಅಪಾಯದ ಬಳಿಕ ನಮ್ಮ ಯೋಚನೆಗಳು ಬದಲಾಗಬೇಕು . ಕ್ರಿಸ್ಮಸ್‌, ದೀಪಾವಳಿ, ರಮ್ಜಾನ್‌ ಹಬ್ಬ ಗಳು ಸಂಭ್ರ ಮಕ್ಕೆ ಕಾರಣವಾಗಬೇಕು ಎಂಬುದೇ ಈ ನಕ್ಷತ್ರ ತಯಾರಿಯ ಉದ್ದೇಶ’ ಎಂದು ಜತೆಗಾರ ನವೀನ್‌ ಶೆಟ್ಟಿ ಶಿರ್ತಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಜನರ ಬದುಕು ಹಸನಾಗಲಿ
ಕೊರೊನಾ ಮನುಷ್ಯರನ್ನು ದೂರ ದೂರ ಇರುವಂತೆ ಮಾಡಿದ್ದರೆ ಶಿರ್ತಾಡಿಯ ಸಹೋದರರು ಜಾತಿ, ಮತ, ಭೇದ ಮರೆತು ಸೌಹಾರ್ದದಿಂದ ರಚಿಸಿರುವ ಈ ವಿಶಿಷ್ಟ ನಕ್ಷತ್ರ ಜನರನ್ನು ಒಗ್ಗೂಡಿಸುವ ಲಕ್ಷಣ ತೋರಿದೆ. ದೂರದ ನಕ್ಷತ್ರದ ಬೆಳಕು ಕೆಳಗಿಳಿದು ಬಂದಿದೆ. ಜನರ ಬದುಕು ಹಸನಾಗಲಿ ಎಂಬ ಆಶಯ ಇಲ್ಲಿದೆ. ಸರ್ವರಿಗೂ ಕ್ರಿಸ್ಮಸ್‌ ಶುಭಾಶಯಗಳು.
-ವಂ| ಹೆರಾಲ್ಡ್‌ ಮಸ್ಕರೇನ್ಹಸ್‌, ಧರ್ಮಗುರುಗಳು, ಶಿರ್ತಾಡಿ ಮೌಂಟ್‌ ಕಾರ್ಮೆಲ್‌ ಚರ್ಚ್‌

ಜಾಗೃತಿಯ ಸಂದೇಶ
ಕೊರೊನಾ ಇನ್ನೂ ಜಗತ್ತಿನಿಂದ ಮರೆಯಾಗಿಲ್ಲ. ಸಾಲು ಸಾಲು ಹಬ್ಬಗಳನ್ನು ಕಳೆದು ಇದೀಗ ಕ್ರಿಸ್ಮಸ್‌ ಸಂಭ್ರಮದಲ್ಲಿದ್ದೇವೆ. ಆದರೆ ಮಾಸ್ಕ್ ಧರಿಸುವುದನ್ನು , ದೈಹಿಕ ಅಂತರ ಕಾಯ್ದುಕೊಳ್ಳವುದನ್ನು ಮರೆಯುತ್ತಿರುವ ಸಮಾಜಕ್ಕೆ ಜಾಗೃತಿಯ ಸಂದೇಶ ನೀಡುವುದು ಈ ಬಾರಿಯ ನಕ್ಷತ್ರದ ಉದ್ದೇಶವಾಗಿದೆ. ಮುಂಜಾಗರೂಕತೆಯಿಂದ ಒಳಿತು, ಮೈಮರೆವಿನಿಂದ ಕೆಡುಕು ಎಂಬ ಸಂದೇಶ ಇಲ್ಲಿದೆ.
-ಪ್ರಸನ್ನ ಜೋಯೆಲ್‌ ಸಿಕ್ವೇರ, ಶಿರ್ತಾಡಿ

Advertisement

Udayavani is now on Telegram. Click here to join our channel and stay updated with the latest news.

Next