Advertisement
1995 – ಮೈಸೂರಿನ ಕಿಟ್ಟಿ ಎಂಬ ಕಾಲೇಜು ಹುಡುಗ, ವಿವಾಹಿತೆಯ ರೇಪ್ ಮತ್ತು ಮರ್ಡರ್ ಕೇಸಿನಲ್ಲಿ ಸಿಕ್ಕಿ ಜೈಲಿಗೆ ಹೋಗುತ್ತಾನೆ.
Related Articles
Advertisement
“ಚೌಕ’ ನಾಲ್ಕು ವಿಭಿನ್ನ ಕಾಲಘಟ್ಟದ, ನಾಲ್ಕು ವಿಭಿನ್ನ ಪರಿಸರದ ಮತ್ತು ನಾಲ್ಕು ವಿಭಿನ್ನ ಯುವಕರ ಕಥೆ. ಇದೊಂದು ದ್ವೇಷದ ಕಥೆ ಎನ್ನುವುದಕ್ಕಿಂತ, ಒಂದೊಳ್ಳೆಯ ಸಂದೇಶ ಮತ್ತು ಉದ್ದೇಶವಿರುವಂತಹ ಕಥೆ ಎನ್ನಬಹುದು. ಅದರಲ್ಲೂ ಇತ್ತೀಚೆಗೆ ಮನುಷ್ಯ, ಮನುಷ್ಯತ್ವವನ್ನು ಕಳೆದುಕೊಂಡು ಕಟುಕನಾಗಿ ವಾಸಿಸುವಂತಹ ಕಾಲಘಟ್ಟದಲ್ಲಿ, ಅವನ ಕಣ್ತೆರೆಸುವ ಒಳ್ಳೆಯ ಪ್ರಯತ್ನ “ಚೌಕ’ ಎಂದರೆ ತಪ್ಪಿಲ್ಲ. ಯಾರಿಗೇನಾದರೂ ಆಗಲೀ, ತಾನೊಬ್ಬ ಚೆನ್ನಾಗಿರಬೇಕು ಎಂಬ ಹಪಹಪಿಸುವ ಮನುಷ್ಯ, ಎಲ್ಲರೂ ಒಂದೇ ಎಂದು ಭಾವಿಸಬೇಕು ಮತ್ತು ಮನುಷ್ಯತ್ವ ಗೆಲ್ಲಬೇಕು ಎಂಬ ಸದುದ್ದೇಶದಿಂದ ಮಾಡಿದ ಚಿತ್ರ ಇದು. ಹಾಗಾಗಿ ಇಂಥದ್ದೊಂದು ಪ್ರಯತ್ನ ಮತ್ತು ಉದ್ದೇಶಕ್ಕೆ ಹ್ಯಾಟ್ಸ್ ಆಫ್ ಎನ್ನಬಹುದು.
ಉದ್ದೇಶವೇನೋ ಒಳ್ಳೆಯದು. ಆದರೆ, ಅದನ್ನು ತೆರೆಗೆ ತರುವ ಪ್ರಯತ್ನದಲ್ಲೇ ಒಂದಿಷ್ಟು ಎಡವಿದ್ದು ಎದ್ದು ಕಾಣುತ್ತದೆ. ಪ್ರಮುಖವಾಗಿ ಚಿತ್ರದ ಸಮಸ್ಯೆ ಇರುವುದು ಅದರ ಲೆಂಥ್‌ನಲ್ಲಿ. ಬಹುಶಃ ಇತ್ತೀಚಿನ ದಿನಗಳಲ್ಲಿ ಜನ ಊಹಿಸಿಕೊಳ್ಳಲಾಗದ ಮತ್ತು ಅಷ್ಟು ಹೊತ್ತು ಕೂರದ ಸುಮಾರು ಮೂರು ಗಂಟೆ ಚಿತ್ರವನ್ನು ಮಾಡಿದ್ದಾರೆ ತರುಣ್ ಸುಧೀರ್. ಮೊದಲಾರ್ಧವೆಲ್ಲಾ ಈ ನಾಲ್ವರು ಹುಡುಗರ ಹಿನ್ನೆಲೆಗೆ ಸೀಮಿತವಾದರೆ, ದ್ವಿತೀಯಾರ್ಧವೆಲ್ಲಾ ಈ ನಾಲ್ವರು ಮುಂದೇನು ಮಾಡುತ್ತಾರೆ ಎಂಬುದನ್ನು ಹೇಳುತ್ತದೆ.
ಹಾಗೆ ನೋಡಿದರೆ, ನಾಲ್ವರು ಜೈಲಿಗೆ ಬರುವುದರಿಂದಲೇ ಚಿತ್ರವನ್ನು ಶುರು ಮಾಡಬಹುದಿತ್ತು. ಏಕೆಂದರೆ, ಮೊದಲಾರ್ಧ ನಡೆಯುವ ಯಾವುದೇ ಘಟನೆಗಳಿಗೆ, ದ್ವಿತೀಯಾರ್ಧದಲ್ಲಿ ಯಾವುದೇ ಪ್ರತಿಕ್ರಿಯೆ ಇಲ್ಲ. ಇನ್ನು ನಾಯಕಿಯರಂತೂ ಪೂರಾ ವೇಸ್ಟು. ಆ ನಾಲ್ವರು ಅಮಾಯಕರು ಎಂದು ತೋರಿಸುವ ಒಂದೇ ಕಾರಣಕ್ಕೆ ನಾಲ್ಕು ವಿಭಿನ್ನ ಕಾಲಘಟ್ಟ ಮತ್ತು ನಾಲ್ಕು ವಿಭಿನ್ನ ಪರಿಸರದ ಕಥೆಗಳನ್ನು ಸೇರಿಸಲಾಗಿದೆ. ಅದನ್ನೆಲ್ಲಾ ಬಿಟ್ಟು ನೇರವಾಗಿ ಕಥೆ ಶುರು ಮಾಡಿದ್ದರೆ ಮತ್ತು ಹೇಳುವುದನ್ನು ಚುಟುಕಾಗಿ ಹೇಳಿದ್ದರೆ, ನಿಜಕ್ಕೂ “ಚೌಕ’ ಒಂದು ಅದ್ಭುತ ಚಿತ್ರವಾಗುತಿತ್ತು.
ಹಾಗಂತ ತೀರಾ ಕಳಪೆ ಎಂದು ಭಾವಿಸಬೇಕಿಲ್ಲ. ತರುಣ್ ಸುಧೀರ್ ಮೊದಲ ಬಾರಿಗೆ ಚಿತ್ರ ನಿರ್ದೇಶಿಸಿದ್ದರೂ ಒಂದು ವಿಭಿನ್ನ ಪ್ರಯತ್ನ ಮತ್ತು ಪ್ರಯೋಗವನ್ನು ಮಾಡಿದ್ದಾರೆ. ನಾಲ್ವರು ಹೀರೋಗಳನ್ನಿಟ್ಟುಕೊಂಡು ಹೊಸ ಸಾಹಸವನ್ನೇ ಮಾಡಿದ್ದಾರೆ. ನಾಲ್ವರಿಗೆ ವಿಭಿನ್ನ ಮ್ಯಾನರಿಸಂ, ಹಿನ್ನೆಲೆ, ಆಸೆಗಳನ್ನು ಕೊಟ್ಟಿದ್ದಾರೆ. ಅವರ ಈ ಸಾಹಸಕ್ಕೆ ಪ್ರೇಮ್, ಪ್ರಜ್ವಲ್, ದಿಗಂತ್ ಮತ್ತು ವಿಜಯ್ ರಾಘವೇಂದ್ರ ಚೆನ್ನಾಗಿ ಕೈ ಜೋಡಿಸಿದ್ದಾರೆ. ಆದರೆ, ಚಿತ್ರ ಮುಗಿದ ನಂತರವೂ ಈ ನಾಲ್ವರಿಗಿಂಥ ಹೆಚ್ಚು ನೆನಪಾಗುವುದು ಕಾಶೀನಾಥ್ ಮತ್ತು ಚಿಕ್ಕಣ್ಣ. ಇದುವರೆಗೂ ಪೆದ್ದನಾಗಿಯೇ ಕಾಣಿಸಿಕೊಂಡಿದ್ದ ಕಾಶೀನಾಥ್‌ಗೆ ಇಲ್ಲಿ ಒಳ್ಳೆಯ ಪಾತ್ರವಿದೆ.
ಅವರು ಅದನ್ನು ಚೆನ್ನಾಗಿ ನಿರ್ವಹಿಸಿದ್ದಾರೆ ಎನ್ನುವುದಕ್ಕಿಂತ ಪಾತ್ರ ಗಟ್ಟಿಯಾಗಿರುವುದರಿಂದ ಅವರು ಗಟ್ಟಿಯಾಗಿ ನೆನಪಿನಲ್ಲುಳಿಯುತ್ತಾರೆ. ನಾಲ್ಕೂ ಕಾಲಘಟದಲ್ಲಿರುವ ಮತ್ತು ಚಿತ್ರದುದ್ದಕ್ಕೂ ಕಾಣಿಸಿಕೊಳ್ಳುವ ನಟ ಎಂದರೆ ಚಿಕ್ಕಣ್ಣ ಮತ್ತು ಅವರು ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಇನ್ನು ನಾಯಕಿಯರ ಪಾತ್ರವೇ ಬೇಕಿಲ್ಲವಾದ್ದರಿಂದ, ಅದನ್ನು ಯಾರು ಮಾಡಿದರೂ ಹೆಚ್ಚು ವ್ಯತ್ಯಾಸವೆನಿಸುವುದಿಲ್ಲ ಮತ್ತು ಐಂದ್ರಿತಾ ರೇ, ಭಾವನಾ ಮೆನನ್, ದೀಪಾ ಸನ್ನಿಧಿ ಮತ್ತು ಪ್ರಿಯಾಮಣಿ ಅವರಿಗೆ ಹೆಚ್ಚು ಕೆಲಸವೂ ಇಲ್ಲ. ಇನ್ನು ದರ್ಶನ್ ಒಂದು ಫೈಟಿಗೆ ಸೀಮಿತವಾಗಿದ್ದಾರೆ ಮತ್ತು ಆ ಫೈಟಿನಲ್ಲಿ ಸಕತ್ತಾಗಿ ಮಿಂಚುತ್ತಾರೆ.
ಇನ್ನು ಒಂದೊಂದು ಟ್ರಾಕ್‌ನ್ನು ಒಬ್ಬಬ್ಬರು ಛಾಯಾಗ್ರಾಹಕರು, ಸಂಗೀತ ನಿರ್ದೇಶಕರಿಂದ ಮಾಡಿಸಿದ ಔಚಿತ್ಯ ಮತ್ತು ಕಾರಣ ಗೊತ್ತಾಗುವುದಿಲ್ಲ. ಛಾಯಾಗ್ರಹಣದಲ್ಲಿ ಅಂತಹ ವಿಶೇಷವೇನೂ ಕಾಣುವುದಿಲ್ಲ. ಇನ್ನು “ಅಪ್ಪಾ ಐ ಲವ್ ಯೂ’ ವಿಪರೀತ ಕಾಡಿದರೆ, “ಅಲ್ಲಾಡುÕ ಅಲ್ಲಾಡು’ ಹಾಡು ಮಜಾ ಕೊಡುತ್ತದೆ. ಸಂಕಲನಕಾರ ಕೆ.ಎಂ. ಪ್ರಕಾಶ್ ಅವರ ತಪ್ಪು ಹುಡುಕುವುದು ಕಷ್ಟ. ಏಕೆಂದರೆ, ಕಥೆ ಮತ್ತು ಚಿತ್ರಕಥೆಯೇ ಸುದೀರ್ಘವಾಗಿರುವುದರಿಂದ, ಪ್ರಕಾಶ್ ಬೇಡದ್ದನ್ನು ಕಟ್ ಮಾಡದೆಯೇ ಇಟ್ಟಿದ್ದಾರೆ ಎಂದು ಹೇಳುವುದು ಕಷ್ಟ.ಒಟ್ಟಾರೆ ಚಿತ್ರ ಹೇಗೇ ಇರಲಿ, ಉದ್ದೇಶಕ್ಕಾಗಿ ಜನ ಚಿತ್ರವನ್ನು ನೋಡಿದರೆ, ದ್ವಾರ ಕೀಶ್ ಅವರ 50ನೇ ನಿರ್ಮಾಣವೂ ಸಾರ್ಥಕವಾಗುತ್ತದೇನೋ. ಚಿತ್ರ: ಚೌಕ
ನಿರ್ದೇಶನ: ತರುಣ್ ಸುಧೀರ್
ನಿರ್ಮಾಣ: ದ್ವಾರಕೀಶ್
ತಾರಾಗಣ: ಪ್ರೇಮ್, ವಿಜಯ್ ರಾಘವೇಂದ್ರ, ದಿಗಂತ್, ಪ್ರಜ್ವಲ್, ಐಂದ್ರಿತಾ ರೇ, ಭಾವನಾ, ಪ್ರಿಯಾಮಣಿ, ದೀಪಾ ಸನ್ನಿಧಿ, ಚಿಕ್ಕಣ್ಣ ಮುಂತಾದವರು * ಚೇತನ್ ನಾಡಿಗೇರ್