Advertisement

ಚೋರ್ಲಾ ಘಾಟ್ : ಭಾರೀ ವಾಹನಗಳಿಗೆ ನಿಷೇಧವಿದ್ದರೂ ನಿಯಮ ಉಲ್ಲಂಘಿಸುತ್ತಿರುವ ವಾಹನ ಚಾಲಕರು

10:17 AM Sep 27, 2022 | Team Udayavani |

ಪಣಜಿ: ಚೋರ್ಲಾ ಘಾಟ್ ಮಾರ್ಗದಲ್ಲಿ ಭಾರಿ ವಾಹನಗಳ ಓಡಾಟಕ್ಕೆ ನಿಷೇಧ ಹೇರಿದ್ದರೂ ಕೂಡ ಚೋರ್ಲಾ ಘಾಟ್ ಮೂಲಕ ಭಾರಿ ವಾಹನಗಳ ಸಂಚಾರ ದಟ್ಟಣೆ ಮುಂದುವರಿದಿದೆ.

Advertisement

ಕಳೆದ ವಾರ ಉತ್ತರ ಗೋವಾ ಜಿಲ್ಲಾಧಿಕಾರಿ ಮಮು ಹಗೆ ಚೋರ್ಲಾ ಘಾಟ್ ಮೂಲಕ ಸಂಚರಿಸುವ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದರು. ಮುಂದಿನ 6 ತಿಂಗಳ ಕಾಲ ಚೋರ್ಲಾ ಘಾಟ್ ಮೂಲಕ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಆದರೆ ಈ ಮಾರ್ಗದಲ್ಲಿ ಭಾರಿ ವಾಹನಗಳ ಓಡಾಟ ಮುಂದುವರೆದಿದೆ. ಚೋರ್ಲಾ ಘಾಟ್ ರಸ್ತೆಯು ಗೋವಾ-ಬೆಳಗಾವಿ ಸಂಪರ್ಕಿಸುವ ಮುಖ್ಯ ಹೆದ್ದಾರಿಯಾಗಿದ್ದು, ಈ ರಸ್ತೆಯಲ್ಲಿ ಪ್ರತಿದಿನ ಭಾರಿ ಸಂಖ್ಯೆಯಲ್ಲಿ ವಾಹನಗಳ ಓಡಾಟ ಮುಂದುವರೆದಿದೆ.

ಗೋವಾದ ಸಾಖಳಿಯಿಂದ ಚೋರ್ಲಾ ಘಾಟ್‍ವರೆಗಿನ ರಸ್ತೆ ಕಿರಿದಾಗಿದ್ದು, ಇಲ್ಲಿಗೆ ಭಾರಿ ವಾಹನಗಳನ್ನು ಬಿಟ್ಟರೆ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಇದಲ್ಲದೆ, ಈ ಮಾರ್ಗದಲ್ಲಿ ಭಾರಿ ವಾಣಿಜ್ಯ ವಾಹನಗಳು ಅಪಘಾತ ಸಂಭವಿಸುವ ಸಾಧ್ಯತೆಗಳ ಬಗ್ಗೆ ಟ್ರಾಫಿಕ್ ಪೊಲೀಸರು ವರದಿ ನೀಡಿದ್ದರು. ಆದ್ದರಿಂದ ಇಲ್ಲಿಂದ ಭಾರಿ ವಾಹನಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. 2023ರ ಮಾರ್ಚ್ 19 ರ ವರೆಗೆ ಈ ಮಾರ್ಗದಲ್ಲಿ ಭಾರಿ ವಾಹನಗಳ ಓಡಾಟಕ್ಕೆ ನಿಷೇಧ ಹೇರಲಾಗಿದೆ.

ಕರ್ನಾಟಕದ ವ್ಯಕ್ತಿ ಅಪಘಾತದಲ್ಲಿ ನಿಧನ..!

ಗೋವಾ-ಬೆಳಗಾವಿ ಮಾರ್ಗದ ಚೋರ್ಲಾ ಘಾಟ್‍ನಲ್ಲಿ ಅಪಘಾತಗಳ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾನುವಾರ ಕುಂಕುಂಬಿ ಚೆಕ್ ಪೋಸ್ಟ್ ಬಳಿ ಸಂಭವಿಸಿದ ಅಪಘಾತದಲ್ಲಿ ಕಾಶಿನಾಥ ಪ್ರಕಾಶ ಗಾವಡೆ (23, ಚಿಗುಲೆ, ಕರ್ನಾಟಕ) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂದೆ ಕುಳಿತಿದ್ದ ಮಹೇಶ ರಾಮಚಂದ್ರ ಗಾವಡೆ (29) ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

Advertisement

ಕಾಶಿನಾಥ್ ಮತ್ತು ಮಹೇಶ್ ಗಾವಡೆ ಇಬ್ಬರೂ ಸೋದರ ಸಂಬಂಧಿಯಾಗಿದ್ದು, ಗೋವಾದ ಹಣಜುಣದಲ್ಲಿರುವ ರೆಸಾರ್ಟ್‍ನಲ್ಲಿ ಕೆಲಸ ಮಾಡುತ್ತಿದ್ದರು. ಗಣೇಶ ಚತುರ್ಥಿಗೆ ಇಬ್ಬರೂ ಊರಿಗೆ ಹೋಗಿದ್ದರು. ಗೋವಾ ಕಡೆಗೆ ಬರುತ್ತಿದ್ದಾಗ ಕುಂಕುಂಬಿ ಚೆಕ್ ಪೋಸ್ಟ್ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಕಾರು ಚಲಾಯಿಸುತ್ತಿದ್ದ ಕಾಶಿನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಗಾಯಗೊಂಡ ಮಹೇಶನನ್ನು ಚಿಕಿತ್ಸೆಗಾಗಿ ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದೇ ವೇಳೆ ಕೆಲವೆಡೆ ರಸ್ತೆಯಲ್ಲಿ ಜಲ್ಲಿಕಲ್ಲು ಹರಡಿರುವುದರಿಂದ ಘಾಟ್‍ಗಳ ರಸ್ತೆಗಳು ಜಾರುತ್ತಿವೆ. ಅಲ್ಲದೇ ಮಳೆಯಿಂದಾಗಿ ಮಂಜು ಬೀಳುತ್ತಿರುವುದರಿಂದ ರಸ್ತೆ ಅಸ್ಪಷ್ಟವಾಗಿ ಕಾಣುತ್ತಿದೆ. ಈ ಹಿಂದೆ ಅಪಾಯಕಾರಿ ಕರ್ವ್‍ನಲ್ಲಿ ಕಾರು-ಟ್ರಕ್ ಅಪಘಾತ ಸಂಭವಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next