ಕನ್ನಡ ಚಿತ್ರರಂಗದಲ್ಲಿ ಸದ್ಯ ಬೇಡಿಕೆಯ ನೃತ್ಯ ನಿರ್ದೇಶಕರಾಗಿ ಬಿಝಿಯಾಗಿರುವ ಭೂಷಣ್ ಈಗ ಹೀರೋ ಆಗಿದ್ದಾರೆ. ಅದು “ರಾಜ ರಾಣಿ ರೋರರ್ ರಾಕೆಟ್’ ಸಿನಿಮಾ ಮೂಲಕ. ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರುವ ಈ ಚಿತ್ರ ಇದೇ 23ರಂದು ತೆರೆಕಾಣುತ್ತಿದೆ.
ಸಿನಿಮಾ ಬಗ್ಗೆ ಮಾತನಾಡುವ ಭೂಷಣ್, “ನೃತ್ಯ ನಿರ್ದೇಶಕನಾಗಿ “ರ್‍ಯಾಂಬೋ-2′ ಚಿತ್ರದ ಮೂಲಕ ನನ್ನ ಜರ್ನಿ ಆರಂಭವಾಯಿತು. ನಂತರ ನಟಸಾರ್ವಭೌಮ, ರಾಬರ್ಟ್, ಬೆಲ್ ಬಾಟಮ್ ನಂತಹ ಸೂಪರ್ ಹಿಟ್ ಚಿತ್ರಗಳಿಗೆ ನೃತ್ಯ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ನಾಯಕನಾಗಬೇಕೆಂಬ ಆಸೆಯಿತ್ತು. ಈ ಚಿತ್ರದ ನಿರ್ದೇಶಕ ಕೆಂಪೇಗೌಡ ಮಾಗಡಿ ಒಳ್ಳೆಯ ಕಥೆ ಹೇಳಿದರು. ರಾಜ ರಾಣಿ ರೋರರ್ ರಾಕೆಟ್ ಎಂದರೆ ನಾಲ್ಕು ಪಾತ್ರಗಳ ಹೆಸರು. ಹಳ್ಳಿಯಲ್ಲಿ ಕೆಲಸ ಮಾಡದೆ ತಿರುಗುತ್ತಿದ್ದ ಹುಡುಗರ ಜೀವನದಲ್ಲಿ ಮುಂದೆ ಏನಾಗುತ್ತದೆ? ಎಂಬುದೇ ಕಥಾ ಹಂದರ. ನೃತ್ಯ ನಿರ್ದೇಶಕ ನಾಯಕನಾಗಿರುವ ಕಾರಣ, ಎಲ್ಲಾ ನೃತ್ಯ ನಿರ್ದೇಶಕರು ನನಗೆ ಸಾಥ್ ನೀಡಿದ್ದಾರೆ’ ಎನ್ನುತ್ತಾರೆ.
ಇದನ್ನೂ ಓದಿ:ದೊಡ್ಡ ಮೊತ್ತಕ್ಕೆ ಮಾರಾಟವಾಯಿತು ʼಪೊನ್ನಿಯಿನ್ ಸೆಲ್ವನ್ʼ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕು
ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಕೆಂಪೇಗೌಡ ಮಾಗಡಿ ಸಹ ಚಿತ್ರದ ಬಗ್ಗೆ ವಿವರಣೆ ನೀಡಿದರು. ನೃತ್ಯ ನಿರ್ದೇಶಕರಾದ ನಾಗೇಂದ್ರ ಪ್ರಸಾದ್ ಮಾಸ್ಟರ್, ಜಗ್ಗು ಮಾಸ್ಟರ್ ಹಾಗೂ ಕಲೈ ಮಾಸ್ಟರ್ ಪತ್ರಿಕಾಗೋಷ್ಠಿಗೆ ಆಗಮಿಸಿ ಭೂಷಣ್ ಹಾಗೂ ತಂಡಕ್ಕೆ ಶುಭ ಕೋರಿದರು. ಭೂಷಣ್ ತಂದೆ – ತಾಯಿ ಸಹ ಆಗಮಿಸಿ, ಮಗನಿಗೆ ಮನಸಾರೆ ಹರಸಿದರು.
ಚಿತ್ರದಲ್ಲಿ ಅಭಿನಯಿಸಿರುವ ಮನೋಜ್ ಹಾಗೂ ಸುಷ್ಮಾ ಪಾತ್ರದ ಬಗ್ಗೆ ಮಾತನಾಡಿದರು. ಭೂಷಣ್ ಅವರಿಗೆ ನಾಯಕಿಯಾಗಿ ಮಾನ್ಯ ಅಭಿನಯಿಸಿದ್ದಾರೆ. ರಣಧೀರ್, ಸಂತೋಷ್ ಹಾಗೂ ಹಿರಿಯ ನೃತ್ಯ ನಿರ್ದೇಶಕ ಮೂಗೂರು ಸುಂದರಂ ಅವರು ಈ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ