Advertisement

ಚೋರಾಡಿ-ಹಾಲಾಡಿ ರಸ್ತೆ ಸಂಪರ್ಕ ಕಡಿತದ ಭೀತಿ: ಆತಂಕದಲ್ಲಿ ಗ್ರಾಮಸ್ಥರು

06:00 AM Sep 28, 2018 | |

ಹಾಲಾಡಿ: ಸೂಕ್ತ ಸಾರಿಗೆ ಸೌಕರ್ಯವಿಲ್ಲದೆ ಸಮಸ್ಯೆ ಎದುರಿಸುತ್ತಿರುವ ಚೋರಾಡಿ ಗ್ರಾಮಸ್ಥರಿಗೆ ಈಗಿರುವ ಸಂಪರ್ಕ ತಪ್ಪುವ ಭೀತಿ ಎದುರಾಗಿದೆ. ಹಾಲಾಡಿಗೆ ಸಂಪರ್ಕ ಕಲ್ಪಿಸುವ ಮುದೂರಿ ತಿರುವಿನಲ್ಲಿ ರಸ್ತೆ ಬದಿಯಲ್ಲಿ ಕುಸಿದಿದ್ದು, ಆತಂಕಕ್ಕೆ ಕಾರಣವಾಗಿದೆ. 

Advertisement

ಹಾಲಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಚೋರಾಡಿಗೆ ಉತ್ತಮವಾದ ಡಾಮರು ರಸ್ತೆಯಿದ್ದರೂ  ಈ ವರೆಗೆ ಬಸ್‌ ವ್ಯವಸ್ಥೆ ಕಲ್ಪಿಸಿಲ್ಲ. ಅದರೊಂದಿಗೆ ಮುದೂರಿ ತಿರುವಿನಲ್ಲಿ ರಸ್ತೆಯ ಬದಿ ಜುಲೈ- ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆಗೆ ಕುಸಿದಿದೆ. ಈಗ ಮಳೆ ಕಡಿಮೆಯಿದ್ದು, ಇದನ್ನು ಕೂಡಲೇ ದುರಸ್ತಿ ಪಡಿಸದಿದ್ದರೆ ಮತ್ತಷ್ಟು ಕುಸಿಯುವುದಲ್ಲದೆ, ಸಂಪರ್ಕವೇ ಕಡಿತಗೊಳ್ಳುವ ಸಂಭವವಿದೆ. ಹಾಲಾಡಿಯಿಂದ ಚೋರಾಡಿ ಮೂಲಕವಾಗಿ ವಂಡಾರುಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಸಾಗಿದರೆ, ಚೇರ್ಕಿ, ಮುದೂರಿ, ಬಾಬಿನಾಡಿ, ಗೋರಾಜೆ, ಕಾಸಾಡಿ ಮೊದಲಾದ ಪ್ರದೇಶಗಳಿಗೂ ಸಂಚರಿಸಬಹುದು.

ಅಪಾಯಕಾರಿ ತಿರುವು
ಮುದೂರಿಯ ಈ ತಿರುವು ಅಪಾಯಕಾರಿಯಾಗಿದೆ. ಚೋರಾಡಿಯ ಜನರಿಗೆ ಕುಂದಾಪುರ, ಉಡುಪಿ, ಬೈಂದೂರು, ಆಗುಂಬೆ, ಸಾಗರ ಕಡೆಗೆ ತೆರಳಬೇಕಾದರೆ ಹಾಲಾಡಿ ಮಾರ್ಗವಾಗಿಯೇ ಹೋಗಬೇಕು. ಆದರೆ ಮುದೂರಿನಲ್ಲಿ ರಸ್ತೆ ಕುಸಿದಿರುವುದರಿಂದ ಸಮಸ್ಯೆ ಎದುರಾಗಿದ್ದು, ಕೂಡಲೇ ಸರಿಪಡಿಸದಿದ್ದರೆ, ಮತ್ತಷ್ಟು ಕುಸಿಯುವ ಸಾಧ್ಯತೆಯೂ ಇದ್ದು, ಸಂಚಾರ ವ್ಯವಸ್ಥೆಯೇ ಕಡಿತಗೊಳ್ಳುವ ಆತಂಕ ಈ ಭಾಗದ ಜನರದ್ದು. 

ಎಚ್ಚರಿಕೆ ಫಲಕ ಅಳವಡಿಕೆ
ವಾಹನ ಸವಾರರು ಜಾಗರೂಕತೆಯಿಂದ ಸಂಚರಿಸಲು “ಅಪಾಯ – ರಸ್ತೆ ಬದಿ ಕುಸಿದಿದೆ’ ಎನ್ನುವ ಎಚ್ಚರಿಕೆ ಫಲಕಗಳನ್ನು ಎರಡೂ ಬದಿಯಲ್ಲಿಯೂ ಹಾಕಲಾಗಿದೆ. 

ಸಂಪರ್ಕ ರಸ್ತೆ
ಹಾಲಾಡಿಯಿಂದ ಮಂದಾರ್ತಿಗೂ ಸಂಪರ್ಕ ಕಲ್ಪಿಸುವ ಹತ್ತಿರದ ಮಾರ್ಗ ಇದಾಗಿದೆ. ಈ ಮಾರ್ಗವಾಗಿ ಹಾಲಾಡಿಯಿಂದ ಚೋರಾಡಿಗೆ 6 ಕಿ.ಮೀ. ಆದರೆ, ವಂಡಾರಿಗೆ 7 ಕಿ.ಮೀ. ಇದ್ದರೆ, ಮಂದಾರ್ತಿಗೆ 15 ಕಿ.ಮೀ. ದೂರವಾಗಲಿದೆ. ಅದಲ್ಲದೆ ಉಡುಪಿ ಹಾಗೂ ಕುಂದಾಪುರ ತಾಲೂಕುಗಳೆರಡನ್ನು ಬೆಸೆಯುವ ಒಂದು ಮಾರ್ಗವು ಇದಾಗಿದೆ. 

Advertisement

ಹೆಚ್ಚುವರಿ ಅನುದಾನಕ್ಕೆ ಬೇಡಿಕೆ
ಜಿ.ಪಂ.ನಿಂದ ಬಂದ 3 ಲಕ್ಷ ರೂ. ಅನ್ನು ಈಗಾಗಲೇ ಹಾಲಾಡಿ ಗ್ರಾ.ಪಂ.ಗೆ ನೀಡಿದ್ದು, ವಿವಿಧ ಕಾಮಗಾರಿಗಳನ್ನು ನಡೆಸಲಾಗಿದೆ. ಕಡಿಮೆ ಅನುದಾನ ಇರುವುದರಿಂದ ಈ ರಸ್ತೆ ದುರಸ್ತಿಗೆ ಶಾಸಕರಿಗೆ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದು, ಅವರು ಮುಖ್ಯಮಂತ್ರಿ ನಿಧಿಯಿಂದ ಒದಗಿಸಲಾಗುವುದು ತಿಳಿಸಿದ್ದಾರೆ. 
– ಸುಪ್ರೀತಾ ಉದಯ ಕುಲಾಲ್‌, ಜಿ.ಪಂ. ಸದಸ್ಯರು

ದುರಸ್ತಿ ಮಾಡಲಿ
ಇದು ಜಿ.ಪಂ. ರಸ್ತೆಯಾಗಿದ್ದು, ಹಾಲಾಡಿ ಗ್ರಾ.ಪಂ.ನಿಂದ ಈಗಾಗಲೇ ಈ ರಸ್ತೆಯ ದುರಸ್ತಿಗೆ ನಿರ್ಣಯ ಮಾಡಿ ಕಳುಹಿಸಲಾಗಿದೆ. ಶಾಸಕರ ಗಮನಕ್ಕೂ ಬಂದಿದೆ. ಈಗಾಗಲೇ ಘನ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ರಸ್ತೆ ಕಡಿತಗೊಂಡರೆ ಈ ಮಾರ್ಗದಲ್ಲಿ ನಿತ್ಯ ಸಂಚರಿಸುವ ಸಾವಿರಾರು ಮಂದಿಗೆ ತೊಂದರೆಯಾಗಲಿದೆ. ಕೂಡಲೇ ದುರಸ್ತಿ ಮಾಡಲಿ. 
– ಅಶೋಕ್‌ ಶೆಟ್ಟಿ ಚೋರಾಡಿ,ಸ್ಥಳೀಯ ಗ್ರಾ.ಪಂ. ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next