Advertisement

ಉತ್ತಮ ಅಭ್ಯರ್ಥಿ ಆಯ್ಕೆ ಮುಖ್ಯ

07:43 AM Mar 17, 2019 | |

ದೇವನಹಳ್ಳಿ: ನ್ಯಾಯಸಮ್ಮತ ಚುನಾವಣೆ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯವಾಗಿದೆ ಎಂದು ತಹಶೀಲ್ದಾರ್‌ ಮಂಜುನಾಥ್‌ ತಿಳಿಸಿದರು. 

Advertisement

ನಗರದ ವಿಜಯಪುರ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಭಾರತ ಸ್ಕೌಟ್ಸ್‌ ಆ್ಯಂಡ್ಸ್‌ ಗೈಡ್ಸ್‌ , ಚುನಾವಣಾ ಆಯೋಗ, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್‌, ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಚುನಾವಣೆ ಹಾಗೂ ಮತದಾನದ ಮಹತ್ವದ ಬಗ್ಗೆ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು. 

ಪ್ರಜಾಪ್ರಭುತ್ವ ಬಲಪಡಿಸಿ: ಭಾರತ ಸ್ಕೌಟ್ಸ್‌ ಆ್ಯಂಡ್ಸ್‌ ಗೈಡ್ಸ್‌ ಉತ್ತಮ ಪ್ರಜೆಗಳನ್ನು ರೂಪಿಸುವ ಸಂಸ್ಥೆಯಾಗಿದೆ. ರಾಷ್ಟ್ರಾಭಿಮಾನ ಬೆಳೆಸುತ್ತದೆ. ಚುನಾವಣೆಯ ಮಹತ್ವವನ್ನು ತಿಳಿಯಬೇಕು. 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾನ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು. ಎಲ್ಲಾ ಮತದಾರರು ಮತದಾನ ಮಾಡಿದಾಗ ಮಾತ್ರ ಚುನಾವಣೆ ಮಹತ್ವ ಪಡೆಯುತ್ತದೆ. ಮತದಾನ ಎಲ್ಲರ ಹಕ್ಕು ಮತ್ತು ಕರ್ತವ್ಯವಾಗಿದೆ. ತಮಗೆ ಇಷ್ಟವಾಗುವ ವ್ಯಕ್ತಿಯನ್ನು ಆಯ್ಕೆ ಮಾಡಿ ಕಳುಹಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಹೇಳಿದರು.

ರಾಷ್ಟ್ರದ ಅಭಿವೃದ್ಧಿಗೆ ಮತದಾನ ಮಾಡಿ: ಉಪನ್ಯಾಸಕ ಅಮಿರ್‌ ಬಾಷಾ ಮಾತನಾಡಿ, ಮತದಾನ ನಮ್ಮೆಲ್ಲರ ಹಕ್ಕು. ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದೆ. ಯುವ ಸಮುದಾಯ ಕಡ್ಡಾಯವಾಗಿ ಮತದಾನ ಮಾಡಬೇಕು. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ನೀಡಿದ್ದಾರೆ. ಚುನಾವಣೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುದೊಡ್ಡ ಹಬ್ಬ. ಪ್ರತಿಯೊಬ್ಬ ಮತದಾರರು ಇದರಲ್ಲಿ ಸಕ್ರಯವಾಗಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕು. ರಾಷ್ಟ್ರದ ಅಭಿವೃದ್ಧಿಗೆ ಮತದಾನ ಮಾಡಬೇಕೆಂದು ತಿಳಿಸಿದರು. 

ಯುವಕರು ರಾಜಕೀಯಕ್ಕೆ ಬನ್ನಿ: ಎಸ್‌ಎಲ್‌ಎಸ್‌ ಶಾಲೆ ಸಂಸ್ಥಾಪಕ ಕಾರ್ಯದರ್ಶಿ ಡಿ.ಎಸ್‌.ಧನಂಜಯ ಮಾತನಾಡಿ, ರಾಷ್ಟ್ರದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕಾದರೆ ಯುವಕರು ರಾಜಕೀಯಕ್ಕೆ ಬರಬೇಕು. ಹಣ ಮತ್ತು ಆಮಿಷಗಳಿಗೆ ಮತವನ್ನು ಮಾರಿಕೊಳ್ಳಬೇಡಿ. ಕಡ್ಡಾಯ ಮತದಾನ ಮಾಡಬೇಕು. ಭ್ರಷ್ಟಾಚಾರ, ಭಯೋತ್ಪಾದನೆ, ಅನರಕ್ಷತೆಯನ್ನು ನಿರ್ಮೂಲನೆ ಮಾಡಬೇಕೆಂದು ಹೇಳಿದರು. 

Advertisement

ನೆರೆಹೊರೆಯವರಿಗೆ ತಿಳಿಹೇಳಿ: ಕಾಲೇಜು ವಿದ್ಯಾರ್ಥಿನಿ ಗಾಯತ್ರಿ ಮಾತನಾಡಿ, ಮತದಾನದ ಹಕ್ಕಿನ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಲು ಚುನಾವಣೆ ಬಂದಿದೆ. ವಿದ್ಯಾರ್ಥಿಗಳು ತಮ್ಮ ನೆರೆಹೊರೆಯವರಿಗೆ ಮತದಾನದ ಬಗ್ಗೆ ತಿಳಿವಳಿಕೆ ನೀಡಬೇಕೆಂದರು. ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಗಾಯತ್ರಿ ಮೊದಲ ಬಹುಮಾನ, ತೃತೀಯ ಬಿ.ಎ ವಿದ್ಯಾರ್ಥಿ ವೆಂಕಟೇಶ್‌ ದ್ವಿತೀಯ ಹಾಗೂ ತೃತೀಯ ಬಿ.ಎ ವಿದ್ಯಾರ್ಥಿ ಹರೀಶ್‌ ತೃತೀಯ ಬಹುಮಾನ ಪಡೆದರು.

ಈ ವೇಳೆ ಜಿಲ್ಲಾ ಭಾರತ ಸ್ಕೌಟ್ಸ್‌ ಆ್ಯಂಡ್ಸ್‌ ಗೈಡ್ಸ್‌ ಆಯುಕ್ತ ಬಿ.ಕೆ.ಶಿವಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಶಿವಶಂಕರಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಿನ್ನಸ್ವಾಮಿ, ತಾಲೂಕು ಗೌರವಾಧ್ಯಕ್ಷ ಮೋಹನ್‌ ಬಾಬು, ತಾಲೂಕು ಕಾರ್ಯದರ್ಶಿ ಸೀತಾರಾಮು, ತಾಲೂಕು ಕಚೇರಿಯ ನರಸಿಂಹಮೂರ್ತಿ, ರವಿಕುಮಾರ್‌ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next