ನನ್ನ ನಂಬು, ಈ ಮನೆಯಲ್ಲಿ ಏನೋ ಇದೆ …ಎಂದು ಆಕೆ ಹೇಳಿದರೂ ಅವನು ನಂಬುವುದಿಲ್ಲ. ಎಲ್ಲೋ ಆಕೆಗೆ ಭ್ರಮೆ ಎಂದು ತನ್ನ ಪಾಡಿಗೆ ತಾನಿರುತ್ತಾನೆ. ಆದರೆ, ಆಕೆ ರಾತ್ರಿ ಮಲಗಿದ್ದಾಗ ಒಬ್ಬಳೇ ನಡೆಯುವುದು, ಕರೆದಾಗ ಲುಕ್ ಕೊಡುವುದು, ವಿಚಿತ್ರವಾಗಿ ಆಡುವುದನ್ನೆಲ್ಲಾ ನೋಡಿದಾಗ ಆಕೆಯ ಮಾತಿನಲ್ಲಿ ಸತ್ಯ ಇರಬಹುದು ಎಂದನಿಸುತ್ತದೆ. ಆದರೆ, ಆ ಮನೆಯಲ್ಲಿ ಏನಿದೆ ಎಂದು ಕಂಡುಹಿಡಿಯುವುದು ಹೇಗೆ ಎಂದು ಒದ್ದಾಡುತ್ತಿದ್ದಾಗ, ಅದೊಂದು ರಾತ್ರಿ ಆಕೆ ಮೊದಲ ಬಾರಿಗೆ ಅವರಿಬ್ಬರಿಗೆ ಕಾಣಿಸಿಕೊಳ್ಳುತ್ತಾಳೆ.
ಅಲ್ಲಿಯವರೆಗೂ ಆ ಮನೆಯಲ್ಲಿ ನಡೆಯುತ್ತಿದ್ದ ವಿಚಿತ್ರ ಘಟನೆಗಳಿಗೆಲ್ಲಾ ಕಾರಣ ಅವಳೇ ಎನ್ನುವುದು ಗೊತ್ತಾಗುತ್ತದೆ. ಇಷ್ಟಕ್ಕೂ ಅವಳು ಯಾರು ಮತ್ತು ಅವಳಾಕೆ ಆ ಮನೆಗೆ ನುಗ್ಗಿ ಅವರಿಬ್ಬರಿಗೆ ಕಾಟ ಕೊಡುತ್ತಿರುತ್ತಾಳೆ ಎನ್ನುವುದು ಗೊತ್ತಾಗಬೇಕಿದ್ದರೆ, “ಚಿಟ್ಟೆ’ ಹಾರುವುದನ್ನು ನೋಡಬೇಕು.
“ಚಿಟ್ಟೆ’ ಒಂದು ಹಾರರ್ ಚಿತ್ರ ಎಂಬುದು ಇಷ್ಟರಲ್ಲಾಗಲೇ ಸ್ಪಷ್ಟ. ಹಾರರ್ ಕಥೆಗಳಲ್ಲಿರುವಂತೆ ಈ ಚಿತ್ರದಲ್ಲೂ ಅದೇ ಮಾದರಿಯ ಕಥೆ ಇದೆ. ಒಂದು ದೊಡ್ಡ ಬಂಗಲೆ ಇದೆ. ಅಲ್ಲಿಗೆ ನವದಂಪತಿ ಶಿಫ್ಟ್ ಆಗುತ್ತಾರೆ. ಅವರು ಆ ಮನೆಗೆ ಹೋದ ನಂತರ ವಿಚಿತ್ರ ಘಟನೆಗಳು ನಡೆಯುತ್ತಿರುತ್ತದೆ. ಉಯ್ನಾಲೆ ತನ್ನಿಂತಾನೆ ತೂಗಾಡುತ್ತಿರುತ್ತದೆ. ಕೀಚೈನ್‌ನಿಂದ ತನ್ನಿಂತಾನೇ ಸಂಗೀತ ಬರುತ್ತಿರುತ್ತದೆ. ನಾಯಕಿಗೆ ಯಾರೋ ತನ್ನನ್ನು ಫಾಲೋ ಮಾಡಿದಂತೆ ಭಾಸವಾಗುತ್ತಿರುತ್ತದೆ. ಹೀಗೆ ಹಾರರ್ ಚಿತ್ರಗಳ ಸಿದ್ಧಸೂತ್ರಗಳು ಇಲ್ಲೂ ಮುಂದುವರೆಯುತ್ತದೆ.
ಆದರೆ, ವಿಶೇಷತೆ ಎಂದರೆ, ಸಾಮಾನ್ಯವಾಗಿ ದೆವ್ವಗಳು ಎಲ್ಲಿ ಬೇಕಾದರೂ ಅಲ್ಲಿ ಹಾಜರಿ ಹಾಕಿ, ತಮಗೆ ತೊಂದರೆ ಕೊಟ್ಟವರನ್ನು ಕೊಲ್ಲುವುದು ಎಲ್ಲಾ ಚಿತ್ರಗಳಲ್ಲೂ ಇರುತ್ತದೆ. ಆದರೆ, ಇಲ್ಲಿ ದೆವ್ವವೇ ಮನುಷ್ಯರಿಗೆ ಒಂದಿಷ್ಟು ಟಾಸ್ಕ್ಗಳನ್ನು ಕೊಡುತ್ತದೆ. ಅದಕ್ಕೆ ಕಾರಣವೂ ಇದೆ. ಇನ್ನೊಬ್ಬರು ಮಾಡಿರುವ ತಪ್ಪು ಅವರಿಗೆ ಚೆನ್ನಾಗಿ ಅರ್ಥವಾಗಬೇಕು ಮತ್ತು ತನ್ನ ನೋವು ಸಹ ಗೊತ್ತಾಗಬೇಕು ಎಂಬ ಕಾರಣಕ್ಕೆ, ದೆವ್ವವೇ ಜವಾಬ್ದಾರಿಯೊಂದನ್ನು ಹೊರಿಸುತ್ತದೆ. ಈ ವಿಷಯ ಒಂದು ಸ್ವಲ್ಪ ವಿಶೇಷ ಎನ್ನುವುದು ಬಿಟ್ಟರೆ, “ಚಿಟ್ಟೆ’ಯನ್ನು ಮಿಕ್ಕ ಹಾರರ್ ಚಿತ್ರಗಳ ಸಾಲಿಗೆ ಸೇರಿಸಲಡ್ಡಿಯಿಲ್ಲ.
ಇನ್ನು ನಿರೂಪಣೆಯ ವಿಷಯದಲ್ಲೂ “ಚಿಟ್ಟೆ’ ಒಂದಿಷ್ಟು ಮೇಲೆ ಹಾರುತ್ತದೆ ಎಮದನಿಸುವುದಿಲ್ಲ. ಮೊದಲಾರ್ಧವೆಲ್ಲಾ ಕಾಮಿಡಿ, ಹಾಡುಗಳು ಮತ್ತು ಭಯಬೀಳಿಸುವ ದೃಶ್ಯಗಳಿಗೆ ಸೀಮಿತವಾಗುವ ಚಿತ್ರ, ದ್ವಿತೀಯಾರ್ಧದಲ್ಲಿ ತೆರೆದುಕೊಳ್ಳುತ್ತದೆ. ಅಲ್ಲಿಯವರೆಗೂ ಪ್ರೇಕ್ಷಕ ಕಾಯಲೇಬೇಕು. ಇಂಟರ್‌ವೆಲ್ ನಂತರ ಚಿತ್ರ ಸ್ವಲ್ಪ ಚುರುಕಾಗುತ್ತದೆ. ಅಲ್ಲೂ ಒಂದಿಷ್ಟು ಟ್ವಿಸ್ಟ್‌ಗಳು, ಗೊಂದಲಗಳೊಂದಿಗೆ ಚಿತ್ರ ಮುಂದುವರೆಯುತ್ತದೆ. ಕೊನೆಗೆ ಇಷ್ಟೇನಾ ಎನಿಸುವಲ್ಲಿಗೆ ಚಿತ್ರ ಮುಗಿಯುತ್ತದೆ. ಚಿತ್ರದಲ್ಲಿ ಗಮನ ಸೆಳೆಯುವ ಅಂಶಗಳಲ್ಲಿ ಪ್ರಸನ್ನ ಅವರ ಸಂಗೀತ, ದೀಪಿಕಾ ಅವರ ಅಭಿನಯ, ವಿಶ್ವಜಿತ್ ರಾವ್ ಅವರ ಛಾಯಾಗ್ರಹಣ, ಕೆಜೆಟನ್ ಡಯಾಸ್ ಅವರ ಹಿನ್ನೆಲೆ ಸಂಗೀತವನ್ನು ಹೆಸರಿಸಬಹುದು. ಅದರಲ್ಲೂ “ಕುಲವಧು’ ಖ್ಯಾತಿಯ ದೀಪಿಕಾ ದ್ವಿತೀಯಾರ್ಧದಲ್ಲಿ ಬಂದರೂ, ಪ್ರೇಕ್ಷಕರನ್ನು ತಮ್ಮ ಅಭಿನಯದಿಂದ ಹಿಡಿದಿಡುತ್ತಾರೆ. ಮಿಕ್ಕಂತೆ ಯಶಸ್, ಹರ್ಷಿಕಾ ತಮ್ಮ ಕೆಲಸವನ್ನು ನೀಟ್ ಆಗಿ ಮಾಡಿದ್ದಾರೆ.
ಚಿತ್ರ: ಚಿಟ್ಟೆ
ನಿರ್ಮಾಣ-ನಿರ್ದೇಶನ: ಎಂ.ಎಲ್. ಪ್ರಸನ್ನ
ತಾರಾಗಣ: ಯಶಸ್ ಸೂರ್ಯ, ಹರ್ಷಿಕಾ ಪೂಣಚ್ಛ
, ದೀಪಿಕಾ, ಗಿರಿರಾಜ್, ನಾಗೇಶ್ ಮುಂತಾದವರು
– ಚೇತನ್ ನಾಡಿಗೇರ್