Advertisement

ಚಿಟ್ಟೆ ಚಾಟ್‌

10:55 AM Jun 27, 2018 | |

ಇದುವರೆಗೂ ಹಲವು ಹಾರರ್‌ ಚಿತ್ರಗಳಲ್ಲಿ ಹರ್ಷಿಕಾಗೆ ನಟಿಸುವುದಕ್ಕೆ ಅವಕಾಶಗಳು ಸಿಕ್ಕಿದ್ದವಂತೆ. ಆದರೆ, ಯಾವೊಂದು ಚಿತ್ರವನ್ನೂ ಹರ್ಷಿಕಾ ಒಪ್ಪಿರಲಿಲ್ಲ. ಕಾರಣ, ಭಯ. ದೆವ್ವ ಎಂದರೆ ಭಯ ಅನ್ನೋ ಕಾರಣಕ್ಕೆ ಹಾರರ್‌ ಚಿತ್ರಗಳಿಂದ ದೂರವಿದ್ದರಂತೆ ಹರ್ಷಿಕಾ. ಆದರೆ, “ಚಿಟ್ಟೆ’ಯಲ್ಲಿ ವಿಕಾರ ಮುಖಗಳಿಲ್ಲ ಅಂತ ಎಲ್ಲರೂ ಹೇಳಿದರಂತೆ. ಆದಕಾರಣ ಅವರು ಒಪ್ಪಿದ್ದಾರೆ. ಚಿತ್ರೀಕರಣವೆಲ್ಲಾ ಮುಗಿದು, ಡಬ್ಬಿಂಗ್‌ ಮಾಡುವ ಸಂದರ್ಭದಲ್ಲಿ ಚಿತ್ರ ಎಷ್ಟು ಭಯಾನಕವಾಗಿದೆ ಎಂದು ಅವರಿಗೆ ಅರಿವಾಗಿದೆ.

Advertisement

“ಡಬ್ಬಿಂಗ್‌ ಮಾಡುವಾಗಿ ಕಿರುಚಿ ಹೊರಬಂದೆ. ಕೆಲವು ಶಾಟ್‌ಗಳು ಭಯ ಆಗುತ್ತೆ’ ಎನ್ನುತ್ತಾರೆ ಹರ್ಷಿಕಾ.ಹಾಗಾದರೆ, “ಚಿಟ್ಟೆ’ ಚಿತ್ರದಲ್ಲಿ ಅವರು ದೆವ್ವವಾಗಿ ಕಾಣಿಸಿಕೊಂಡಿದ್ದಾರಾ? ನೇರವಾಗಿ ಉತ್ತರಿಸುವುದಿಲ್ಲ ಅವರು. “ಇಲ್ಲಿ ನನ್ನದು ಹೌಸ್‌ವೈಫ್ ಪಾತ್ರ. ಮಧ್ಯದಲ್ಲಿ ಒಂದು ಪಾತ್ರ ಬಂದು ನಮ್ಮನ್ನ ಡಿಸ್ಟರ್ಬ್ ಮಾಡುತ್ತದೆ. ಯಾವ ರೀತಿ ಆವರಿಸಿಕೊಳ್ಳುತ್ತೆ ಅನ್ನೋದು ಕಥೆ. ಅಲ್ಲಿಯವರೆಗೂ ಬಬ್ಲಿಯಾಗಿರುತ್ತೀನಿ. ಆವರಿಸಿಕೊಂಡಾಗ ಏನಾಗುತ್ತದೆ ಎಂಬುದು ಚಿತ್ರದ ಕಥೆ’ ಎನ್ನುತ್ತಾರೆ ಹರ್ಷಿಕಾ.

ಮಿಕ್ಕವರೆಲ್ಲಾ ಕಳೆದೇ ಹೋಗಿದ್ದಾರೆ: ಇನ್ನು ಇದುವರೆಗೂ ಯಾವ ಚಿತ್ರಕ್ಕೂ ಮಾಡದ ಪ್ರಚಾರವನ್ನು ಅವರು ಈ ಚಿತ್ರಕ್ಕೆ ಮಾಡಿದ್ದಾರಂತೆ. ಮಾಲ್‌ಗ‌ಳು, ಬಸ್‌ ಸ್ಟಾಂಡ್‌ಗಳು ಹೀಗೆ ಎಲ್ಲೆಂದರಲ್ಲಿ ಅವರು ಸುತ್ತಿ ಪ್ರಚಾರ ಮಾಡಿದ್ದಾರೆ. “ಸಾಕಷ್ಟು ಕಡೆ ಹೋಗಿ ಪ್ರಮೋಟ್‌ ಮಾಡಿ ಬಂದಿದ್ದೀನಿ. ಎಲ್ಲರೂ ಹರ್ಷಿಕಾ ಅಂತ ಗುರುತಿಸುತ್ತಾರೆ. ನನಗೋಸ್ಕರ ಅಷ್ಟೊಂದು ಜನ ಸೇರ್ತಾರೆ, ನನಗೂ ಅಭಿಮಾನಿಗಳು ಇದ್ದಾರೆ, ಸೆಲ್ಫಿ ತೆಗಿಸಿಕೊಳ್ಳೋಕೆ ಬರ್ತಾರೆ ಅನ್ನೋದು ಬಹಳ ಖುಷಿ ಕೊಡುತ್ತದೆ’ ಎನ್ನುತ್ತಾರೆ ಹರ್ಷಿಕಾ.

ಅಷ್ಟೇ ಅಲ್ಲ, 10 ವರ್ಷಗಳ ಈ ಪಯಣದಲ್ಲಿ ಇವೆಲ್ಲಾ ಮರೆಯದ ಅನುಭವ ಎನ್ನುವುದು ಅವರ ಅಭಿಪ್ರಾಯ. “ನಾನು 15 ವರ್ಷದವಳಿದ್ದಾಗ ಮೊದಲ ಚಿತ್ರ “ಪಿಯುಸಿ’ ಮಾಡಿದೆ. ಈ ಅಕ್ಟೋಬರ್‌ 2ಕ್ಕೆ ಆ ಚಿತ್ರ ಬಿಡುಗಡೆಯಾಗಿ 10 ವರ್ಷ ಆಗುತ್ತದೆ. ಈ ದಶಕದಲ್ಲಿ ಅದೆಷ್ಟೋ ಜನ ನಾಯಕಿಯರು ಬಂದರು. 2008ರಲ್ಲಿ ಬಂದ ಹೀರೋಯಿನ್‌ಗಳ ಪೈಕಿ ನಾನು, ರಾಧಿಕಾ ಪಂಡಿತ್‌ ಮಾತ್ರ ಉಳಿದಿದ್ದೇವೆ. ಮಿಕ್ಕವರೆಲ್ಲಾ ಕಳೆದೇ ಹೋಗಿದ್ದಾರೆ’ ಎಂದು ನಗುತ್ತಾರೆ ಅವರು.

ಕ್ಯೂಬಿಕಲ್‌ಗ‌ಳ ಮಧ್ಯೆ ಇರೋಕೆ ಇಷ್ಟ ಇಲ್ಲ: ಬಹುಶಃ ಓದು ಮುಗಿಸಿ, ಯಾವುದಾದರೂ ಕಂಪೆನಿಗೆ ಸೇರಿದ್ದರೆ ಇಷ್ಟೊಂದು ಖುಷಿಯಾಗಿರುತ್ತಿರಲಿಲ್ಲ ಎನ್ನುವುದು ಅವರ ಅಭಿಪ್ರಾಯ. “ಒಂದು ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದೆ. ಒಂದು ವಾರ ಕೆಲಸ ಮಾಡಿದರೆ ಹೆಚ್ಚು. ಸಂಬಳ ಚೆನ್ನಾಗಿತ್ತು. ಆದರೆ, ನಿಜಕ್ಕೂ ನಾಲ್ಕು ಗೋಡೆ ಮಧ್ಯೆ ಕುಳಿತು ಕೆಲಸ ಮಾಡೋಕೆ ಆಗ್ತಿರಲಿಲ್ಲ. ನಾನಿಲ್ಲೇನು ಮಾಡ್ತಿದ್ದೀನಿ ಅಂತ ನನಗೆ ಯಾವಾಗಲೂ ಅನಿಸೋದು. ನನಗೆ ಕ್ಯಾಮೆರಾ ಮುಂದೆ ಇರೋಕೆ ಇಷ್ಟ. ಕ್ಯೂಬಿಕಲ್‌ಗ‌ಳ ಮಧ್ಯೆ ಇರೋಕೆ ನಿಜವಾಗಲೂ ಇಷ್ಟ ಇಲ್ಲ’ ಎನ್ನುತ್ತಾರೆ ಹರ್ಷಿಕಾ.

Advertisement

ಸ್ಟಾರ್‌ಗಳ ಜೊತೆಗೆ ನಾಯಕಿಯಾಗಿ ನಟಿಸಬೇಕು: ಹರ್ಷಿಕಾಗೆ ಒಂದು ಸಣ್ಣ ಬೇಸರ ಇದೆ. ಅದು ದೊಡ್ಡ ಸ್ಟಾರ್‌ಗಳಿಗೆ ನಾಯಕಿಯಾಗಿ ನಟಿಸುವುದಕ್ಕೆ ಸಾಧ್ಯವಾಗಲಿಲ್ಲ ಅಂತ. “ಒಳ್ಳೆಯ ಕಥೆಗಳು ಬಂದವು. ಪಾತ್ರಕ್ಕೆ ತಕ್ಕ ಹಾಗೆ ತಂಗಿ ಪಾತ್ರಗಳಲ್ಲಿ ಕಾಣಿಸಿಕೊಮಡೆ. ಅದಕ್ಕೆ ಪ್ರಶಸ್ತಿಗಳೂ ಬಂದವು. ಅದರಿಂದ ಆಚೆ ಬಂದು ಸ್ಟಾರ್‌ಗಳ ಜೊತೆಗೆ ನಾಯಕಿಯಾಗಿ ನಟಿಸಬೇಕು ಅಂತ ಆಸೆ ಇದೆ. ನಂಗಿನ್ನೂ ವಯಸ್ಸಿದೆ. ಸಮಯ ಇದೆ.

ಯಾವಾಗ ಸ್ಟಾರ್‌ಗಳ ಜೊತೆಗೆ ನಾಯಕಿಯಾಗಿ ನಟಿಸುವ ಅವಕಾಶ ಸಿಗುತ್ತದೋ ನೋಡಬೇಕು’ ಎನ್ನುತ್ತಾರೆ ಅವರು. ಇನ್ನು ಕನ್ನಡದಲ್ಲಿ ಅವರಿಗೆ ವಕಾಶಗಳು ಬರುತ್ತಿವೆಯಂತೆ. ಕಳೆದ ವಾರ ಎಂಟು ಕಥೆಗಳನ್ನು ಕೇಳಿದ್ದೂ ಆಗಿದೆಯಂತೆ. ಆದರೆ, ಒಂದು ಅದ್ಭುತವಾದ ಅವಕಾಶಕ್ಕಾಗಿ ಅವರು ಕಾಯುತ್ತಿದ್ದಾರಂತೆ. “ಮಲಯಾಳಂನಲ್ಲಿ ಒಂದು ಒಳ್ಳೆಯ ಪಾತ್ರ ಸಿಕ್ಕಿದೆ. ತುಂಬಾ ಒಳ್ಳೆಯ ಕಥೆ ಮತ್ತು ಪಾತ್ರ ಅದು. ಒಪ್ಪುವುದಾ, ಬಿಡುವುದಾ ಗೊತ್ತಿಲ್ಲ.

ಇನ್ನು ದುಲ್ಕರ್‌ ಸಲ್ಮಾನ್‌ ಅವರ ಜೊತೆಗೆ ತಮಿಳು ಚಿತ್ರದಲ್ಲೂ ನಟಿಸುತ್ತಿದ್ದೀನಿ’ ಎಂದು ಹೇಳಿಕೊಳ್ಳುತ್ತಾರೆ ಹರ್ಷಿಕಾ. ಹೀರೋಯಿನ್‌ ಆಗೋದು ಸುಲಭವಲ್ಲ, ತುಮಭಾ ಖರ್ಚಾಗುತ್ತದೆ ಎನ್ನುವ ಅವರು, “ಹೀರೋಯಿನ್‌ಗಳಾಗೋದು ಸುಲಭ ಮೇಂಟೇನ್‌ ಮಾಡೋದು ಕಷ್ಟ. ತುಂಬಾ ಖರ್ಚಾಗತ್ತೆ. ಡಸ್ಟರ್‌ ಹಳೇದಾಯ್ತು, ಅಪ್ಪಂಗೆ ಕೊಟ್ಟುಬಿಟ್ಟೆ. ಈಗ ಫಾಚೂನರ್‌ ತಗೊಂಡೆ. ಒಳ್ಳೆ ಬಟ್ಟೆ, ಮನೆ, ಲೈಫ್ಸ್ಟೈಲ್‌ ಅಂತ ಬಹಳ ಖರ್ಚಾಗುತ್ತದೆ’ ಎಂದು ಒಪ್ಪಿಕೊಳ್ಳುತ್ತಾರೆ ಹರ್ಷಿಕಾ.

Advertisement

Udayavani is now on Telegram. Click here to join our channel and stay updated with the latest news.

Next